ದಾವಣಗೆರೆ:
ಪೊಲೀಸರು, ರಾಜಕಾರಣಿಗಳು ಯಾರೂ ಇಲ್ಲಿ ಸತ್ಯ ಹರಿಶ್ಚಂದ್ರರಲ್ಲ. ಬಡವರು ಜೀವನಕ್ಕಾಗಿ ಒಂದೆರಡು ಎತ್ತಿನ ಗಾಡಿ ಮರಳು ಸಾಗಿಸಿದರೇ ತಪ್ಪೇನು? ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಅವರನ್ನು ಪ್ರಶ್ನಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ರಾಜಶೇಖರ ಬಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸರು ಮಾಮೂಲಿ ವಸೂಲಿ ಮಾಡಿದ್ದಾರೆ. ನಾನೇ ನಾಳೆ ಹೊಳೆಗೆ ಇಳಿಯುತ್ತೇನೆ, ನೀವು ಕೇಸ್ ಮಾಡಿರಿ, ನಾನು ಅದಕ್ಕೆಲ್ಲ ಹೆದರುವುದಿಲ್ಲ. ನಮ್ಮ ಸಹಕಾರವಿಲ್ಲದೇ ನೀವು ಕೆಲಸ ಮಾಡಲು ಸಾಧ್ಯವೇ? ಎಂದು ನೇರವಾಗಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್, ನೀವೇ (ಜನಪ್ರತಿನಿಧಿಗಳು) ರೂಪಿಸಿದ ಕಾನೂನಿನ ಪ್ರಕಾರ ನಾವು ಕೆಲಸ ಮಾಡುತ್ತಿದ್ದೇವೆ. ಒಂದು ಬಾರಿ ಗಾಡಿಯಲ್ಲಿ ಮರಳು ತೆಗೆದುಕೊಂಡು ಹೋದರೆ ಸರಿ, ಪದೇ ಪದೇ ಮರಳು ತೆಗೆದುಕೊಂಡು ಹೋದಾಗ ಎಚ್ಚರಿಕೆ ನೀಡಿ ಪ್ರಕರಣ ದಾಖಲಿಸಲಾಗುತ್ತಿದೆ. ಅಲ್ಲದೇ, ಜನರು ಮರಳು ತೆಗೆದುಕೊಂಡು ಹೋಗಿ ಮನೆ ನಿರ್ಮಾಣ ಮಾಡಿಕೊಳ್ಳುತ್ತಿಲ್ಲ. ಬದಲಿಗೆ ಒಂದೆಡೆ ಸಂಗ್ರಹಿಸಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ರೇಣುಕಾಚಾರ್ಯ, ನದಿ ಪಾತ್ರದ ಗ್ರಾಮಗಳ ಜನರು ಆಶ್ರಯ ಮನೆ ಕಟ್ಟಿಕೊಳ್ಳಲು ಹಾಗೂ ಜನರು ದೇವಸ್ಥಾನ ಕಟ್ಟಲು ಮರಳು ಸಾಗಣೆ ಮಾಡುವುದಕ್ಕೆ ಪೊಲೀಸರು ಅಡ್ಡಿಪಡಿಸಿ ದಂಡ ವಿಧಿಸುತ್ತಿದ್ದಾರೆ. ಎತ್ತಿನ ಗಾಡಿ ಹಾಗೂ ಬೈಕ್ ಮೇಲೆ ಮರಳು ಸಾಗಿಸುವವರ ಮೇಲೆ ದಂಡ ವಿಧಿಸಲಾಗುತ್ತಿದೆ. ಈ ರೀತಿ ದಂಡ ವಿಧಿಸಲು ಯಾರು ಅಧಿಕಾರ ಕೊಟ್ಟಿದ್ದಾರೆ? ಇದೇನು ಪೊಲೀಸ್ ರಾಜ್ಯವೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ದನಿ ಗೂಡಿಸಿದ ಹರಿಹರ ಶಾಸಕ ಎಸ್.ರಾಮಪ್ಪ, ಹರಿಹರದಲ್ಲಿ ಬೈಕ್ ಮೇಲೆ ಮರಳು ಸಾಗಿಸುತ್ತಿರುವವರನ್ನು ತಡೆದು ಪೊಲೀಸರು ಹಣ ವಸೂಲಿ ಮಾಡಿದ್ದಾರೆಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಸಂಬಂಧಿಸಿದ ವ್ಯಕ್ತಿಗೆ ನೇರವಾಗಿ ನನಗೆ ಕರೆ ಮಾಡಲು ತಿಳಿಸಿ. ನಾನೇ ಈ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಕೆರೆಯಲ್ಲಿರುವ ಮಣ್ಣು ಮಿಶ್ರಿತ ಮರಳು ಬಳಸಲೂ ಸಹ ಪೊಲೀಸರು ಬಿಡುತ್ತಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ಎಂ-ಸ್ಯಾಂಡ್ನವರು ಎಷ್ಟು ಬೇಕಾದರೂ ಸ್ಯಾಂಡ್ ಸಾಗಿಸಲು ಅನುಮತಿ ನೀಡಲಾಗಿದೆ. ಆದರೆ, ಮರಳು ಸಾಗಣೆಯ ವಾಹನಗಳಿಗೆ ಮಾತ್ರ ಇಂತಿಷ್ಟೇ ಮರಳು ಸಾಗಿಸಬೇಕೆಂದು ಹೇಳಲಾಗುತ್ತಿದೆ. ಆರ್ಟಿಒ ನಿರ್ಬಂಧದ ಕಾರಣದಿಂದಾಗಿ ಮರಳು ಸಾಗಣೆ ಟ್ರ್ಯಾಕ್ಟರ್ಗಳು ಎರಡೆರಡು ಬಾರಿ ಓಡಾಡುವಂತಾಗಿದೆ ಎಂದು ಸಾರಿಗೆ ಅಧಿಕಾರಿಗಳನ್ನು ಸಹ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜಶೇಖರ ಪಾಟೀಲ, ಟ್ರ್ಯಾಕ್ಟರ್ನಲ್ಲಿ ಮರಳು ಸಾಗಣೆ ಮಿತಿಯನ್ನು 5 ಟನ್ಗೆ ನಿಗದಿ ಪಡಿಸಿ ಎಂದು ಸೂಚಿಸಿದರು.
