ತುಮಕೂರು : ಬೇಸಿಗೆಯಲ್ಲಿ 405 ಗ್ರಾಮಗಳಲ್ಲಿ ನೀರಿನ ಸಮಸ್ಯೆ!

 ತುಮಕೂರು : 

      ಬೇಸಿಗೆ ಶುರುವಾಗುತ್ತಲೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಕಾಣಿಸಿಕೊಂಡಿದ್ದು, 405 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸಬಹುದೆಂದು ಜಿಲ್ಲಾ ಪಂಚಾಯತ್ ಪಟ್ಟಿ ತಯಾರಿಸಿ ಮುಂಜಾಗ್ರತಾ ಕ್ರಮವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಯಾ ಗ್ರಾಮ ಪಂಚಾಯತ್‍ಗಳಿಗೆ ಸೂಚಿಸಿದೆ.

     ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಪೈಕಿ 204 ಗ್ರಾಪಂಗಳ 405 ಗ್ರಾಮಗಳಲ್ಲಿ ಸಮಸ್ಯೆ ಉದ್ಬವಿಸವಹುದೆಂದು ಗುರುತಿಸಲಾಗಿದ್ದು, ಈ ಪೈಕಿ 8 ಗ್ರಾಪಂಗಳ 19 ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೆ, 20 ಗ್ರಾಪಂಗಳ 27 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಯ ಮೂಲಕ ನೀರು ಪೂರೈಸಲಾಗುತ್ತಿದೆ.

ಕುಣಿಗಲ್, ಮಧುಗಿರಿ, ಪಾವಗಡದಲ್ಲಿ ಹೆಚ್ಚು ಸಮಸ್ಯೆ :

      ಜಿಲ್ಲೆಯ ಕುಣಿಗಲ್, ಮಧುಗಿರಿ, ತುಮಕೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಹೆಚ್ಚು ಕಾಣಿಸಿಕೊಂಡಿದ್ದು, ಖಾಸಗಿ ಕೊಳವೆಬಾವಿ, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕುಣಿಗಲ್ ತಾಲೂಕಿನ 7 ಗ್ರಾಪಂಗಳ 18 ಗ್ರಾಮಗಳಲ್ಲಿ ದಿನವೊಂದಕ್ಕೆ 35 ಟ್ರಿಪ್‍ಗಳಂತೆ ಹಾಲಿ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದ್ದು, 8 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಮೂಲಕ ನೀರು ಕೊಡಲಾಗುತ್ತಿದೆ. ತುಮಕೂರು ತಾಲೂಕಿನ 1 ಗ್ರಾಮದಲ್ಲಿಟ್ಯಾಂಕರ್ ನೀರು ಹರಿಸುತ್ತಿದ್ದರೆ, ಖಾಸಗಿ ಕೊಳವೆಬಾವಿಗಳ ಮೂಲಕ ಕುಣಿಗಲ್‍ನ 8, ಮಧುಗಿರಿಯ 10, ಪಾವಗಡದ 4, ಶಿರಾದ 2, ತಿಪಟೂರಿನ 1 ಹಾಗೂ ತುಮಕೂರಿನ 1 ಗ್ರಾಮಗಳಲ್ಲಿ ನೀರು ಪೂರೈಸಲಾಗುತ್ತಿದೆ.

ಟ್ಯಾಂಕರ್ ನೀರು ಪೂರೈಸುತ್ತಿರುವ ಗ್ರಾಮಗಳು:

      ಕುಣಿಗಲ್ ತಾಲೂಕಿನ ಸಿಂಗೋನಹಳ್ಳಿ, ಮನವಳ್ಳಿ, ಕೊಪ್ಪ, ಸಾಬರಪಾಳ್ಯ, ತಿಟ್ಟಮೇಗಲಪಾಳ್ಯ, ಅಂದಾನಯ್ಯನಪಾಳ್ಯ, ದೊಡ್ಡಪಾಳ್ಯ, ಶಿಡ್ಲನಹಟ್ಟಿ, ತೆಂಗಿನ ಮರದಪಾಳ್ಯ, ವಾಣಿಗೆರೆ, ದೊಡ್ಡಮಳಲವಾಡಿ, ಕುರುಡೀಹಳ್ಳಿ, ಕಾಮನಹಳ್ಳಿ, ದೇವರಾಯನಪಾಳ್ಯ, ಬಿದರಕಟ್ಟೆಪಾಳ್ಯ, ಅವರೆಗೆರೆ ಕಾಲೋನಿ, ವಿ.ಗೌಡನಪಾಳ್ಯ, ಗುಳ್ಳಿಪಾಳ್ಯ. ತುಮಕೂರು ತಾಲೂಕಿನ ಸ್ವಾಂದೇನಹಳ್ಳಿ ಗ್ರಾಪಂನ ಯಲ್ಲಾಪುರ ಗ್ರಾಮಕ್ಕೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸುತ್ತಿರುವ ಗ್ರಾಮಗಳು:

