ಹುಳಿಯಾರು
ತುಮಕೂರು ಕ್ಷೇತ್ರದಿಂದ ತಮ್ಮನ್ನು ಗೆಲ್ಲಿಸಿದರೆ ಜಿಲ್ಲೆಗೆ ಹೇಮೆ ಹರಿಸುವುದಾಗಿ ಹೇಳುತ್ತಿರುವ ದೇವೇಗೌಡ ಮತ್ತು ಅವರ ಕುಟುಂಬವನ್ನು ನಂಬಿ ಗೆಲ್ಲಿಸಿದರೆ ಅವರು ಕೊಡೋದು ಕಣ್ಣೀರೆ ವಿನಹ ಹೇಮಾವತಿ ನೀರಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಕುಟುಕಿದರು.
ಹುಳಿಯಾರಿನಲ್ಲಿ ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.
ನೆಹರೂ, ಇಂದಿರಾ ಅವರ ವಂಶ ಪಾರಂಪರ್ಯ ಆಡಳಿತವನ್ನು ವಿರೋಧಿಸಿ ಜತನಾ ಪರಿವಾರದ ಮೂಲಕ ಸಿಡಿದೆದ್ದ ಗೌಡರು ಈಗ ಮಾಡುತ್ತಿರುವುದಾದರೂ ಏನು, ತಮ್ಮ ಮಕ್ಕಳು, ಸೊಸೆಯಂದಿರು, ಬೀಗರು ಹಾಗೂ ಮೊಮ್ಮಕ್ಕಳನ್ನು ರಾಜಕಾರಣಕ್ಕೆ ತಂದಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕಪ್ರಾಯವಾಗಿದ್ದು ಮತದಾರರು ಜಾಗೃತರಾಗಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ದೇವೇಗೌಡರನ್ನು ತುಮಕೂರಿನಲ್ಲಿ ಸೋಲಿಸಿ ಹಾಸನಕ್ಕೆ ಹಿಂದಿರುಗುವಂತೆ ಮಾಡಬೇಕಿದೆ ಎಂದರು.
1996 ರಲ್ಲಿ ಕೇವಲ 16 ಸದಸ್ಯ ಬಲ ಹೊಂದಿದ್ದ ದೇವೇಗೌಡರು ಯಾರಿಗೂ ಬೇಡವಾದ ಅನಿವಾರ್ಯ ಸ್ಥಿತಿಯಲ್ಲಿ ಪ್ರಧಾನಿ ಪಟ್ಟಕ್ಕೇರಿದರು. ಈಗ ಅದನ್ನೇ ಮುಂದಿಟ್ಟುಕೊಂಡು ಕೇವಲ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಪ್ರಧಾನಿ ಕನಸು ಕಾಣುತ್ತಿದ್ದಾರೆ. ತಮ್ಮ 87 ನೇ ವಯಸ್ಸಿನಲ್ಲೂ ರಾಜಕೀಯ ಮಾಡ ಹೊರಟಿರುವ ಅವರು ಬಿಜೆಪಿಯ ಲಾಲ್ ಕೃಷ್ಣ ಅಡ್ವಾನಿ, ಮುರುಳಿ ಮನಹೋಹರ ಜೋಷಿಯವರು ಕಿರಿಯರಿಗೆ ಅಧಿಕಾರ ವಹಿಸಿ ನಿವೃತ್ತರಾಗಿರುವ ಗುಣವನ್ನು ನೋಡಿ ಕಲಿಯಬೇಕಾಗಿದೆ ಎಂದರು.
ಮೋದಿ ಮುಂದಾಳತ್ವ ವಹಿಸಿರುವ ಈ ಬಾರಿಯ ಲೋಕಸಭೆ ಚುನವಾಣೆಯಲ್ಲಿ 300 ರಿಂದ 315 ಸ್ಥಾನಗಳನ್ನು ಪಡೆಯುವುದಾಗಿ ಇತ್ತೀಚಿನ ಎಲ್ಲ ಮಾಧ್ಯಮ ವಿಶ್ಲೇಷಣೆಗಳು ಸ್ಪಷ್ಟಪಡಿಸಿವೆ. ಈ ದಿಸೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಗೆಲ್ಲಿಸಿ ಕಳುಹಿಸಿದರೆ ಕ್ಷೇತ್ರಕ್ಕೆ ಬೇಕಾದ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ ಮಾಜಿ ಪ್ರಧಾನಗಳ ವಿರುದ್ಧ ಗೆದ್ದಿರುವ ಕಾರಣದಿಂದ ಸಚಿವ ಸ್ಥಾನವೂ ಲಭಿಸುತ್ತದೆ. ಆಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಣ ತರಬಹುದಾಗಿದೆ ಎಂದು ಮತದಾರರಲ್ಲಿ ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ನಂದಿಹಳ್ಳಿ ಶಿವಣ್ಣ, ಕೆಂಕೆರೆ ನವೀನ್, ದಾಸಪ್ಪ, ಬರಕನಹಾಲ್ ವಿಶ್ವನಾಥ್, ಶಿವು, ಬಡ್ಡಿಪುಟ್ಟರಾಜು, ಎಸ್‍ಟಿಡಿ ಶಂಕರಣ್ಣ, ಹೇಮಂತ್, ದಿನೇಶ್, ಜಯಸಿಂಹ, ಅಜಿತ್, ವಿವೇಕಾನಂದ, ಚನ್ನಬಸವಯ್ಯ, ಲೋಕೇಶ್ ಮತ್ತಿತರರು ಬಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
