ಚಿಕ್ಕನಾಯಕನಹಳ್ಳಿ
ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಬಾರಿಯೂ ನಮಗೆ ಬರವೇ ಆವರಿಸಿಕೊಂಡಿದೆ, ಈ ವರ್ಷವೂ ಮುಂಗಾರು ಕೈ ಕೊಟ್ಟಿತು, ಹಿಂಗಾರು ಮಳೆಗೆ ಕಾಯುತ್ತಿದ್ದೇನೆ, ನನ್ನ 35ವರ್ಷದ ರೈತ ಜೀವನದ ಅನುಭವದಲ್ಲಿ ಪ್ರತಿ ವರ್ಷ 30ರಿಂದ 40ಚೀಲ ರಾಗಿ ಬೆಳೆಯುತ್ತಿದ್ದೆ, ಕಳೆದ ಐದಾರು ವರ್ಷಗಳಿಂದ ಅಂತಹ ಬೆಳೆ ಈವರೆವಿಗೂ ಕಂಡಿಲ್ಲ, ಮಳೆ ಬಂದರೆ ಮಾತ್ರ ನಮಗೆ ಬೆಳೆ ಇಲ್ಲವಾದರೆ ದೇವರೇ ಗತಿ!.
ಈಗೇಂದು ತಾಲ್ಲೂಕಿನ ಕುರುಬರಹಳ್ಳಿ ಹನುಮಂತರಾಜು ಬರದ ಛಾಯೆ ಬಗ್ಗೆ ಎಳೆಎಳೆಯಾಗಿ ಹೇಳಿದರು. ಈ ಮಾತು ಕೇವಲ ಒಬ್ಬ ರೈತನದ್ದಲ್ಲ ತಾಲ್ಲೂಕಿನಲ್ಲಿ ಮಳೆ ಆಧಾರಿತ ಕೃಷಿಯನ್ನೇ ನಂಬಿಕೊಂಡಿರುವ ರೈತರ ಬದುಕಿನ ದುಸ್ತರ.
ಮುಂಗಾರಿನಲ್ಲಿ ಹೆಸರುಕಾಳು, ತಗರಿಕಾಳು, ಉದ್ದಿನಕಾಳು ಹಾಕಿದ್ದೆವು, ಅವುಗಳು ಕೈಕೊಟ್ಟವು, ಒಂದು ಕಾಳೂ ಮನೆಗೆ ತೆಗೆದುಕೊಂಡು ಹೋಗಲಿಲ್ಲ, ಕಳೆದ ನಾಲ್ಕು ವರ್ಷಗಳ ಹಿಂದೆ ಐದಾರು ಚೀಲ ಹೆಸರು, ಉದ್ದು ಬೆಳೆದಿದ್ದೆವು, ಆದರೆ ಈ ಬಾರಿ ಮಳೆಯಿಲ್ಲದೆ ಯಾವುದನ್ನೂ ಬೆಳೆಯಲು ಸಾಧ್ಯವಾಗಿಲ್ಲ, ಈಗಾಗಲೇ 2ಬೋರ್ ಕೊರೆಸಿದ್ದು, ಅವುಗಳಲ್ಲೂ ಒಂದು ಹನಿ ನೀರು ಸಿಗಲಿಲ್ಲ. ಈಗ ಮುಂಗಾರು ಮುಗಿಯಿತು, ಪ್ರಸಕ್ತವಾಗಿ ರಾಗಿ ಬೆಳೆಗೆ ನಾಟಿ ಮಾಡುತ್ತಿದ್ದೇವೆ, ಈಗಲಾದರೂ ಮಳೆ ಬಂದರೆ ನಾವು ಸ್ವಲ್ಪ ಮಟ್ಟಗೆ ಸುಧಾರಿಸಿಕೊಳ್ಳಬಹುದು.
ಏಪ್ರಿಲ್-ಮೇ ತಿಂಗಳಲ್ಲಿ ಎಂದೂ ದಾಖಲಾದ ಬಿಸಿಲಿನ ತಾಪಮಾನದಿಂದ ಬಸವಳಿದಿದ್ದ ಅನ್ನದಾತನಿಗೆ ಮುಂಗಾರಿನ ಬೆಳೆಕಾಳುಗಳು ನೆಲಕ್ಕೆ ಭಿತ್ತಲಾಗದಂತಹ ಸ್ಥಿತಿಯಿಂದಾಗಿ ರೈತ ಕೈಚೆಲ್ಲಿ ಕೂತಿದ್ದ, ಜೂನ್ ತಿಂಗಳಿನಲ್ಲಿಯೂ ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ನಡೆಯದಂತಾಗಿತ್ತು, ತಾಲ್ಲೂಕಿನ ಪ್ರಮುಖ ಬೆಳೆಗಳಲ್ಲೊಂದಾದ ರಾಗಿಯಾದರೂ ದೊರಕಲಿ ಎಂಬ ನಿರೀಕ್ಷೆಯಲ್ಲಿ ಕೆಲವು ರೈತರು ಉಳುಮೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಲೇ ಬೀಜಕ್ಕಾಗಿ ಗೊಬ್ಬರದ ಅಂಗಡಿಗಳಿಗೆ, ಕೃಷಿ ಇಲಾಖೆಗೆ ತೆರಳುತ್ತಿದ್ದಾರೆ.
ಕೃಷಿ ಇಲಾಖೆಯಿಂದ ದೊರಕುವ ಸೌಲಭ್ಯಗಳ ಮಾಹಿತಿಯೇ ನಮಗೆ ದೊರಕುತ್ತಿಲ್ಲ, ನಾವು ಕೃಷಿ ಕೆಲಸಕ್ಕಾಗಿ ಮುಂಜಾನೆ 6ಗಂಟೆಗೆ ಹೊಲದ ಕಡೆಗೆ ಬರುತ್ತೇವೆ, ತಿಂಡಿ, ಊಟವನ್ನು ಮನೆಯವರು ಇಲ್ಲಿಗೆ ತರುತ್ತಾರೆ, ಕೆಲಸ ಮುಗಿದು ಮನೆಗೆ ಹೋಗುವ ವೇಳೆಗೆ ಸಂಜೆಯಾಗಿರುತ್ತದೆ, ಪ್ರತಿದಿನ ಇದೇ ರೀತಿ ಇರುತ್ತದೆ ನಮ್ಮ ದಿನಚರಿ. ಈ ವೇಳೆ ಸರ್ಕಾರದಿಂದ ದೊರಕುವ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವುದಾಗಲಿ, ಆ ಬಗ್ಗೆ ಮಾಹಿತಿಯಾಗಲಿ ನಮಗೆ ಸರಿಯಾದ ಸಮಯಕ್ಕೆ ತಿಳಿಯುತ್ತಿಲ್ಲ ಎನ್ನುತ್ತಾರೆ ಬೆನಕನಕಟ್ಟೆ ಕೃಷ್ಣಪ್ಪ.
2019-20ನೇ ಸಾಲಿನಲ್ಲಿ ತಾಲ್ಲೂಕಿನಾದ್ಯಂತ 4500ಹೆಕ್ಟೇರ್ ಹೆಸರುಕಾಳು ಬಿತ್ತುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ, ಆದರೆ 545ಹೆಕ್ಟೇರ್ನಲ್ಲಿ ಮಾತ್ರ ಬೆಳೆಯಾಗಿದೆ. ಅಂದರೆ ಶೇ.12.1%ರಷ್ಟು ಮಾತ್ರ ಬೆಳೆಯಾಗಿದೆ. ಹೆಸರುಕಾಳು ಉತ್ತಮವಾದ ಫಸಲು ದೊರಕಲಿಲ್ಲ ಅದೇ ರೀತಿ ಅಲಸಂದೆ ಬೆಳೆಯೂ 850ಹೆಕ್ಟೇರ್ಗೆ 170ಹೆಕ್ಟೇರ್ ಬೆಳೆಯಾಗಿದೆ.