ಮುಂದುವರೆದು ಮಾತನಾಡಿದ ರೇಣುಕಾಚಾರ್ಯ, ಜಿಲ್ಲೆಯಲ್ಲಿ ದೇವಸ್ಥಾನ ಮತ್ತು ವೈಯಕ್ತಿಕ ಆಶ್ರಯ ಮನೆಗಳನ್ನು ಕಟ್ಟಲು ಎಸ್.ಆರ್ ದರದ ಬದಲಾಗಿ ರಾಯಲ್ಟಿ ದರ ಮೆಟ್ರಿಕ್ ಟನ್ ಒಂದಕ್ಕೆ 60 ರಂತೆ ಮರಳನ್ನು ನೀಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಜಶೇಖರ ಪಾಟೀಲ, ಜಿಲ್ಲಾಧಿಕಾರಿ, ಸಿಇಓ ಮತ್ತು ಎಸ್ಪಿ ಇವರೊಂದಿಗೆ ಚರ್ಚಿಸಿದಂತೆ ಜಿಲ್ಲೆಯಲ್ಲಿ ಮರಳಿನ ಅಭಾವವಿಲ್ಲ. ಒಂದು ಮೆಟ್ರಿಕ್ ಟನ್ಗೆ ಎಸ್ಆರ್ ದರ 998 ರೂ.ಗಳಂತೆ ಮರಳನ್ನು ಒದಗಿಸಲಾಗುತ್ತಿದೆ. ನಿಯಮಾನುಸಾರ ಮರಳು ಬ್ಲಾಕ್ ಗುತ್ತಿಗೆದಾರರು ಎಸ್ಆರ್ ದರದಲ್ಲಿ ಸರ್ಕಾರಿ ಕೆಲಸಕ್ಕೆ ಶೇ. 25 ರಷ್ಟು ಹಾಗೂ ಶೇ.75 ನ್ನು ಸಾರ್ವಜನಿಕರಿಗೆ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ಮಾತನಾಡಿ, ಈ ಬಗ್ಗೆ ಸಾಮಾನ್ಯ ಜನತೆಗೆ ಮಾಹಿತಿ ಕೊರತೆಯಿಂದ ಮರಳು ಖರೀದಿಸಲು ಮುಂದೆ ಬರುತ್ತಿಲ್ಲವೆಂದರು. ಸಚಿವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿರುವ ಮರುಳು ಬ್ಲಾಕ್ಗಳು ಹಾಗೂ ಇಲ್ಲಿ ಲಭ್ಯವಿರುವ ಮರಳಿನ ಬಗ್ಗೆ ಜನರಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ತಿಳಿಸಿದರು.
ರಾಜ್ಯದ 13 ಜಿಲ್ಲೆಗಳಲ್ಲಿ ಮರಳು ಇಲ್ಲ. ಬೇರೆ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ತರಿಸಿಕೊಳ್ಳುವ ಸ್ಥಿತಿಯಿದೆ. ಇದನ್ನೆಲ್ಲ ದೃಷ್ಟಿಯಲ್ಲಿಟ್ಟುಕೊಂಡು ನಾಳೆ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆವ ಸಚಿವ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಮಾತನಾಡಿ, ನದಿ, ಹಳ್ಳ ಕೆರೆ ಇರುವ ಸುಮಾರು 15 ಕಿ ಮೀ ಒಳಗೆ ವಿನಾಯಿತಿ ನೀಡುವ ಕುರಿತು ಸಲಹೆ ನೀಡಿದರು. ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಕುಮಾರ್ ಮಾತನಾಡಿ, ಕಮರ್ಷಿಯಲ್ ಮತ್ತು ನಾನ್ಕಮರ್ಷಿಯಲ್ ಪಾಯಿಂಟ್ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಉಪ ಸಮಿತಿ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಬಹುದು ಎಂದರು.
