ದಾವಣಗೆರೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಟೈಮ್‍ಬಾಂಬ್ ಫಿಕ್ಸ್ ಮಾಡಲಾಗಿದ್ದು, ಅದು ಲೋಕಸಭಾ ಚುನಾವಣೆಯ ನಂತರ್ ಬ್ಲಾಸ್ಟ್ ಆಗಲಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರ ಪರವಾಗಿ ರೋಡ್ ಶೋ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಆಪ್ತರ ಬಳಿಯಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ, ಸರ್ಕಾರ ಕುಸಿಯುವುದಾಗಿ ಹೇಳಿಕೊಂಡಿದ್ದು, ಮೈತ್ರಿ ಸರ್ಕಾರಕ್ಕೆ ಫಿಕ್ಸ್ ಆಗಿರುವ ಟೈಮ್ ಬಾಂಬ್ ಚುನಾವಣೆ ನಂತರ ಬ್ಲಾಸ್ಟ್ ಆಗಿ, ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಹೇಳಿದರು.
ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಕೇವಲ ವೇದಿಕೆ ಮೇಲೆ ಮಾತ್ರ ಒಟ್ಟಿಗೆ ಪ್ರಚಾರ ಮಾಡುತ್ತಿವೆ. ಆದರೆ, ವೇದಿಕೆಯ ಕೆಳಗಡೆ ಎರಡೂ ಪಕ್ಷಗಳು ಪರಸ್ಪರ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿವೆ. ಆದ್ದರಿಂದ ಚುನಾವಣೆ ನಂತರ ಮೈತ್ರಿ ಸರ್ಕಾರವು ತನ್ನದೇ ಭಾರದಿಂದ ಕುಸಿಯಲಿದೆ ಎಂದು ಟೀಕಿಸಿದರು.
ಜನರನ್ನು ವಿಭಜಿಸಿ ಆಳ್ವಿಕೆ ಮಾಡುವುದರಲ್ಲಿ ಕಾಂಗ್ರೆಸ್‍ಗೆ ಹೆಚ್ಚು ನಂಬಿಕೆ ಇದೆ. ಹೀಗಾಗಿಯೇ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ವೀರಶೈವ-ಲಿಂಗಾಯಿತ ವಿಭಜನೆ ಮಾಡಿ ಅಧಿಕಾರಕ್ಕೆ ಬರಲು ಯತ್ನಿಸಿದರು. ಆದರೆ, ಅವರ ಸಂಚು ಯಾವುದೇ ಫಲ ನೀಡಲಿಲ್ಲ ಎಂದ ಅವರು, ಈಗ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಧರ್ಮ ಒಡೆಯಲು ಪ್ರಯತ್ನಿಸಿದಕ್ಕೆ ಒಬ್ಬರು (ಡಿ.ಕೆ.ಶಿವಕುಮಾರ್) ಕ್ಷಮೆ ಕೇಳಿದರೆ, ಮತ್ತೊಬ್ಬರು(ಎಂ.ಬಿ.ಪಾಟೀಲ್) ಅದಕ್ಕೆ ವಿರುದ್ಧವಾಗಿ ಮಾತನಾಡುವ ಮೂಲಕ ನಾಟಕ ಆಡುವ ಮೂಲಕ ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆಂದು ಆರೋಪಿಸಿದರು.
ಭ್ರಷ್ಟಚಾರ ಹಾಗೂ ಕುಟುಂಬ ರಾಜಕಾರಣ ಕಾಂಗ್ರೆಸ್ ಪಕ್ಷದ ಬಳುವಳಿಯಾಗಿದೆ. ಕುಟುಂಬ ರಾಜಕೀಯವೇ ಅವರ ಜೀವನದ ಅವಿಭಾಜ್ಯ ಅಂಗವಾಗಿದೆ. ಕುಟುಂಬ ರಾಜಕಾರಣ ಜನ ನಾಯಕತ್ವ ಬೆಳೆಸುವುದಿಲ್ಲ. ಆದರೂ, ಕಾಂಗ್ರೆಸ್‍ಗೆ ವಂಶವಾಹಿ ಆಡಳಿತದ ಮೇಲೆಯೇ ಹೆಚ್ಚು ನಂಬಿಕೆ ಇದೆ ಎಂದ ಅವರು, ಜೆಡಿಎಸ್‍ನಲ್ಲೂ ವಂಶವಾಹಿನಿ ಆಡಳಿತ ವಿಸ್ತರಿಸುವ ದುರಾಸೆಗೆ ಮಾಜಿ ಪ್ರಧಾನಿ ದೇವೇಗೌಡರು ಒಳಗಾಗಿದ್ದಾರೆ. ಕುಮಾರಸ್ವಾಮಿಗೆ ದೇವೇಗೌಡರ ಮಗ ಎಂಬುದು ಬಿಟ್ಟರೇ ಬೇರೆ ಅರ್ಹತೆ ಏನಿದೆ? ಅವರು ಹೋರಾಟಗಾರರೇ ಎಂದು ಪ್ರಶ್ನಿಸಿದರು.
ಗೌಡರು ಮಕ್ಕಳ ನಂತರ ಈಗ ಮೊಮ್ಮಕ್ಕಳನ್ನು ರಾಜಕಾರಣಕ್ಕೆ ತಂದಿದ್ದು, ಅತೀ ಆಸೆ ಗತಿಗೇಡು ಎಂಬುದು ಈ ಬಾರಿ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಜೆಡಿಎಸ್‍ನಿಂದ ಅಜ್ಜ ಮತ್ತು ಮೊಮ್ಮಕ್ಕಳು ಸ್ಪರ್ಧಿಸಿರುವ ತುಮಕೂರು, ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಲ್ಲೂ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ ಎಂದ ಅವರು, ಹೀಗೆ ಜೆಡಿಎಸ್, ಕಾಂಗ್ರೆಸ್‍ನಂತೆ ಬಿಜೆಪಿಯಲ್ಲಿ ಒಬ್ಬರ ಅಧಿಕಾರ ಅದೇ ಕುಟುಂಬದ ಇನ್ನೊಬ್ಬರಿಗೆ ನೇರ ಹಸ್ತಾಂತರವಿಲ್ಲ. ಪಕ್ಷಕ್ಕೆ ತನ್ನದೇ ಆದ ತತ್ವ ಸಿದ್ಧಾಂತಗಳಿದ್ದು, ಅಧಿಕಾರಕ್ಕೆ ಸೂಕ್ತ ವ್ಯಕ್ತಿಯಾಗಿದ್ದರೆ ಮಾತ್ರ ಅಧಿಕಾರ ಹಸ್ತಾಂತರವಾಗಲಿದೆ ಎಂದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಹಿಳೆಯರಿಗೆ ಗೌರವ ನೀಡುವುದು, ಹೆಣ್ಣನ್ನು ಪೂಜಿಸುವುದನ್ನು ನನ್ನ ತಾಯಿ ಕಲಿಸಿಕೊಟ್ಟಿದ್ದರೆ, ಆರ್‍ಎಸ್‍ಎಸ್ ಸಭ್ಯತೆ ಬೆಳೆಸಿದೆ. ಹೀಗಾಗಿ ನನಗೆ ಸಂಸ್ಕಾರ ಗೊತ್ತಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ವಿರುದ್ಧ ರೈತರು ಪ್ರತಿಭಟಿಸಿದ ವೇ¼ಯಲ್ಲಿ ರೈತ ಮಹಿಳೆಗೆ ಇಷ್ಟು ದಿನ ಎಲ್ಲಿ ಮಲಗಿದ್ದೇ? ಎಂದಾಗ ಮೈತ್ರಿ ಮಾಡಿಕೊಂಡ ಮುಖಂಡರ ಬಾಯಿಗೆ ಲಕ್ವಾ ಹೊಡೆದಿತ್ತಾ?, ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬಗ್ಗೆ ಹಗುರವಾಗಿ ಮಾತನಾಡುವಾಗ ನಿಮ್ಮ ಸಂಸ್ಕೃತಿ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದ ಸಿ.ಟಿ.ರವಿ, ನೀವು ಸಂಸ್ಕಾರ ಕಲಿಸಬೇಕಾಗಿರುವುದು ನನಗಲ್ಲ. ಬದಲಿಗೆ ನಿಮ್ಮ ಮುಖ್ಯಮಂತ್ರಿಗಳಿಗೆ ಹೇಳಿಕೊಡಿ ಎಂದು ಸಲಹೆ ನೀಡಿದರು.
ರಾಜಕೀಯವಾಗಿ ಬಿಜೆಪಿಯನ್ನು ಎದುರಿಸಲಾಗದವರು ಬಿಜೆಪಿ ಅಭ್ಯರ್ಥಿಯ ವಿರುದ್ಧ ರಾಸಲೀಲೆಯ ಸುಳ್ಳು ಪ್ರಕರಣವನ್ನು ಹರಿಬಿಟ್ಟಿದ್ದಾರೆ. ತನಿಖೆಯ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ. ರಮೇಶ್ ಜಾರಕಿಹೊಳಿ ಅವರು ಬಿಜೆಪಿಗೆ ಸೇರುವ ಕುರಿತು ಸ್ಪಷ್ಟಪಡಿಸಿಲ್ಲ. ಒಂದುವೇಳೆ ಅವರು ಬಿಜೆಪಿ ಬರುವುದಾದರೆ ಸ್ವಾಗತಿಸುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಅಂಬರಕರ್ ಜಯಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್ ಶಿವಕುಮಾರ್, ಎನ್.ರಾಜಶೇಖರ್, ಬಿ.ರಮೇಶ್ ನಾಯ್ಕ್, ಮುಖಂಡರುಗಳಾದ ಕೃಷ್ಣಮೂರ್ತಿ, ಬೇತೂರು ಬಸವರಜಾ, ಪ್ರವೀಣ್, ಹರೀಶ್, ಧನುಷ್ ರೆಡ್ಡಿ ಮತ್ತಿತರರು ಹಾಜರಿದ್ದರು.