ತಾಲ್ಲೂಕಿನ ವಾರ್ಷಿಕ ವಾಡಿಕೆ ಮಳೆ 623.ಮಿ.ಮೀ ಇದ್ದು, ಈವರೆವಿಗೆ 201 ಮಿ.ಮೀ. ಮಳೆಯಾಗಿದೆ. ಜುಲೈ ಮಾಹೆವರೆಗೆ ವಾಡಿಕೆ ಮಳೆ 61.0ಮಿ.ಮಿ ಗೆ ವಾಸ್ತವವಾಗಿ ಬಿದ್ದ ಮಳೆ 9.ಮಿ.ಮೀ. ಆಗಿದೆ.ಮುಂಗಾರು ಹಂಗಾಮಿನಲ್ಲಿ 39922 ಹೆಕ್ಟೇರ್ಗೆ ಬಿತ್ತನೆಯಗಬೇಕಿತ್ತು ಆದರೆ ಆಗಿರುವುದು 832 ಹೆಕ್ಟೇರ್ (ಶೇ.2.084%) ಬಿತ್ತನೆಯಾಗಿದೆ. ಬಿತ್ತನೆಯಾದ ಬೆಳೆಗಳಲ್ಲಿ ಮುಂಗಾರು ಬೆಳೆಗಳಾದ ಉದ್ದು, ಹೆಸರು, ಅಲಸಂದೆ ಬೆಳೆಗಳು ಸಕಾಲದಲ್ಲಿ ಮಳೆಬಾರದೆ ಬೆಳವಣಿಗೆ ಕುಂಠಿತವಾಗಿದೆ ಹಾಗೂ ಬಿತ್ತನೆಯಾದ ಬೆಳೆಯು ಪೂರ್ಣ ಪ್ರಮಾಣದಲ್ಲಿ ಬಾಡಿಹೋಗಿದೆ ಎಂದು ಕೃಷಿ ಇಲಾಖೆ ಸಹ ವರದಿ ನೀಡಿದೆ.
ಬಿತ್ತನೆ ಪ್ರದೇಶ
ತಾಲ್ಲೂಕಿನ ಒಟ್ಟು ಭೌಗೋಳಿಕ ವಿಸ್ತೀರ್ಣ 110933 ಹೆಕ್ಟೇರ್ಗಳಿಷ್ಠಿದ್ದು ಕೃಷಿಗೆ ಸಾಗುವಳಿ ಮಾಡಲು ಯೋಗ್ಯವಾದ ವಿಸ್ತೀರ್ಣ 63827 ಹೆಕ್ಟೇಗಳಿಷ್ಠಿರುತ್ತದೆ, ಇದರಲ್ಲಿ ಸಾಮಾನ್ಯ ಬಿತ್ತನೆ ಕ್ಷೇತ್ರ 52422 ಹೆಕ್ಟೇರ್ಗಳಷ್ಟು ಕೃಷಿ ಬೆಳೆಗಳು ಆವರಿಸಿದೆ, ತಾಲ್ಲೂಕಿನಾದ್ಯಂತ ಶೇಕಡ 90%ರಷ್ಟು ಭಾಗ ರೈತರು ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿರುತ್ತಾರೆ.
ತಾಲ್ಲೂಕಿನಲ್ಲಿ ಏಕದಳ ಬೆಳೆಗಳಾದ ಭತ್ತ, ರಾಗಿ, ಜೋಳ, ಮೇವಿನ ಜೋಳ ಮತ್ತು ಸಿರಿಧಾನ್ಯ ಹಾಗೂ ದ್ವಿದಳ ಬೆಳೆಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ ಹಾಗೂ ಎಣ್ಣೆಕಾಳು ಬೆಳೆಯಾದ ನೆಲಗಡಲೆ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚಳ್ಳು, ಸಾಸುವೆ ಮತ್ತು ವಾಣಿಜ್ಯ ಬೆಳೆಯಾದ ಹತ್ತಿ ಬೆಳೆಯಲಾಗುತ್ತಿದ್ದು ತಾಲ್ಲೂಕಿನ ಪ್ರಮುಖ ಬೆಳೆಗಳಾಗಿ ರಾಗಿ, ಹೆಸರು, ತೊಗರಿ, ಅವರೆ, ಬೆಳೆಯಲಾಗುತ್ತದೆ.