ಬೆಂಗಳೂರು
ಹಲ್ಲು ನೋವಿನ ಚಿಕಿತ್ಸೆಗೆ ಹೋಗಿದ್ದಾಗ ದಂತ ವೈದ್ಯೆಯೊಬ್ಬರನ್ನು ಪರಿಚಯ ಮಾಡಿಕೊಂಡು ಲೈಂಗಿಕ ಕಿರುಕುಳ ಬೆದರಿಕೆ ಹಾಕಿರುವ ಗಿರಿನಗರ ಪೊಲೀಸ್ ಠಾಣೆಯ ಪೇದೆ ಸುದರ್ಶನ್ ಆಸ್ಕಿನ್‍ನನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ.
ಪೇದೆ ಸುದರ್ಶನ್ ಆಸ್ಕಿನ್ ಲೈಂಗಿಕ ಕಿರುಕುಳ ನೀಡಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ದಂತ ವೈದ್ಯೆಯೊಬ್ಬರು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದ್ದ ವರದಿ ತರಿಸಿಕೊಂಡಿರುವ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಪೇದೆಯನ್ನ ಅಮಾನತು ಮಾಡಿ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಗಿರಿನಗರ ಪೊಲೀಸ್ ಪೇದೆಯಾಗಿರುವ ಸುದರ್ಶನ್ ಆಸ್ಕಿನ್ ಹಲ್ಲು ನೋವಿನ ಚಿಕಿತ್ಸೆಗೆ ವೈದ್ಯೆಯನ್ನು ಭೇಟಿಯಾಗಿದ್ದಾಗ ಅವರ ಮೊಬೈಲ್ ನಂಬರ್ ಪಡೆದು ಅಸಭ್ಯವಾಗಿ ಮಾತಾಡ ತೊಡಗಿದ್ದನು. ನಂತರ ಈ ವಿಚಾರವನ್ನ ವೈದ್ಯೆ ತನ್ನ ಪತಿಗೆ ಕೂಡ ತಿಳಿಸಿದ್ದರು.
ಸಲುಗೆಯಿಂದ ವರ್ತಿಸಲಿಲ್ಲ ಎಂದರೆ ಕೊಲೆ ಮಾಡುವುದಾಗಿ ಸುದರ್ಶನ್ ಬೆದರಿಸುತ್ತಿದ್ದ. ಆತನ ಕಾಟ ತಪ್ಪಿಸಿಕೊಳ್ಳಲು ವೈದ್ಯೆ ಗಿರಿನಗರದಿಂದ ಜ್ಞಾನಭಾರತಿ ಬಳಿಗೆ ಮನೆ ಬದಲಾಯಿಸಿದ್ದರು. ಆದರೂ ಕೂಡ ಬಿಡದೆ ಕಾಡುತ್ತಾ ಮೊಬೈಲ್ ಕರೆ ಮಾಡುತ್ತಿದ್ದ ಫೋನ್ ತೆಗೆಯದಿದ್ದರೆ ಕ್ಲಿನಿಕ್ ಬಳಿ ಬಂದು ಸುದರ್ಶನ್ ಕಿರಿಕಿರಿ ಮಾಡುತ್ತಿದ್ದ ಎಂದು ದೂರಲಾಗಿದೆ.
ಇದರಿಂದ ನೊಂದ ಮಹಿಳೆ ಪೇದೆ ಮೇಲೆ ದೂರು ದಾಖಲಿಸಿದ್ದರು. ಮೊದಲು ಅಧಿಕಾರಿಗಳು ಆತನನ್ನ ಕರೆದು ಬುದ್ಧಿ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು. ಆದರೆ ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ ಹಿನ್ನೆಲೆ ಜ್ಞಾನ ಭಾರತಿ ಠಾಣೆಯಲ್ಲಿ ಸೆಕ್ಷನ್ 354, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿರುವ ಬೆನ್ನಲ್ಲೇ ಪೇದೆ ಸುದರ್ಶನ್ ಆಸ್ಕಿನ್‍ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
