ಬಿಜೆಪಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲ

ದಾವಣಗೆರೆ:

      ಬಿಜೆಪಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲ. ಹೀಗಾಗಿಯೇ ಕರ್ನಾಟಕದಲ್ಲಿ ಒಂದೇ ಒಂದು ಟಿಕೆಟ್ ಹಿಂದುಳಿದ ವರ್ಗಗಳಿಗೆ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

       ನಗರದ ಎಸ್‍ಕೆಪಿ ರಸ್ತೆಯ ಮಾರ್ಕಂಡೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬುಧವಾರ ಲೋಕಸಭಾ ಚುನಾವಣೆ ಪ್ರಯುಕ್ತ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿರುವ ಬಿಜೆಪಿ ಕರ್ನಾಟಕದಲ್ಲಿ ಒಂದೇ ಒಂದು ಟಿಕೆಟ್ ಅನ್ನು ಸಹ ಹಿಂದುಳಿದ ವರ್ಗಗಳಿಗೆ ನೀಡಿಲ್ಲ. ಹಾಗಿದ್ದರೆ, ಬಿಜೆಪಿ ಯಾರ ಪರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು 8 ಕ್ಷೇತ್ರಗಳಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬರೀ ಘೋಷಣೆಯಲ್ಲಿ ಸಬ್‍ಕಿ ಸಾತ್ ಸಬಕಿ ವಿಕಾಸ್ ಎನ್ನುವುದರಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ಚೌಕೀದಾರ್ ಅಲ್ಲ ಪಾಲುದಾರ:

      1 ಲಕ್ಷ ಕೋಟಿ ಹಣವನ್ನು ಕೊಳ್ಳೆಹೊಡೆದು, ಕೆಲ ಉದ್ಯಮಿಗಳು ದೇಶ ಬಿಟ್ಟು ಹೋಗಿದ್ದಾಗ ಚೌಕೀದಾರ್ ಎಲ್ಲಿಗೆ ಹೋಗಿದ್ದರು? ಹೀಗೆ ಬ್ಯಾಂಕುಗಳ ಹಣ ಲಪಟಾಯಿಸಿ ದೇಶ ಬಿಟ್ಟಿರುವ ನೀರವ್ ಮೋದಿ, ಲಲಿತ್ ಮೋದಿ ಮೇಹುಲ್ ಚೋಕ್ಸಿ ಇವರೆಲ್ಲರೂ ಮೋದಿಯ ಸ್ನೇಹಿತರೇ ಆಗಿದ್ದು, ಇವರೆಲ್ಲರ ಅಕ್ರಮದಲ್ಲಿ ಪ್ರಧಾನಿ ಭಾಗಿಯಾಗಿದ್ದಾರೆ. ಹೀಗಾಗಿ ಮೋದಿ ಚೌಕೀದಾರ್ ಅಲ್ಲ, ಪಾಲುದಾರ ಎಂದು ಪ್ರಧಾನಿಗಳ ವಿರುದ್ದ ವಾಗ್ದಾಳಿ ನಡೆಸಿದರು.

56 ಇಂಚು ಎದೆ ಬೇಕಾಗಿಲ್ಲ:

      ನಮ್ಮ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಬಡ ಕುಟುಂಬಳಿಗೆ ಮಾಸಿಕ 6 ಸಾವಿರ ರೂ.ಗಳಂತೆ, ವರ್ಷಕ್ಕೆ 72 ಸಾವಿರ ನೀಡುವ ಮೂಲಕ ಬಡತನಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದಾರೆ. ಇಂತಹ ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಘೋಷಿಸಬೇಕಾದರೆ, ಜನಪರ ಕಾಳಜಿ ಒಂದಿದ್ದರೆ ಸಾಕು. ಇದಕ್ಕೆ 56 ಇಂಚುಗಳ ಎದೆಗಾರಿಕೆ ಬೇಕಾಗಿಲ್ಲ. ನೂರು ಇಂಚು ಎದೆ ಇದ್ದರೂ ಒಳಗೆ ಹೃದಯವೇ ಇಲ್ಲದಿದ್ದರೇ ಏನು ಪ್ರಯೋಜನ ಎಂದು ಮಾರ್ಮಿಕವಾಗಿ ನುಡಿದರು.

        ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು, ಬಿಜೆಪಿಯ ಸಂಸದರ ವರೆಗೆ ಯಾರೊಬ್ಬರೂ ತಾವು ಐದು ಮುಂಚೆ ಚೆನ್ನಾಗಿರಲಿಲ್ಲವೇ?:

        ವರ್ಷಗಳಲ್ಲಿ ಕೈಗೊಂಡಿರುವ ಜನಪರ ಕಾರ್ಯಕ್ರಮಗಳನ್ನು ತೋರಿಸಿ ಯಾರು ಸಹ ಮತ ಯಾಚಿಸುತ್ತಿಲ್ಲ. ಬದಲಿಗೆ ಮೋದಿ ಮುಖ ನೋಡಿ ವೋಟು ಹಾಕಿ ಎಂಬುದಾಗಿ ಕೇಳುತ್ತಿದ್ದಾರೆ. ಏಕೆ ಮೋದಿ ಅಧಿಕಾರಕ್ಕೆ ಬರುವ ಮುನ್ನ ಭಾರತ ಚೆನ್ನಾಗಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು.

ಪಾಕ್‍ಗೆ ಹೋಗಬೇಕೇ?:

         ದೇಶದ ಸಂರಕ್ಷಣೆಯನ್ನು ದುರ್ಬಲಗೊಳಿಸಿರುವ ನರೇಂದ್ರ ಮೋದಿ, ನಮ್ಮ ದೇಶದ ಜನರನ್ನು, ನಮ್ಮವರ ವಿರುದ್ಧವೇ ಎತ್ತಿ ಕಟ್ಟುವ ಮೂಲಕ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಬಿಜೆಪಿ ಮತ ಹಾಕುವವರು ಮಾತ್ರ ದೇಶಭಕ್ತರು. ಇನ್ನುಳಿದವರು ದೇಶ ವಿರೋಧಿಗಳು ಎನ್ನುತ್ತಿದ್ದಾರೆ. ಹಾಗಿದ್ದರೆ, 2014ರ ಚುನಾವಣೆಯಲ್ಲಿ ಶೇ.70 ರಷ್ಟು ಮತದಾರರು ಮೋದಿ ಹಾಗೂ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ. ಅವರಲ್ಲಾ ಪಾಕಿಸ್ತಾನಕ್ಕೆ ಹೋಗಬೇಕೇ ಎಂದು ಖಾರವಾಗಿ ಪ್ರಶ್ನಿಸಿದರು.

498 ಯೋಧರ ಹತ್ಯೆ:

         ಯುಪಿಎ ಆಡಳಿತ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಯುವುದರ ವರೆಗೆ ಪರಿಸ್ಥಿತಿ ಸುಧಾರಣೆಯಾಗಿತ್ತು. ಅಲ್ಲಿ ಉಗ್ರರ ಉಪಟಳ ಕಡಿಮೆಯಾಗಿತ್ತು. ಆದರೆ, ಮೋದಿ ಆಡಳಿತದ ಐದು ವರ್ಷದಲ್ಲಿಯೇ ಕಾಶ್ಮೀರದಲ್ಲಿ ಅರಾಜಕತೆ ಸೃಷ್ಟಿಯಾಗಿ, ಭಯೋತ್ಪಾದಕರ ಸಂಖ್ಯೆ ಹೆಚ್ಚಾಗಿದೆ. ಉಗ್ರರು 498 ಜನ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸೈನಿಕರ ಹತ್ಯೆ ನಡೆದಿರುವುದು ಇದೇ ಮೊದಲು ಎಂದು ಆಪಾದಿಸಿದರು.

ಬಡವರಿಗೆ ಮೋದಿ ಕೊಡುಗೇ ಏನು?:

       ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪಕ್ಷವಾಗಿದ್ದು, ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕೆಂಬ ಸಮತಾವಾದದ ಆಶಯವನ್ನು ಹೊಂದಿರುವ ಪಕ್ಷವಾಗಿದೆ. ಇಂದು ತಿಳುವಳಿಕೆ ಇಲ್ಲದ ಯುವಕರು ಮೋದಿ, ಮೋದಿ ಎನ್ನುತ್ತಿರಬಹುದು. ಆದರೆ, ಇವರಿಗೆಲ್ಲಾ ಮತದಾನದ ಹಕ್ಕು ನೀಡಿದ್ದು ರಾಜೀವ್‍ಗಾಂಧಿ, ಇಂದು ದೇಶ ಮಾಹಿತಿ ತಂತ್ರಜ್ಞಾನದಲ್ಲಿ ಮುಂದುವರೆಯಲು ಕಾರಣವಾಗಿರುವುದು ರಾಜೀವ್ ಗಾಂಧಿಯವರ ಕೊಡುಗೆ ಅಪಾರವಾಗಿದೆ.

         ಮನಮೋಹನ್‍ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ದೇಶದ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಿತ್ತು. ಅಲ್ಲದೇ, ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಪಾರದರ್ಶಕ ಆಡಳಿತಕ್ಕೆ ನಾಂದಿ ಹಾಡಿತ್ತು. ಹೀಗೆ ಮೋದಿ ಸರ್ಕಾರ ಸಾಮಾನ್ಯ ಜನರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದ ಅವರು, ಮೋದಿ ಕಳೆದ ಚುನಾವಣೆಯಲ್ಲಿ ನೀಡಿದ್ದ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, 15 ಲಕ್ಷ ಖಾತೆಗೆ ಜಮೆ ಮಾಡುವುದು ಯಾವುದರ ಬಗ್ಗೆಯೂ ಚರ್ಚೆ ಮಾಡದೇ, ಏರ್‍ಸ್ಟ್ರೈಕ್ ಬಗ್ಗೆ ಮಾತ್ರ ಪ್ರಸ್ತಾಪ ಮಾಡುತ್ತಿದ್ದಾರೆಂದು ಆರೋಪಿಸಿದರು.

          ನಮ್ಮ ಅಭ್ಯರ್ಥಿಯ ಆಯ್ಕೆ ವಿಳಂಬವಾದ ಕಾರಣ ಚುನಾವಣೆಗೆ ಕಾಲಾವಕಾಶ ಕಡಿಮೆ ಇದೆ. ಹೀಗಾಗಿ ಎಲ್ಲಾ ಭಾರವನ್ನು ಅಭ್ಯರ್ಥಿಯ ಮೇಲೆಯೇ ಹಾಕಬೇಡಿ, ನಾವೇ ಅಭ್ಯರ್ಥಿಗಳೆಂದು ತಿಳಿದು, ವಾರ್ಡ್, ಬೂತ್‍ಗಳಿಗೆ ಹೋಗಿ ನಮ್ಮ ಸಾಧನೆಗಳನ್ನು ತಿಳಿಸುವ ಮೂಲಕ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಗೆಲುವಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

        ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಜಿಎಸ್‍ಟಿ, ನೋಟು ಅಮಾನೀಕರಣದ ಮೂಲಕ ಜನಸಾಮಾನ್ಯರನ್ನು ಪಾಪದ ಕೂಪಕ್ಕೆ ತಳ್ಳಿದ್ದಾರೆ ಎಂದ ಅವರು, ಮೋದಿ ಹಿಟ್ಲರ್ ಸಂಸ್ಕøತಿ ಪಾಲಿಸುತ್ತಿದ್ದು, ಹಿಟ್ಲರ್‍ರನ್ನೇ ಮೀರಿಸುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

       ರಾಜ್ಯದಲ್ಲಿ ಮೈತ್ರಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನಪರ ಖಾಳಜಿ ಮೆರೆದಿದ್ದು, ಜೆಡಿಎಸ್, ಕಮ್ಯೂನಿಷ್ಟ್ ಬೆಂಬಲದಿಂದ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲು ನಮ್ಮ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಅವರನ್ನು ಆರಿಸಿ ತರಬೇಕೆಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ, ಉಸ್ತುವಾರಿ ಸಮಿತಿಯ ಬಲ್ಕೀಶ್ ಬಾನು ಮಾತನಾಡಿದರು.

        ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ದಕ್ಷಿಣ ವಲಯ ಮುಖಂಡ ಅಯೂಬ್ ಪೈಲ್ವಾನ್, ಕೆಪಿಸಿಸ ಕಾರ್ಯದರ್ಶಿ ಡಿ.ಬಸವರಾಜ್, ಮೈತ್ರಿ ಪಕ್ಷಗಳ ಮುಖಂಡರಾದ ಸೈಯದ್ ಸೈಫುಲ್ಲಾ, ಕೆಂಗೋ ಹನುಮಂತಪ್ಪ, ಗಣೇಶ್ ದಾಸಕರಿಯಪ್ಪ, ಅನಿಷ್ ಪಾಷಾ, ಎಂ.ಟಿ.ಸುಭಾಷ್, ಎಂ.ಆನಂದ್, ಸಾಧಿಕ್ ಪೈಲ್ವಾನ್, ಬಿ.ಹೆಚ್.ವೀರಭದ್ರಪ್ಪ, ಟಿ.ಬಸವರಾಜ್, ನಸೀರ್ ಅಹ್ಮದ್, ಸಿಪಿಐ ಮುಖಂಡರಾದ ಆವರೆಗೆರೆ ಚಂದ್ರು, ಆನಂದರಾಜ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap