ದಾವಣಗೆರೆ
ವಿದ್ಯಾರ್ಥಿಗಳು ಪದವಿ ಓದಿಗೆ ಸೀಮಿತರಾಗದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಹುದ್ದೆಗೆ ಏರಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಕಾಲೇಜಿನ 2018-19ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಬಿಎ, ಬಿಎಸ್ಸಿ ಶಿಕ್ಷಣ ಪಡೆದರೆ ಸಾಲದು. ಬದಲಿಗೆ ಕೆಎಎಸ್, ಐಎಎಸ್, ಐಪಿಎಸ್ ಮಾಡುವ ಬಗ್ಗೆಯೂ ಗಮನ ಹರಿಸಿ, ಉನ್ನತ ಹುದ್ದಗೆ ಏರಬೇಕೆಂದು ಸಲಹೆ ನೀಡಿದರು.
ಕೆಪಿಎಸ್ಸಿ, ಯುಪಿಎಸ್ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಮ್ಮಂಥವರಿಂದ ಆಗುವುದಿಲ್ಲ ಎಂಬ ಕೀಳರಿಮೆ ಸರಿಯಲ್ಲ. ಬಡತನದಿಂದ ಬಂದ ವಿದ್ಯಾರ್ಥಿಗಳೇ ಪ್ರಸ್ತುತ ಚೆನ್ನಾಗಿ ಓದಿ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ನೀವೂ ಸಹ ಜೀವನದಲ್ಲಿ ಸಾಧನೆ ಮಾಡುವ ಗುರಿ ಹೊಂದಬೇಕೆಂದು ಕಿವಿಮಾತು ಹೇಳಿದರು.
ಓದುವ ವಯಸ್ಸಿನಲ್ಲಿ ಸರಿಯಾಗಿ ಓದುವ ಮೂಲಕ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಬೇಕು. ಇದರಿಂದ ಓದಿದ ಕಾಲೇಜಿಗೂ ಕೀರ್ತಿ ಬರುತ್ತದೆ. ಹಿಂದೆಲ್ಲಾ ಓದಲು ಇಷ್ಟೊಂದು ಸವಲತ್ತುಗಳು ಇರಲಿಲ್ಲ. ಆದರೆ, ಈಗ ಸಾಕಷ್ಟು ಸೌಲಭ್ಯಗಳು ಸಿಗುತ್ತಿದ್ದು, ಅವುಗಳ ಸದುಪಯೋಗ ಪಡೆದಕೊಳ್ಳುವ ಮೂಲಕ ಚೆನ್ನಾಗಿ ಓದಬೇಕೆಂದು ಹೇಳಿದರು.
ಮುಂಬರುವ ಪರೀಕ್ಷೆ ಫಲಿತಾಂಶದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಇಡೀ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಳ್ಳಬೇಕು. ಇಲ್ಲಿನ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ರ್ಯಾಂಕ್ ಗಳಿಸುವ ಮೂಲಕ ಕಾಲೇಜಿಗೂ, ಪೋಷಕರಿಗೂ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಸಮಾರೋಪ ನುಡಿಗಳನ್ನಾಡಿದ ದಾವಣಗೆರೆ ವಿವಿಯ ಪರೀಕ್ಷಾಂಗ ಕುಲಸಚಿವ ಡಾ.ಬಸವರಾಜ ಬಣಕಾರ್, ಜೀವನದಲ್ಲಿ ಇಟ್ಟಿರುವ ಗುರಿ ತಲುಪಬೇಕಾದರೆ ವ್ಯಾಯಾಮ, ಮನಸ್ಸು, ಮಾತಿನ ಮೇಲೆ ನಿಯಂತ್ರಣ ಮತ್ತು ಆಲೋಚನಾ ಶಕ್ತಿ ಈ ನಾಲ್ಕು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ದಿನಾಲೂ ಬೆಳಗ್ಗೆ ಕನಿಷ್ಟ 30-45 ನಿಮಿಷ ವ್ಯಾಯಾಮ ಮಾಡಬೇಕು. ದೇಹ ಸದೃಢವಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಆಗ ಜೀವನದಲ್ಲಿ ಸಾಧನೆ ಮಾಡಲು ಸಹ ಸಾಧ್ಯವಾಗಲಿದೆ ಎಂದರು.
ವಿದ್ಯಾರ್ಥಿಗಳು ಮನಸ್ಸನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಯಶಸ್ಸಿನ ಮೂಲ ಮಂತ್ರಗಳಲ್ಲಿ ಆಲೋಚನಾ ಶಕ್ತಿ ತುಂಬಾ ಮುಖ್ಯವಾಗಿದೆ. ಆಲೋಚನೆ ಮಾಡುವುದರಲ್ಲಿಯೂ ಸೃಜನಶೀಲತೆ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.ಇತಿಹಾಸ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡನೆಯಾಗಿದ್ದ ಡಾ.ಎನ್.ಶಕುಂತಲಾ ಸಂಪಾದಿತ ಪ್ರಬಂಧಗಳ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಡಿ.ಎಸ್.ಶಿವಶಂಕರ, ಜ್ಯೋತಿ ಸಿದ್ದೇಶ್, ವಿಠಲಾಪುರ ರುದ್ರಪ್ಪ, ಟಿ.ಶೇಷಪ್ಪ, ಜಿ.ಎಸ್.ಸತೀಶ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ.ತೊಪ್ಪಲ ಕೆ.ಮಲ್ಲಿಕಾರ್ಜುನಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಕ ಡಿ.ನಾಗೇಂದ್ರ ನಾಯ್ಕ ಕ್ರೀಡಾ ವರದಿ ವಾಚಿಸಿದರು. ಜಿ.ಎಸ್.ಅನುರಾಧಾ ಎನ್ನೆಸ್ಸೆಸ್ ವರದಿ ವಾಚಿಸಿದರು. ಸಹಾಯಕ ಪ್ರಾಧ್ಯಾಪಕಿ ಕೆ.ಬಿ.ಸುನೀತಾ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಕಳೆದ ಸಾಲಿನಲ್ಲಿ ಬಿ.ಕಾಂ.ನಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ವಿದ್ಯಾರ್ಥಿನಿ ಬಿ.ಎಲ್.ಜ್ಯೋತಿ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.