ಬಳ್ಳಾರಿ
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾ.ಅರ್ಜುನ್ ಎಸ್.ಮಲ್ಲೂರ್ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಸತೀಶಕುಮಾರ್ ಅವರು ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೆ ಹಾಗೂ ಸಾರ್ವಜನಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಗಮನಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾ.ಅರ್ಜುನ್ ಮಲ್ಲೂರ್ ಅವರು, ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ನಾನಾ ದುಷ್ಪರಿಣಾಮಗಳು ಉಂಟಾಗುತ್ತಿವೆ, ತಂಬಾಕು ಬಿಟ್ಟು ಆರೋಗ್ಯಯುತವಾಗಿ ಜೀವನ ನಡೆಸಿ ಎಂದರು.ತಂಬಾಕು ವಸ್ತುಗಳಲ್ಲಿ (ಸಿಗರೇಟ್, ಬೀಡಿ, ಸಿಗ್ಯಾರ್ ಇತ್ಯಾದಿ) 7000 ರಾಸಾಯಿನಿಕ ವಸ್ತುಗಳಿದ್ದು, ಅದರಲ್ಲಿ 69ರಷ್ಟು ಕ್ಯಾನ್ಸ್‍ರ್‍ಕಾರಕ ವಸ್ತುಗಳಾಗಿವೆ. ಧೂಮರಹಿತ (ಜಿಗಿಯುವ ತಂಬಾಕುಗಳು) ತಂಬಾಕು ಉತ್ಪನ್ನಗಳಲ್ಲಿ 3095 ರಾಸಾಯನಿಕಗಳಿದ್ದು. ಅದರಲ್ಲಿ 28ರಷ್ಟು ಕ್ಯಾನ್ಸ್‍ರ್‍ಕಾರಕ ವಸ್ತುಗಳಿವೆ ಎಂದು ವಿವರಿಸಿದರು.
ನಾಮಫಲಕವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಳ ಕಛೇರಿ ಮುಂಭಾಗದಲ್ಲಿ ಅಳವಡಿಸಿರುವ ನಾಮಫಲಕವನ್ನು ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಅವರು ಅನಾವರಣಗೊಳಿಸಿ ಮಾತನಾಡಿದರು.
ಈ ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಾರ್ಯಾಲಯದ ಆವರಣದಿಂದ ಆರಂಭಗೊಂಡು ನಗರದ ಕೆ.ಸಿ ರೋಡ್, ಮೀನಾಕ್ಷಿ ಸರ್ಕಲ್, ಡಿಸಿ ಆಫೀಸ್, ರಾಯಲ್ ಸರ್ಕಲ್, ಅನಂತಪುರ ರಸ್ತೆ, ಸಂಗಮ್ ಸರ್ಕಲ್ ಮೂಲಕ ಪುನಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಾರ್ಯಾಲಯಕ್ಕೆ ತಲುಪಿತು.
ನಂತರದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರೂಸಪೇಟೆ(ಕೌಲ್ ಬಜಾರ್) ಬಳ್ಳಾರಿಯಲ್ಲಿ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು ಸುಮಾರು 45ಕ್ಕೂ ಹೆಚ್ಚು ಬೀಡಿ ಸುತ್ತುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಬಾಯಿ ಕ್ಯಾನ್ಸರ್ ಮಧುಮೇಹ ಸಕ್ಕರೆ ಇತ್ಯಾಧಿ ಆರೋಗ್ಯ ತಪಾಸಣೆಯನ್ನು ಸ್ಥಳದಲ್ಲಿಯೆ ಕೈಗೊಂಡು ಆರೋಗ್ಯ ಜಾಗೃತಿ ಸಹ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ದುರುಗೇಶ ಮಾಚನೂರು, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಆರ್.ಅನಿಲಕುಮಾರ್, ಎಸ್‍ಕೆಡಿಆರ್‍ಡಿಪಿ ಜಿಲ್ಲಾ ನಿರ್ದೇಶಕ ಚಂದ್ರಶೇಖರಶೆಟ್ಟಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ರವಿಂದ್ರನಾಥ, ತಾಲೂಕು ಆರೋಗ್ಯ ಅಧಿಕಾರಿ ಡಾ.ವಿರೇಂದ್ರಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಸೇರಿದಂತೆ ತಜ್ಞ ವೈದ್ಯರು ಹಾಗೂ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.