ಹುಳಿಯಾರು:
ಹುಳಿಯಾರಿನ ಇಂದಿರಾನಗರದ 4 ನೇ ವಾರ್ಡ್‍ನಲ್ಲಿ ಕಡಿತಗೊಳಿಸಿರುವ ಬೀದಿ ನಲ್ಲಿಗೆ ಸಂಪರ್ಕವನ್ನು ಪುನಃ ಕೊಟ್ಟು ಬಡವರಿಗೆ ನೆರವಾಗುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಇಲ್ಲಿನ ನೀರಿನ ಸಮಸ್ಯೆ ಮತ್ತು ಇಲ್ಲಿನ ನಿವಾಸಿಗಳ ಆರ್ಥಿಕ ಕಷ್ಟವನ್ನು ಮನಗಂಡ ಅಂದಿನ ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಕೊಳವೆ ಬಾವಿ ಕೊರೆಸಿ ಕಿರು ನೀರು ಸರಬರಾಜು ವ್ಯವಸ್ಥೆ ಮಾಡಿದ್ದರು. ಬೀದಿಗೊಂದರಂತೆ ಮೂರ್ನಲ್ಕು ಕಡೆ ಬೀದಿ ನಲ್ಲಿ ಹಾಕಿಕೊಟ್ಟು ಬಡವರ ನೀರಿನ ಸಮಸ್ಯೆ ಪರಿಹರಿಸಿದ್ದರು ಎಂದು ಶ್ಲಾಘಿಸಿದ್ದಾರೆ.
ನಿರ್ವಹಣೆಯ ಹೊಣೆಯನ್ನು ಮಾತ್ರ ಪಂಚಾಯ್ತಿಗೆ ಹಸ್ತಾಂತರಿಸಿದ್ದು ಇಲ್ಲಿಯವರೆವಿಗೆ ಯಾವುದೇ ತೊಂದರೆಯಿಲ್ಲದೆ ಸಮರ್ಪಕವಾಗಿ ಇಲ್ಲಿನ ನಿವಾಸಿಗಳಿಗೆ ನೀರು ಪೂರೈಸಲಾಗುತ್ತಿತ್ತು. ಆದರೆ ಈಗ ಏಕಾಏಕಿ ಪಪಂ ಸಿಬ್ಬಂಧಿಗಳು ಬಂದು ಬೀದಿ ನಲ್ಲಿ ಸಂಪರ್ಕ ಕಡಿತಗೊಳಿಸಿ ಮನೆಮನೆಗೆ ನಲ್ಲಿ ಹಾಕಿಸಿಕೊಳ್ಳಿ, ಒಂದು ಮನೆಗೆ ನಲ್ಲಿ ಸಂಪರ್ಕಕ್ಕೆ 2 ಸಾವಿರ ರೂ. ಪಾವತಿಸುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದರು ಆರೋಪಿಸಿದ್ದಾರೆ.
ಇಲ್ಲಿರುವ ನಿವಾಸಿಗಳಲ್ಲಿ ಬಹುಪಾಲು ಕೂಲಿನಾಲಿ ಮಾಡಿ ಜೀವನ ನಡೆಸುತ್ತಿರುವ ಬಡತನ ಹಿನ್ನೆಲೆಯವರಾಗಿದ್ದೇವೆ. ನಾವು ಸಂಸಾರ ನಡೆಸುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ಏಕಾಏಕಿ 2 ಸಾವಿರ ರೂ. ಕೊಡಿ ಎನ್ನುವುದು. ನಲ್ಲಿ ನೀರಿಗೆ ಮಾಸಿಕ ಇಂತಿಷ್ಟು ಹಣ ಕಟ್ಟಬೇಕು ಎನ್ನುವುದು ಮತ್ತೊಷ್ಟು ಆರ್ಥಿಕ ಸಂಕಷ್ಟಕ್ಕೆ ದೂಕಿದಂತ್ತಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಕೊಳವೆಬಾವಿಯದು ಉಪ್ಪು ನೀರಾಗಿದ್ದು ಬಟ್ಟೆ, ಪಾತ್ರೆ ಮತ್ತು ಶೌಚಕ್ಕೆ ಮಾತ್ರ ಬಳಸುತ್ತಿದ್ದು ಕುಡಿಯಲು ಮತ್ತು ಸ್ನಾನಕ್ಕೆ ಹಣ ಕೊಟ್ಟು ಟ್ಯಾಂಕರ್ ನೀರು ಖರೀಧಿಸುತ್ತಿದ್ದೇವೆ. ಅಂತಹದರಲ್ಲಿ ಈ ಉಪ್ಪು ನೀರಿಗೆ ಹಣ ಕೊಟ್ಟು ನಲ್ಲಿಗೆ ಹಾಕಿಸಿಕೊಳ್ಳಿ ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಇಲ್ಲಿನ ನಿವಾಸಿಗಳು ಎಂದಿನಂತೆ ಬೀದಿ ನಲ್ಲಿಗೆ ಸಂಪರ್ಕ ಕೊಟ್ಟು ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಪಪಂ ಮುಂದೆ ಬಂದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