ಕೇವಲ ಲಿಂಗಾಯತರಿಗೆ ಶಿವಯೋಗ ಸೀಮಿತವಲ್ಲ

ದಾವಣಗೆರೆ:

       ಶಿವಯೋಗ ಕೇವಲ ಲಿಂಗಾಯತರಿಗೆ ಮಾತ್ರ ಸೀಮಿತವಲ್ಲ. ಶಾಂತಿ-ನೆಮ್ಮದಿ ಬಯಸುವ ಎಲ್ಲರೂ ಶಿವಯೋಗ ಮಾಡಬಹುದಾಗಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

      ನಗರದ ಶಿವಯೋಗಾಶ್ರಮದಲ್ಲಿ ಬುಧವಾರ ಸಂಜೆ ಶ್ರೀಮುರುಘರಾಜೇಂದ್ರ ವಿರಕ್ತಮಠ, ಎಸ್.ಜೆ.ಎಂ.ಶಿವಯೋಗಾಶ್ರಮ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಲಿಂ.ಶ್ರೀಅಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ 184ನೇ ಜಯಂತಿ, ಶರಣ ಸಂಗಮ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

     ಅಳಿವುದು ಕಾಯ, ಉಳಿಯುವುದು ಕೀರ್ತಿ ಎಂಬುದನ್ನು ಅರಿತು, ಅಥಣಿ ಶಿವಯೋಗಿಗಳು ಒಳ್ಳೆಯ ಸಮಾಜಮುಖಿ ಕಾರ್ಯ ಮಾಡುವ ಮೂಲಕ ನಮ್ಮ ನಡುವೆ ಇಂದಿಗೂ ಉಳಿದಿದ್ದಾರೆ. ಶಿವಯೋಗ ಸಾಧನೆ ಮಾಡಿದ ಅಥಣಿ ಶಿವಯೋಗಿಗಳು ಶಿವಯೋಗಿ ಎಂದೇ ಪ್ರಖ್ಯಾತರಾದವರಾಗಿದ್ದಾರೆಂದು ಸ್ಮರಿಸಿದರು.

       ನಮ್ಮೊಳಗೆ ಮನಸ್ಸು ಇದೆ. ಅದು ಚಂಚಲವಾಗಿದೆ. ಅದನ್ನು ಏಕಾಗ್ರತೆ ಗೊಳಿಸಲು ಶಿವಯೋಗ ಮಾಡಬೇಕಾದ ಅವಶ್ಯಕತೆ ಇದೆ. ಶಿವಯೋಗವು ಮಾನವನ ಮನವನ್ನು ಘನ-ಮನವನ್ನಾಗಿಸುತ್ತದೆ. ಘನಮನದಿಂದ ಅಸಾಧ್ಯವಾದ ಸಾಧನೆ ಮಾಡಬಹುದಾಗಿದೆ. ಸುಖ, ದುಃಖ, ಸ್ತುತಿ ನಿಂದೆ, ಮಾನ, ಅಪಮಾನಗಳನ್ನು ಸಮವಾಗಿ ಸ್ವೀಕರಿಸುವ ಮನಸ್ಸು ಶಿವಯೋಗದಿಂದ ಬರಲಿದೆ. ಆದ್ದರಿಂದ ಪ್ರತಿಯೊಬ್ಬರೂ ಶಿವಯೋಗ ಮಾಡಬೇಕೆಂದು ಕರೆ ನೀಡಿದರು.ಅಥಣಿ ಮುರುಘೇಂದ್ರ ಶಿವಯೋಗಿಗಳು ಆಧ್ಯಾತ್ಮ ಲೋಕದ ಮೇರು ಪರ್ವತವಾಗಿದ್ದಾರೆ. ಇಂದಿಗೂ ಧಾರ್ಮಿಕ ಕ್ಷೇತ್ರದಲ್ಲಿ ಅವಿಚ್ಛಿನ್ನವಾಗಿ, ಚಿರಂಜೀವಿಯಾಗಿದ್ದಾರೆ. ಅವರು ಮಹಾನ್ ವೈರಾಗ್ಯ ಮೂರ್ತಿಗಳಾಗಿದ್ದಾರೆ ಎಂದರು.

       ಎಲ್ಲರೂ ಬೇಕು, ಬೇಕೆಂದು ಹಪಾಹಪಿಗೆ ಒಳಗಾಗಿದ್ದಾರೆ. ಆದರೆ, ಅಥಣಿ ಶಿವಯೋಗಿಗಳು ಯಾವುದನ್ನೂ ಬಯಸಲಿಲ್ಲ. ತನ್ನ ಪಾಲಿಗೆ ಬಂದದನ್ನು ಶಿವನ ಪ್ರಸಾದ ಎಂದು ನಿರ್ಲಿಪ್ತತೆಯಿಂದ ಸ್ವೀಕರಿಸಿ, ಮಹಾನ್ ಯೋಗಿ ಆಗಿದ್ದಾರೆ. 19ನೇ ಶತಮಾನದಲ್ಲಿ ಬಸವ ತತ್ವಗಳನ್ನು ಕೇವಲ ಉಪದೇಶಿಸದೇ, ತಮ್ಮ ನಡೆ-ನುಡಿಯಲ್ಲಿ ಅನುಷ್ಠಾನ ಮಾಡುತ್ತಾ, ಬಸವ ತತ್ವಗಳನ್ನು ಪ್ರಸಾರ ಮಾಡಿದ್ದಾದ್ದರು. ಇವರು ಚಿತ್ರದುರ್ಗ ಮುರುಘಾ ಮಠದ ಜಯದೇವ ಜಗದ್ಗುರುಗಳಿಗೆ, ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ, ಶಿರಸಂಗಿ ಲಿಂಗರಾಜ್ ಅವರಿಗೆ, ಧಾರವಾಡದ ಮೃತ್ಯುಂಜಯ ಅಪ್ಪಗಳಿಗೆ, ಬಾಲಗಂಗಾಧರ ತಿಲಕರಿಗೆ ಆರ್ಶೀವಾದ ಮಾಡಿದ ಮಹಾತ್ಮರಾಗಿದ್ದಾರೆ ಎಂದು ಹೇಳಿದರು.

       ಜಗತ್ತಿನಲ್ಲಿ ಬಹಳ ಜನರು ಕೋಟಿ, ಕೋಟಿ ರೂ. ಸಂಪಾದಿಸಬೇಕೆನ್ನುವವರಿದ್ದಾರೆ. ಸುಖ-ಅಧಿಕಾರ ಸಂಪಾದಿಸಬೇಕೆನ್ನುವ ಜನರು ಬಹಳ ಸಂಖ್ಯೆಯಲ್ಲಿದ್ದಾರೆ. ಭೌದ್ದಿಕ ಸಿರಿ-ಸಂಪತ್ತಿನಿಂದ ಬದುಕಿನಲ್ಲಿ ನೆಮ್ಮದಿ ಸಾಧ್ಯವಿಲ್ಲ. ಆಧ್ಯಾತ್ಮ ಜೀವನದಿಂದ ನೆಮ್ಮದಿ ದೊರಕುತ್ತದೆ. ಆದ್ದರಿಂದ ಆಧ್ಯಾತ್ಮ ಜೀವನವನ್ನು ಅಳವಡಿಸಿಕೊಳ್ಳಬೇಕು. ಈ ಬದುಕನ್ನು ಕೇವಲ ತನಗೆ, ತನ್ನ ಸಂಸಾರಕ್ಕೆ ಸ್ವಾರ್ಥಕ್ಕಾಗಿ ಮೀಸಲಾಗಿಟ್ಟವರು ಇತಿಹಾಸದ ಪುಟ ಸೇರಿಲ್ಲ. ಯಾರು ನಿಸ್ವಾರ್ಥವಾಗಿ ತಮ್ಮ ಜೀವನವನ್ನು ಲೋಕ ಕಲ್ಯಾಣದ ಸೇವೆಗೆ ಮುಡುಪಾಗಿಟ್ಟಿದ್ದಾರೋ, ಅವರು ಇತಿಹಾಸ ನಿರ್ಮಿಸಿದವರಾಗಿದ್ದು, ಎಲ್ಲರೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

