ಬಳ್ಳಾರಿ
ದೇವೇಗೌಡರ ಕುಟುಂಬದ ಸದಸ್ಯರೆಲ್ಲಾ ಸಂಸದರಾಗಬೇಕೆಂಬ ದುರಾಸೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದರು.
ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ನಾಮ ಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸಿ ಬಳಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಉಪಚುನಾವಣೆಯಲ್ಲಿ ನಮ್ಮ ಹಲವು ತಪ್ಪುಗಳಿಂದ ಸೋತಿದ್ದೇವೆ. ಈ ಬಾರಿ 1 ಲಕ್ಷಕ್ಕೂ ಹೆಚ್ಚು ಅಂತರದಿಂದ ನಮ್ಮ ಅಭ್ಯರ್ಥಿ ದೇವೇಂದ್ರಪ್ಪ ಅವರು ಗೆಲ್ಲಲಿದ್ದಾರೆ ಎಂದರು.
ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳು ಆಗಿದ್ರೂ ಸಾಲಮನ್ನಾ ಸಂಪೂರ್ಣ ಆಗಿಲ್ಲ. ರಾಜ್ಯ ಅಭಿವೃದ್ದಿ ಕಂಡಿಲ್ಲ. ಅಪ್ಪ ಮಕ್ಕಳಿಗೆ ಇನ್ನೂ ಬುದ್ದಿ ಬಂದಿಲ್ಲ. ಮಕ್ಕಳು ಮೊಮ್ಮಕ್ಕಳು ಕುಟುಂಬದ ಸದಸ್ಯರೆಲ್ಲ ಸಂಸದರಾಗಬೇಕೆಂಬ ದುರಾಸೆಯಿದೆ. ತುಮಕೂರಿನಲ್ಲಿ ದೇವೆಗೌಡ ಸೋಲುವುದು ನಿಶ್ಚಿತ. ಮಂಡ್ಯದಲ್ಲಿ ಸುಮಲತಾ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಪ್ರಧಾನಿಯಾಗೋದು ಅಷ್ಟೇ ಸತ್ಯ ಎಂದರು. ಇದೇವೇಳೆ ಭಾವಿ ಸಂಸದ ವೈ ದೇವೇಂದ್ರಪ್ಪ ಎಂದು ಸಮಾವೇಶದಲ್ಲಿ ಬಿ ಎಸ್ ವೈ ಘೋಷಿಸಿದರು.
ರಾಹುಲ್ ಗಾಂಧಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಜನರನ್ನು ಸುಳ್ಳು ಹೇಳಿ ನಂಬಿಸಬೇಡಿ. ರಾಜ್ಯದಲ್ಲಿ ಸಂಪೂರ್ಣ ಸಾಲಮನ್ನಾ ಆಗಿದೆಯಾ ಎಂದು ಪ್ರಶ್ನಿಸಿದರು. ಮೊದಲು ಶ್ರೀರಾಮುಲುಗೆ ಕನ್ನಡ ಬರುವುದಿಲ್ಲ ಎಂದು ಹೇಳಿದರು. ಈ ಬಾರಿ ನಮ್ಮ ಅಭ್ಯರ್ಥಿ ವಿದ್ಯಾವಂತರಲ್ಲ ಎಂದು ಹೀಯಾಳಿಸುತ್ತಿದ್ದಾರೆ. ಹೀಗೆ ಹೀನಾಯವಾಗಿ ಮಾತನಾಡುವುದೇ ಅವರ ಕೆಲಸವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಬಳ್ಳಾರಿ ಹೇಗಿತ್ತಣ್ಣ ಎಂದು ಪ್ರಶ್ನಿಸಿದ ಅವರು, ಶ್ರೀರಾಮುಲು ಅಧಿಕಾರಕ್ಕೆ ಬಂದ ಮೇಲೆ ಬಳ್ಳಾರಿ ಹೇಗಾಯ್ತು ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಮಾತನಾಡಿ, ಐದು ವರುಷ ಮೋದಿ ಆಳ್ವಿಕೆ ಕೇವಲ ಟ್ರೈಲರ್ ಮಾತ್ರ. ಮುಂದೆ ಅಧಿಕಾರಕ್ಕೇರಿ ನಿಜವಾದ ಸಿನಿಮಾ ತೋರಿಸಲಿದ್ದಾರೆ. ಮೋದಿ ಪ್ರಧಾನಿಯಲ್ಲ. ಚೋರ್ ಎಂದು ರಾಹುಲ್ ಗಾಂಧಿ ಹೀಗಳೆಯುತ್ತಾರೆ. ದೇಶದ ಕಾವಲುಗಾರನನ್ನು ಕಳ್ಳ ಎನ್ನುವ ರಾಹುಲ್ ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ಘರ್ಜಿಸಿದರೆ ಕಾಂಗ್ರೆಸ್ ಬೇರು ಸಮೇತ ಕಿತ್ತುಹೋಗಲಿದೆ. ನರೇಂದ್ರ ಮೋದಿ ಎಂತ ಬಟ್ಟೆ ಹಾಕಿದರೆ ನಿನಗೇನಪ್ಪ ಕಷ್ಟ. ನಾವು ಇದುವರೆಗೆ ಇಂತ ಬಟ್ಟೆ ಹಾಕಿದ್ದಿಲ್ಲ, ಇದೀಗ ನಾವು ಹಾಕುತ್ತಿದ್ದೇವೆ ಎಂದರು.
ರಾಹುಲ್ ಗಾಂಧಿಗೆ ಸವಾಲು ಹಾಕಿದ ರಾಮುಲು, ನಿಮಗೆ ತಾಕತ್ ಇದ್ದರೆ ನಿಮ್ಮ ಹೆಸರಿನ ಜೊತೆ ಇರುವ ಗಾಂಧಿ ಎನ್ನುವ ಶಬ್ದ ಬಿಟ್ಟು ಹೊರಬನ್ನಿ. ನೀವು ಗಾಂಧಿ ಶಬ್ದ ಸೇರಿಸಿಕೊಂಡು ರಾಜಕಾರಣ ಮಾಡುತ್ತಿದ್ದೀರಿ. ನೀವು ಗಾಂಧಿ ಶಬ್ದ ತಗೆದರೆ ಬಳ್ಳಾರಿ ಬಿಜೆಪಿ ಕಾರ್ಯಕರ್ತರಿಗೂ ಸಾಟಿಯಾಗಲ್ಲ. ಅವರಷ್ಟು ಶಕ್ತಿಯೂ ನಿಮಗಿಲ್ಲ. ರಾಹುಲ್, ಪ್ರಿಯಾಂಕಾಗೆ ದೇವಸ್ಥಾನ ನೆನಪಾಗಿದೆ. ದೇಶದಲ್ಲಿ ಹಿಂದೂ ಓಟು ಪಡೆಯಲು ದೇವಸ್ಥಾನಕ್ಕೆ ಹೋಗ್ತಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರನ್ನು ಅವಿದ್ಯಾವಂತ ಅಂತಿರಾ, ಅವರು ಹೇಳಿದಷ್ಟು ವಚನಗಳನ್ನು ಉಗ್ರಪ್ಪ ಹೇಳ್ತಾರಾ? ಉಗ್ರಪ್ಪ ಅವರೇ ನಿಮಗೆ ಸವಾಲ್ ನಮ್ಮ ದೇವೇಂದ್ರಪ್ಪ ವಚನ ಹೇಳಿದಂತೆ ನೀವು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಅವರ ಹಾಗೆ ವಚನ ಹೇಳಿದರೆ ನಾನು ರಾಜಕೀಯದಿಂದ ನಿವೃತ್ತನಾಗುವುದಾಗಿ ಸವಾಲ್ ಹಾಕಿದರು.