ಭೂವಿಜ್ಞಾನಿ ಪ್ರದೀಪ್ ಸಭೆಯಲ್ಲಿ ಮಾತನಾಡಿ, 2018-19 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮುಖ್ಯ ಖನಿಜ ಶೇ.60.90, ಉಪ ಖನಿಜ ಶೇ.88.27 ಸೇರಿದಂತೆ ಒಟ್ಟು ಶೇ.87.43 ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 146 ಎಕರೆ 27 ಗುಂಟೆಯಲ್ಲಿ ಒಟ್ಟು 70 ಕಲ್ಲು ಗಣಿಗುತ್ತಿಗೆ ನೀಡಿದ್ದು, 32.23 ಹೆಕ್ಟೇರ್ ಪ್ರದೇಶದಲ್ಲಿ 01 ಮ್ಯಾಂಗನೀಸ್ ಗಣಿ ಗುತ್ತಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 93.06 ಎಕರೆ ವಿಸ್ತೀರ್ಣದಲ್ಲಿ ಒಟ್ಟು 45 ಕಲ್ಲುಪುಡಿ ಮಾಡುವ ಕ್ರಷರ್ಗಳಿದ್ದು, 43 ಘಟಕಗಳಿಗೆ ಚಾಲನೆಗೊಳಿಸುವ ಫಾರಂ-ಸಿ(ಪರವಾನಿಗೆ) ನೀಡಲಾಗಿದೆ.
ನಿಯಮ 7 ರ ಅಡಿಯಲ್ಲಿ ಸರ್ಕಾರಿ ಕಾಮಗಾರಿಗಳಿಗೆ 2 ಕ್ರಷರ್ಗಳಿಗೆ ಅನುಮತಿ ನೀಡಲಾಗಿದೆ. ಹೊಸದಾಗಿ ಕ್ರಷರ್ ಘಟಕ ಸ್ಥಾಪಿಸಲು 22 ಘಟಕಗಳಿಗೆ ಫಾರಂ ಬಿ1 ವಿತರಿಸಲಾಗಿದ್ದು, ಇನ್ನೂ ಪ್ರಾರಂಭವಾಗಿರುವುದಿಲ್ಲ ಎಂದರು.
ಜಿಲ್ಲೆಯಲ್ಲಿ 10.01 ಎಕರೆಯಲ್ಲಿ ಒಟ್ಟು 02 ಎಂ-ಸ್ಯಾಂಡ್ ಘಟಕಗಳಿಗೆ ಅನುಮತಿ ನೀಡಲಾಗಿದೆ. 222.20 ಎಕರೆ ವಿಸ್ತೀರ್ಣದಲ್ಲಿ ಒಟ್ಟು 15 ಚಾಲ್ತಿಯಲ್ಲಿರುವ ಮರಳು ಗುತ್ತಿಗೆಗಳಿದ್ದು, 6 ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಡಿಎಂಎಫ್ ಅಡಿಯಲ್ಲಿ 2019 ರ ಜೂನ್ ಅಂತ್ಯಕ್ಕೆ 623.94 ಲಕ್ಷ ಹಣ ಸಂಗ್ರಹವಾಗಿದೆ. 2017-18 ನೇ ಸಾಲಿಗೆ ರೂ.275.94 ಲಕ್ಷ ಕ್ರಿಯಾ ಯೋಜನೆ ಮೊತ್ತ ಅನುಮೋದನೆಗೊಂಡಿದೆ.
6 ಕಾಮಗಾರಿಗಳನ್ನು ಕೈಗೊಂಡಿದ್ದು, ರೂ.275.94 ಲಕ್ಷ ವೆಚ್ಚಗೊಂಡಿರುತ್ತದೆ. 2018-19 ನೇ ಸಾಲಿಗೆ ರೂ.269.55 ಲಕ್ಷ ಮೊತ್ತಕ್ಕೆ ಕ್ರಿಯಾಯೋಜನೆ ಸಿದ್ದಪಡಿಸಬೇಕಾಗಿದೆ ಎಂದರು.ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಜಿ.ಪಂ. ಸಿಇಓ ಹೆಚ್.ಬಸವರಾಜೇಂದ್ರ, ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ, ಭೂವಿಜ್ಞಾನಿಗಳಾದ ಪ್ರದೀಪ್, ವಿನಯಾ ಭಟ್, ಚೈತ್ರ, ಕವಿತ, ಸಾರಿಗೆ ಅಧಿಕಾರಿ ಎನ್.ಜೆ.ಬಣಕಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.