      ಚಿಂತಕ ನಿರಂಜನ ದೇವರಮನೆ ಮಾತನಾಡಿ, ವಿಕೃತವಾದ ಮನಸನ್ನು ಸರಿ ಮಾಡಲು ಬಸವಾದಿ ಶರಣರ ಸಂಸ್ಕಾರ ಅವಶ್ಯವಾಗಿದೆ. ಮನುಷ್ಯ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು ಎಂಬುದನ್ನು ಅರಿತು, ಮಾನವೀಯ ಪ್ರಜ್ಞೆಯೊಂದಿಗೆ ಬದುಕು ಕಟ್ಟಿಕೊಳ್ಳಬೇಕಾಗಿದೆ. ಸಂಸ್ಕಾರವಂತರಾಗಿ, ಸಂಸ್ಕತಿ ಕಲಿಯಬೇಕು. ವ್ಯಕ್ತಿಯ ನಿಲುವು ಹೇಗಿರುತ್ತದೋ, ಸಮುದಾಯದ ನಿಲುವು ಸಹ ಅದೇ ಆಗಿರುತ್ತದೆ. ನಮ್ಮಲ್ಲಿ ಅಂತರಂಗ ಶುದ್ಧಿ ಇಲ್ಲವಾಗಿದೆ. ಲೌಕಿಕ ಬದುಕು ಆಧ್ಯಾತ್ಮ ಬದುಕಿನಲ್ಲಿ ಸಿಲುಕಿ ನರಳು ತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

      ಅಂತರಾಷ್ಟ್ರೀಯ ಜಾಜನಪದ ಕಲಾವಿದ ಡಾ.ಅಪ್ಪಗೆ ತಿಮ್ಮರಾಜು, ಮನಸ್ಸು ಕನಸ್ಸುಗಳನ್ನು ಕಟ್ಟಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಪೂಜ್ಯ ಮನೋಭಾವ ಬರುವಂತೆ ಪೋಷಕರು ಮನೆಯಲ್ಲಿ ಸಂಸ್ಕಾರ ನೀಡಬೇಕು. ಸಂಸ್ಕತಿ ಹಾಗೂ ಸಂಗೀತ ಅಳವಡಿಸಿಕೊಂಡರೇ, ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು.

     ಜಾಗತೀಕರಣದ ಹಾವಳಿಯಿಂದ ಪಾಶ್ಚಾತ್ಯ ಸಂಸ್ಕತಿಯ ದಾಸರಾಗಿದ್ದೇವೆ. ಇದರಿಂದ ಮನಸ್ಸುಗಳು ಕೆಡುತ್ತಿವೆ. ಕಟ್ಟುವ ಕೆಲಸ ಆಗುತ್ತಿಲ್ಲ. ಆದ್ದರಿಂದ ನಮ್ಮ ಪರಂಪರೆ, ಸಂಸ್ಕತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಬಸವಕೇಂದ್ರ ಅಧ್ಯಕ್ಷ ಅರುಣಕುಮಾರ್, ಜಮಖಂಡಿಯ ಬಸಪ್ಪ ಸ್ವಾಮಿ ಉಪಸ್ಥಿತರಿದ್ದರು. ರವಿ ಬಾತಿ ನಿರೂಪಿಸಿದರು. ಲಂಬಿ ಮುರುಗೇಶ್ ಸ್ವಾಗತಿಸಿದರು.

 

Recent Articles

spot_img

Related Stories

Share via
Copy link
Powered by Social Snap