      ಸರಕಾರಿ ಕೊಳವೆಬಾವಿಗಳು ಬತ್ತಿರುವೆಡೆ ಖಾಸಗಿ ಕೊಳವೆಬಾವಿಯನ್ನೇ ಬಾಡಿಗೆ ಪಡೆದು ಅದರ ಮೂಲಕ ಹಲವು ಗ್ರಾಮಗಳಿಗೆ ನೀರು ಸರಬರಾಜು ಮಾಡುತ್ತಿದ್ದು, ತುಮಕೂರು ತಾಲೂಕು ನಾಗವಲ್ಲಿ ಪಂಚಾಯ್ತಿಯ 1ನೇ ಬ್ಲಾಕ್, ತಿಪಟೂರು ತಾಲೂಕು ಗುರುಗದಹಳ್ಳಿಯ ಕೋಡಿಕೊಪ್ಪಲು, ಶಿರಾ ತಾಲೂಕು ಯಲದಬಾಗಿ ಗ್ರಾಪಂನ ನವಣೆಬೋರನಹಳ್ಳಿ, ರಾಮಲಿಂಗಾಪುರ ಗ್ರಾಪಂನ ರಾಮಲಿಂಗಾಪುರ, ಪಾವಗಡ ತಾಲೂಕಿನ ವಿರುಪಸಮುದ್ರ ಗ್ರಾಪಂನ ಗೌಡೇಟಿ, ಮಂಗಳವಾಡ ಗ್ರಾಪಂನ ಉದ್ಧಘಟ್ಟ, ದೊಮ್ಮತಮರಿ ಗ್ರಾಪಂನ ಅಕ್ಕಮ್ಮನಹಳ್ಳಿ, ದೊಮ್ಮತಮರಿ ಗ್ರಾಮಗಳು ಸೇರಿವೆ.

      ಇದರೊಂದಿಗೆ ಮಧುಗಿರಿ ತಾಲೂಕಿನ ಏಳು ಪಂಚಾಯಿತಿ ವ್ಯಾಪ್ತಿಯ ಗೊಂದಿಹಳ್ಳಿ, ಚೆನ್ನಸಾಗರ-ನಂಜಾಪುರ, ತಾಯಿಗೊಂಡನಹಳ್ಳಿ ಬೆಲ್ಲದಮಡುಗು ಗೇಟ್, ತೆರಿಯೂರು, ತೆರಿಯೂರು ಕಾಲೋನಿ, ಬೆಲ್ಲದಮಡಗು, ತೋಣಚಗೊಂಡನಹಳ್ಳಿ, ಚಂಬೇನಹಳ್ಳಿ, ಸಜ್ಜೆಹೊಸಹಳ್ಳಿ ಗ್ರಾಮಗಳುಸೇರಿ ಕುಣಿಗಲ್ ತಾಲೂಕಿನ ಐದು ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗೆರೆ, ದಾಸನಪುರ, ಯಾಚಘಟ್ಟ, ತರೀಕೆರೆ, ವಾಜರಪಾಳ್ಯ, ಹನುಮಣ್ಣನಪಾಳ್ಯ, ರಾಜಗೆರೆ ಅಯ್ಯನಕಟ್ಟೆಯಲ್ಲೂ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಅಂತೆಯೇ ಕೊರಟಗಟೆರೆ ತಾಲೂಕಿನ ಕಬ್ಬಿಗೆರೆ ಗ್ರಾಮದಲ್ಲೂ ನೀರಿಗಾಗಿ ಖಾಸಗಿ ಬೋರ್‍ವೆಲ್ ಅನ್ನೇ ಆಶ್ರಯಿಸಬೇಕಾದ ಸ್ಥಿತಿ ಉದ್ಬವಿಸಿದೆ.

