ದಾವಣಗೆರೆ:
ಅಮೇರಿಕಾದಲ್ಲಿ ನಡೆದ ನೈಜ ಘಟನೆಯ ವಿಷಯ ಆಧರಿಸಿ, ಎನ್ಆರ್ಐ ಕನ್ನಡಿಗರೇ ಸೇರಿ ನಿರ್ಮಿಸಿರುವ `ರತ್ನಮಂಜರಿ’ ಸಿನಿಮಾ ಮೇ 17ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ಪ್ರಸಿದ್ಧ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಶೇ.40ರಷ್ಟು ಭಾಗವು ಅಮೇರಿಕಾದಲ್ಲಿ ಹಾಗೂ ಇನ್ನುಳಿದ ಭಾಗವು ಮಡಿಕೇರಿಯಲ್ಲಿ ಚಿತ್ರೀಕರಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿರುವ ‘ರತ್ನಮಂಜರಿ’ ಚಿತ್ರವು ಮೇ 17 ರಿಂದ ರಾಜ್ಯದ 80ರಿಂದ 100 ಚಿತ್ರ ಮಂದಿರದಲ್ಲಿ ತೆರೆ ಕಾಣಲಿದೆ ಎಂದರು.
ರಾಜ್ಯದಲ್ಲಿ ಬಿಡುಗಡೆಗೊಂಡ 2 ವಾರದ ನಂತರ ಅಮೇರಿಕಾ ಹಾಗೂ ಯುರೋಪ್ನಲ್ಲೂ ಸಹ ಚಿತ್ರ ಪ್ರದರ್ಶನ ಕಾಣಲಿದೆ. ಅಮೇರಿಕದಲ್ಲಿ ನೆಲೆಸಿರುವ ಕೆಲ ಕನ್ನಡಿಗರು ಸಹ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಾಯಕ ನಟರಾಗಿ ರಾಜ್ಚರಣ್ ಅಭಿನಯಿಸಿದ್ದು. ನಟಿಯರಾಗಿ ಅಖಿಲಾ ಪ್ರಕಾಶ್, ಪಲ್ಲವಿ ರಾಜು ಹಾಗೂ ಶ್ರದ್ಧಾ ಸಾಲಿಯಾನ ಬಣ್ಣ ಹಚ್ಚಿದ್ದು, ಈ ಮೂವರಲ್ಲಿ ‘ರತ್ನಮಂಜರಿ’ ಯಾರು ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಮೂಡಿಸಿಕೊಂಡು ಹೋಗಲಿದೆ ಎಂದು ಹೇಳಿದರು.
ಚಿತ್ರದಲ್ಲಿ ಅದ್ಭುತವಾದ ಏಳು ಹಾಡುಗಳಿವೆ. ಹರ್ಷವರ್ಧನ ಸಂಗೀತ ಸಂಯೋಜನೆ ಮಾಡಿದ್ದರೆ, ಪ್ರೀತಂ ತಗ್ಗಿನಮನೆ ಕ್ಯಾಮೇರಾ ಹಿಡಿದಿದ್ದಾರೆ. ಸುಮಾರು 50 ವರ್ಷಕ್ಕೂ ಹಳೆದಾದ `ರತ್ನಮಂಜರಿ’ ಚಿತ್ರದಷ್ಟೆ ಯಶಸ್ವಿ ಚಿತ್ರ ಇದಾಗಲಿದ್ದು, ವಿಭಿನ್ನವಾದ ಸಂಗೀತ, ಸಾಹಿತ್ಯ ಈ ಚಿತ್ರದಲ್ಲಿದೆ ಎಂದರು.
ಚಿತ್ರನಟ ರಾಜ್ಚರಣ್ ಮಾತನಾಡಿ, ಅಮೇರಿಕದಲ್ಲಿ ನಡೆದ ಕೊಲೆಯೊಂದರ ಮೂಲ ಹುಡುಕುತ್ತಾ ಹೋಗುವ, ಕುತೂಹಲಕಾರಿ ಕಥಾ ಹಂದರವನ್ನು ಚಿತ್ರ ಹೊಂದಿದೆ. ಯುಎಸ್ಎದಲ್ಲಿ ಚಿತ್ರೀಕರಣ ಮಾಡುವಾಗ, ಹಲವಾರು ತೊಂದರೆಗಳು ಎದುರಾದರೂ, ಅಲ್ಲಿನ ಕನ್ನಡಿಗರು ನೀಡಿರುವ ಸಹಕಾರವನ್ನು ಎಂದೂ ಸಹ ಮರೆಯಲಾಗಲ್ಲ ಎಂದು ಹೇಳಿದರು.
ನಾಯಕಿ ಅಖಿಲಾ ಪ್ರಕಾಶ್ ಮಾತನಾಡಿ, ಚಿತ್ರದಲ್ಲಿ ನಾನು ಸೇರಿದಂತೆ ಮೂವರು ನಾಯಕಿಯರಾಗಿ ಅಭಿನಯಿಸಿದ್ದೇವೆ. ಪ್ರಮುಖ ನಾಯಕಿಯ ಪಾತ್ರ ನನ್ನದಾಗಿದ್ದರೂ, ಮೂವರಲ್ಲಿ `ರತ್ನಮಂಜರಿ’ ಯಾರು ಎಂಬುದು ಇನ್ನೂ ನನಗೆ ಗೊತ್ತಾಗಿಲ್ಲ. ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರು ಚಿತ್ರವನ್ನು ನೋಡಿ ಬೆಂಬಲಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ಎಸ್. ಸಂದೀಪ್ಕುಮಾರ್, ನಟರಾಜ್ ಹಳೇಬಿಡು ಮತ್ತಿತರರು ಹಾಜರಿದ್ದರು.