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಕಾಂಗ್ರೆಸ್ ನಾಯಕರು ಇಷ್ಟಪಡುತ್ತಿಲ್ಲ. ಡಿ ಕೆ ಶಿವಕುಮಾರ್ ಕುಮಾರಸ್ವಾಮಿ ಜೋಡೆತ್ತು ಅಂತೆ, ಅಂಬರೀಷ್ ಪತ್ನಿ ಸುಮಲತಾ ಸೋಲಿಸಲು ಇಷ್ಟೆಲ್ಲಾ ಹರಸಾಹಸ ಪಡಬೇಕಾ? ಈ ಕಳ್ಳೆತ್ತುಗಳು ಮಂಡ್ಯ, ಹಾಸನದಲ್ಲಿ ಸೋಲುತ್ತಾರೆ. ಪಾಪಾ ಇನ್ನೊಂದು ಎತ್ತು ಸಿದ್ದರಾಮಯ್ಯ ಅವರನ್ನು ಮರೆತುಬಿಟ್ರಾ? ಅವರು ಕೈ ಪಕ್ಷದ ಶಕ್ತಿ ಅವರನ್ನೇ ಬಿಟ್ಟುಬಿಟ್ಟಿದ್ದೀರಾ ಎಂದರು. ದೇವೇಂದ್ರಪ್ಪ ನಮ್ಮ ಪಕ್ಷದವರು ಎಂದು ಉಗ್ರಪ್ಪ ಹೇಳ್ತಾರೆ. ಆದರೆ ಆನಂದ್ ಸಿಂಗ್, ನಾಗೇಂದ್ರ ಇವರೆಲ್ಲಾ ಎಲ್ಲಿದ್ದವರು.
ಅವರೆಲ್ಲಾ ಕಾಂಗ್ರೆಸ್ ಗೆ ಹೋದಾಗ ಏನು ಆಗಲಿಲ್ಲ, ಇದೀಗ ದೇವೇಂದ್ರಪ್ಪ ಬಂದರೆ ತಳಮಳವಾ? ಎಂದು ಪ್ರಶ್ನಿಸಿದರು.
ಬಳ್ಳಾರಿಯ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಮಾತನಾಡಿ, ನನಗೆ ವಿದ್ಯೆ ಬರಲ್ಲ ಎಂದು ಡಿ ಕೆ ಶಿವಕುಮಾರ್ ಹೀಯಾಳಿಸುತ್ತಾರೆ. ಇದು ಸರಿಯಲ್ಲ. ಕ್ಷೇತ್ರದಾದ್ಯಂತ ಈಗಾಗಲೇ ಒಂದು ಸುತ್ತು ಪ್ರಚಾರ ಮಾಡಿದ್ದೇನೆ. ಮೋದಿ ಯೋಜನೆ ಜನರಿಗೆ ತಿಳಸ್ತಿದ್ದೇವೆ, ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡಬೇಕು. ಅದೇ ರೀತಿ ಕೆಲಸ ಮಾಡ್ತೇನೆ, ಕಾರ್ಯಕರ್ತರ ಪ್ರವಾಹವೇ ಹರಿದಿದೆ. ಬಿಜೆಪಿ ಗೆಲ್ಲೋದ್ರಲ್ಲಿ ಸಂದೇಹವೇ ಇಲ್ಲ, 1974 ರಿಂದ ನಾನು ರಾಜಕೀಯ ಜೀವನದಲ್ಲಿ ಇದ್ದೇನೆ. ರಾಜಕೀಯ ಅನುಭವ ಇದೆ ನಾನು ಕಲಿತ ವಿದ್ಯೆಯಿಂದಲೇ ಅಭಿವೃದ್ದಿ ಹೊಂದಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲಿದ್ದೇನೆ ಎಂದರು.
ರೋಡ್ ಶೋ ನಲ್ಲಿ ಶಾಸಕ ಸೋಮಶೇಖರ ರೆಡ್ಡಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಬಿಜೆಪಿ ಮುಖಂಡರಾದ ಮೃತ್ಯುಂಜಯ ಜಿನಗಾ ಸೇರಿದಂತೆ ಹಲವರು ಭಾಗವಹಿಸಿದ್ದರು.