     ಅನುದಾನ ಕೊರತೆಯ ನೆಪ ಹೇಳಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಗ್ರಾಪಂ ಆಡಳಿತ ಎಚ್ಚರವಹಿಸಬೇಕು. 15ನೇ ಹಣಕಾಸು ಯೋಜನೆಯ ಶೇ.50ರಷ್ಟು ಅನುದಾನವನ್ನು ಪೂರ್ಣ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿದರೂ ಕ್ರಿಯಾಯೋಜನೆಗೆ ಅನುಮೋದನೆ ಕೊಡಲಾಗುವುದು. ಯಾವುದೇ ಗ್ರಾಮದಲ್ಲೂ ಜನ-ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು.

-ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರು.

ಸ್ವಚ್ಛತೆಯನ್ನು ಕಾಪಾಡಲು ಸಮರ್ಪಕ ನೀರೊದಗಿಸುವುದು ಅಗತ್ಯ

     ಕೊರೊನಾ 2ನೇ ಅಲೆ ಸೋಂಕು ಹೆಚ್ಚಳವಾಗುತ್ತಿದ್ದು, ಸ್ವಚ್ಛತೆಗೆ ಹೆಚ್ಚಾಗಿ ಆದ್ಯತೆ ಕೊಡಬೇಕೆಂದು ಸರಕಾರ, ಆರೋಗ್ಯ ಕಾರ್ಯಕರ್ತರು ಸಾರಿ ಸಾರಿ ಹೇಳುತ್ತಿದ್ದಾರೆ. ಆದರೆ ಈ ಸ್ವಚ್ಛತೆ ಕಾಪಾಡಲು ಪ್ರಮುಖವಾಗಿ ಅಗತ್ಯವಾಗಿರುವುದು ನೀರು. ನೀರಿನ ಸಮಸ್ಯೆ ಈಗಾಗಲೇ ಹಲವೆಡೆ ಕಾಣಿಸಿಕೊಂಡಿದ್ದು, ಆಗಾಗ್ಗೆ ಕೈತೊಳೆಯಲು, ದಿನವೂ ಸ್ನಾನ. ಒಗೆದ ಬಟ್ಟೆಯನ್ನೇ ಧರಿಸಲು ಸಮರ್ಪಕ ನೀರು ದೊರೆಯದಿದ್ದರೆ ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಕೊರೊನಾ ವ್ಯಾಪಿಸಲು ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಸಮರ್ಪಕ ನೀರೊದಗಿಸಲು ಗ್ರಾಮ ಪಂಚಾಯಿತಿ ನಗರಾಡಳಿತಗಳು ಹೆಚ್ಚು ಒತ್ತು ಕೊಡುವ ಅಗತ್ಯವಿದೆ.

ಮಧುಗಿರಿ, ಗುಬ್ಬಿ, ತುಮಕೂರಲ್ಲಿ ಮುಂದೆ ಸಮಸ್ಯೆ ಹೆಚ್ಚಾಗುವ ಸಂಭವ

     ಜಿಲ್ಲಾ ಪಂಚಾಯಿತಿ ಪಟ್ಟಿ ಮಾಡಿರುವ 405 ಸಮಸ್ಯಾತ್ಮಕ ಗ್ರಾಮಗಳಲ್ಲಿ ಮಧುಗಿರಿ ತಾಲೂಕಿನಲ್ಲಿ ಜಿಲ್ಲೆಗೆ ಅತೀಹೆಚ್ಚು ಅಂದರೆ 97 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸಬಹುದೆಂದು ಅಂದಾಜಿಸಲಾಗಿದ್ದು, ನಂತರದಲ್ಲಿ ಗುಬ್ಬಿ, 65, ತುಮಕೂರು ತಾಲೂಕಿನಲ್ಲಿ 48 ಗ್ರಾಮಗಳಲ್ಲಿ ಸಮಸ್ಯೆ ತಲೆದೋರಬಹುದೆಂದು ಗುರುತಿಸಲಾಗಿದೆ.

ತಾಲೂಕು               ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ

ಚಿ.ನಾ.ಹಳ್ಳಿ                              20
ಗುಬ್ಬಿ                                     65
ಕೊರಟಗೆರೆ                               46
ಕುಣಿಗಲ್                                27
ಮಧುಗಿರಿ                                97
ಪಾವಗಡ                               23
ಶಿರಾ                                   43
ತಿಪಟೂರು                             25
ತುಮಕೂರು                           48
ತುರುವೇಕೆರೆ                          08

 

 

ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap