ದಾವಣಗೆರೆ:
ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು, ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡದಿದ್ದರೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧರಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಶಂಕರಲೀಲಾ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕೆಂದು ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಕೇಂದ್ರ ಅದನ್ನು ಪುರಸ್ಕರಸದೆಯೂ, ತಿರಸ್ಕರಸದೆಯೂ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದೆ. ಹೀಗಾಗಿ ಕೇಂದ್ರದ ಮೇಲೆ ಹೋರಾಟದ ಮೂಲಕ ಒತ್ತಡವೂ ಹೇರತ್ತಲೇ, ನ್ಯಾಯಾಂಗ ಹೋರಾಟವು ನಡೆಸುತ್ತೇವೆ. ಒಂದು ವೇಳೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ಸುಪ್ರೀಂ ಕೋರ್ಟ್ ಮೆಟ್ಟಲೇರಿಯಾದರೂ ನ್ಯಾಯ ಪಡದೇ ತೀರುತ್ತೇವೆ ಎಂದು ಹೇಳಿದರು.
ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಈಗಿನ ಹೋರಾಟವಲ್ಲ. 1980ರಿಂದ ಆರಂಭವಾದ ಹೋರಾಟವಾಗಿದ್ದು, ಅಂದಿನಿಂದ ನಿರಂತರವಾಗಿ ನಡೆದು ಬಂದ ಹೋರಾಟಕ್ಕೆ ಇತ್ತೀಚೆಗೆ ವೇಗ ಪಡೆದ ಕಾರಣಕ್ಕೆ ರಾಜ್ಯದಲ್ಲಿ ಯಶಸ್ಸು ಕಂಡಿದ್ದೇವೆ. ಕೆಲವರು ಈ ಹೋರಾಟದಿಂದ ಏನೂ ಆಗಿಲ್ಲ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಈ ಹೋರಾಟದ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವಂತೆ ಶಿಫಾಸ್ಸು ಮಾಡಿರುವುದು ನಮ್ಮ ಜಯ ಅಲ್ಲವೇ? ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗೊಂದಲ ಆಗಬಾರದೆಂಬ ಕಾರಣಕ್ಕೆ ಸ್ವತಂತ್ರ ಧರ್ಮದ ಹೋರಾಟವನ್ನು ಸ್ಥಗಿತಗೊಳಿಸಿದ್ದೇವು. ಆದರೆ, ಈಗ ಮತ್ತೆ ಹೋರಾಟವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕಗಳನ್ನು 12 ಜಿಲ್ಲೆಗಳಲ್ಲಿ ರಚಿಸುವ ಮೂಲಕ ಕಾರ್ಯಾರಂಭಿಸಿವೆ. ಅಲ್ಲದೇ, ಮೊದಲು ಗೊಂದಲದಲ್ಲಿದ್ದ ಯುವಕರು ಲಿಂಗಾಯತ ಅಸ್ಮಿತೆಯ ಜಾಗೃತಿ ಪಡೆದು ಹೋರಾಟದಲ್ಲಿ ಧುಮಕುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರದ ಮಾದರಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ಮಹಾರಾಷ್ಟ್ರದ ಬಾಂಬೆಯಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ ಆಗಸ್ಟ್ 9ರಂದು ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಈ ರ್ಯಾಲಿಯ ನಂತರದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಶಿಫಾರಸನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿ, ಮತ್ತೊಮ್ಮೆ ಮನವರಿಕೆ ಮಾಡಿಕೊಡಲು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗುವುದು ಎಂದರು.
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಸಮಾನ ಮನಸ್ಕ ಮಠಾಧೀಶರು ಹಾಗೂ ಪ್ರಗತಿಪರರನ್ನು ಸೇರಿಸಿಕೊಂಡು ಆಗಸ್ಟ್ 1ರಿಂದ ಸತತವಾಗಿ ಒಂದು ತಿಂಗಳ ಕಾಲ ಮತ್ತೆ ಕಲ್ಯಾಣ ಅಭಿಯಾನ ನಡೆಸುತ್ತಿದ್ದು, ಈ ಅಭಿಯಾನಕ್ಕೆ ಮಹಾಸಭಾ ಹಾಗೂ ನಮ್ಮ ಪೀಠ ಸಂಪೂರ್ಣ ಬೆಂಬಲ ನೀಡಲಿವೆ ಎಂದರು.
ಬಸವಣ್ಣನವರ ಕಲ್ಯಾಣ ಕ್ರಾಂತಿಯು ನಿಂತ ನೀರಲ್ಲ, ಅದು ನಿರಂತರವಾಗಿ ಹರಿಯುವ ನದಿಯಾಗಿದೆ. 12ನೇ ಶತಮಾನದಲ್ಲಿಯೇ ಈ ಕ್ರಾಂತಿಯನ್ನು ತಡೆಯಲು ಪಟ್ಟಭದ್ರರು ಪ್ರಯತ್ನಿಸಿದ್ದರು. ಆದರೂ, ಅದು ನಿಲ್ಲಲಿಲ್ಲ. ಅಲ್ಲಿಂದ ಇಲ್ಲಿಯ ವರೆಗೆ ನಿರಂತರವಾಗಿ ನಡೆದುಕೊಂಡೇ ಬಂದಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಎಂ.ಶಿವಕುಮಾರ್, ದೇವಿಗೆರೆ ವೀರಭದ್ರಪ್ಪ, ಕೆ.ಎಸ್.ಗೋವಿಂದರಾಜ್, ಮರುಳಸಿದ್ದಯ್ಯ ಬಸವನಾಳ್, ಶಶಿಧರ್ ಬಸಾಪುರ, ಚನ್ನಬಸಪ್ಪ, ಎಚ್.ಬಸವರಾಜಗೌಡ ಮತ್ತಿರರು ಹಾಜರಿದ್ದರು.