ಕುಣಿಗಲ್
ವಿಶೇಷ ವರದಿ: ಎಂ.ಡಿ. ಮೋಹನ್
ಐತಿಹಾಸಿಕ ಹಿನ್ನೆಲೆಯುಳ್ಳ ನಾಗಿನಿ ನದಿಯ ನಾಮಫಲಕ ಬಿದ್ದು ತಿಂಗಳುಗಳೇ ಆದರು ಕೇಳುವರಿಲ್ಲದಂತಾಗಿದೆ. ಇನ್ನೂ ಆ ಬೃಹತ್ ಸೇತುವೆಯ ಇಕ್ಕೆಲಗಳಲ್ಲಿ ತಡೆಗೋಡೆಗಳಿಗೆ ಹಸಿರಿನ ಬಳ್ಳಿ ಮುಳ್ಳಿನ ಗಿಡಗಳು ಬೆಳೆದು ಪೊದೆಯಾಗಿ ಚಾಲಕರಿಗೆ ಸೇತುವೆಯೇ ಎಂದು ಗೋಚರಿಸದಂತಾಗುತ್ತಿದ್ದು ಅಪಘಾತ ವಲಯವಾಗಿ ಮಾರ್ಪಟ್ಟಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಕಂಡೂ ಕಾಣದಂತಿರುವುದು ನಾಗರಿಕರ ಆಕ್ರೋಶಕ್ಕೆ ಎಡೆ ಮಾಡಿದೆ.
ಪಟ್ಟಣದ ಸಮೀಪ ಇರುವ ಹಳೆ ರಾಷ್ಟ್ರೀಯ ಹೆದ್ದಾರಿ ಬಿಳಿದೇವಾಲಯ-ಬೋರಲಿಂಗನಪಾಳ್ಯ ಹತ್ತಿರ ಹಾದು ಹೋಗಿರುವ ನಾಗಿನಿ ನದಿಗೆ ಅಡ್ಡಲಾಗಿ ಒಂದು ಸೇತುವೆಯನ್ನು ನಿರ್ಮಿಸಿದ್ದು ಸೇತುವೆ ಪಕ್ಕದಲ್ಲಿ ನಾಗಿನಿ ನದಿ ಎಂಬ ನಾಮಫಲಕ ಹಾಕಲಾಗಿತ್ತು. ಆದರೆ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಅದು ಕೆಳಗೆ ಬಿದ್ದು ತಿಂಗಳುಗಳೇ ಕಳೆದು ಹೋಗಿದ್ದು ನೋಡುಗರ ಕಣ್ಣಿಗೆ ಅಸಹ್ಯ ಮೂಡಿಸುವಂತಾಗಿದೆ.
ತಾಲ್ಲೂಕಿನ ಇತಿಹಾಸ ಹೇಳುವ ನಾಗಿನಿ ನದಿಯ ಪಾತ್ರ ಕ್ಷೇತ್ರದ ಜನತೆಗೆ ಬಹುಮುಖ್ಯ. ಸಾವಿರಾರು ರೈತ ಕುಟುಂಬಗಳಿಗೆ ಅನ್ನ ನೀಡುವ ತಾಯಿ ಎಂದೆಲ್ಲಾ ನಂಬಿ ಬದುಕುತ್ತಿರುವ ಜನರ ಆಸೆಗೆ ಧಕ್ಕೆ ತಂದಂತಾಗಿದೆ. ಅಂತಹ ಇತಿಹಾಸ ಸಾರುವ ನಾಗಿನಿ ನದಿಯ ಹೆಸರಿನ ನಾಮಫಲಕ ಬಿದ್ದು ಹೋಗಿರುವುದು ಒಂದು ರೀತಿ ಅವಮಾನವೇ ಸರಿ ಎಂದು ತಾಲ್ಲೂಕಿನ ವಿವಿಧ ಕನ್ನಡಪರ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಹಾಗೂ ಹಿರಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ನೂತನ ನಾಮಫಲಕವನ್ನು ಹಾಕಿ ಇತಿಹಾಸ ಸಾರುವ ನದಿಯ ಹೆಸರಿಗೆ ಆಗುವ ಅವಮಾನವನ್ನ ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಸೇತುವೆಯ ಮೇಲೆ ಹಸಿರು ಬಳ್ಳಿಯ ಪೊದೆ ನಿರ್ಮಾಣ ಅಪಘಾತ ವಲಯವಾಗಿದೆ : ಬೆಂಗಳೂರು-ಮಂಗಳೂರು ಕೂಡಿಸುವ ಮುಖ್ಯ ರಸ್ತೆ ಇದಾಗಿರುವುದರಿಂದ ನಿತ್ಯ ಬರೀ ಪಟ್ಟಣದಲ್ಲಿ ಸಾವಿರಾರು ಬಸ್, ಕಾರು ಸೇರಿದಂತೆ ವಿವಿಧ ಸರಕಿನ ಲಾರಿಗಳು ಈ ಮಾರ್ಗವಾಗಿ ಹೋಗುತ್ತಿವೆ. ಈ ವಲಯದಲ್ಲಿ ಸೇತುವೆಯ ಎರಡೂ ಕಡೆ ಹಸಿರು ಬಳ್ಳಿ ಹಾಗೂ ಮುಳ್ಳಿನ ಪೊದೆಗಳು ಬೆಳೆದು ನಿಂತಿರುವುದರಿಂದ ಹೊರ ನಾಡಿನ ಚಾಲಕರುಗಳಿಗೆ ಈ ರಸ್ತೆಯಲ್ಲಿ ಅಳವಡಿಸಲಾದ ಸೇತುವೆ ಕಾಣದಂತೆ ಈ ಹಸಿರು ಗಿಡಗಳು ತಡೆಗೋಡೆಯ ಮೇಲೆ ಬೆಳೆದು ನಿಂತಿವೆ.
ಆದ್ದರಿಂದ ಚಾಲಕರುಗಳಿಗೆ ಎರಡೂ ಬದಿಯಲ್ಲಿ ತಡೆಗಲ್ಲು ಕಾಣುವುದಿಲ್ಲ. ಅಂತಹ ಸಂದರ್ಭದಲ್ಲಿ ಅಪಘಾತಗಳಾಗುವ ಸಂಭವವೇ ಹೆಚ್ಚು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮುಳ್ಳು ಪೊದೆಯ ಬೇಲಿ ಹಾಗೂ ಹಸಿರು ಬಳ್ಳಿ ಬೆಳೆದು ನಿಂತಿದ್ದು ವಾಹನ ಚಾಲಕರಿಗೆ ಸೇತುವೆ ಎಂದು ಗುರುತು ಹಚ್ಚುವುದು ಕಷ್ಟಕರವಾಗಿ ಅಪಘಾತ ವಲಯವಾಗಿ ಮಾರ್ಪಟ್ಟಿದೆ.
ಅಲ್ಲದೆ ಇಕ್ಕೆಲಗಳಲ್ಲಿ ಹಾಕಿರುವ ಸಿಮೆಂಟ್ ಕಾಂಕ್ರಿಟ್ ಹೊಡೆದು ಹೋಗುತ್ತಿದೆ. ನಿತ್ಯ ಅಧಿಕಾರಿಗಳಿಗೆ ಕಾಣುವ ಈ ಸ್ಥಳವೇ ಇಂತಹ ದುಸ್ಥಿತಿಗೆ ಬಂದಿದ್ದರೂ ಸಹ ಸಂಬಂಧಪಟ್ಟ ಶಾಸಕರಾಗಲಿ ಅಧಿಕಾರಿಗಳಾಗಲಿ ಇತ್ತ ಗಮನಹರಿಸದಿರುವುದು ನಾಗರಿಕರ ಹಾಗೂ ವಾಹನ ಚಾಲಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನಾದರೂ ನಿತ್ಯ ಸಂಚರಿಸುವ ಈ ಮುಖ್ಯ ರಸ್ತೆಯನ್ನಾದರೂ ಕಣ್ ತೆರೆದು ನೋಡಿ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