ಬೆಂಗಳೂರು
ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ರಾಜ್ಯ ಸಚಿವ ಸಂಪುಟ ಗುರುವಾರ ಬೆಳಿಗ್ಗೆ ವಿಸ್ತರಣೆಯಾಗಲಿದ್ದು ಉಮೇಶ್ ಕತ್ತಿ,ಅರವಿಂದ ಲಿಂಬಾವಳಿ,ನಾರಾಯಣ ಗೌಡ,ಬಿ.ಸಿ.ಪಾಟೀಲ್ ಸೇರಿದಂತೆ ಹಲ ಪ್ರಮುಖರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ.
ಆದರೆ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವವರು ಎಷ್ಟು ಮಂದಿ?ಎಂಬುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದ್ದು ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಲೇ ಇದೆ.ಗುರುವಾರ ಬೆಳಿಗ್ಗೆ 10:30 ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು ರಾಜ್ಯಪಾಲ ವಜೂಭಾಯಿ ವಾಲಾ ಅವರು ಗೌಪ್ಯತಾಪ್ರತಿಜ್ಞಾ ವಿಧಿ ಭೋಧಿಸಲಿದ್ದಾರೆ.
ಆದರೆ ಮಂತ್ರಿ ಮಂಡಲಕ್ಕೆ 12 ಮಂದಿ ಸೇರ್ಪಡೆಯಾಗಲಿದ್ದಾರೋ?13 ಮಂದಿ ಸೇರ್ಪಡೆಯಾಗಲಿದ್ದಾರೋ?ಅಥವಾ 15 ಮಂದಿ ಸೇರ್ಪಡೆಯಾಲಿದ್ದಾರೋ?ಎಂಬ ಪ್ರಶ್ನೆ ಗುರುವಾರ ಬೆಳಿಗ್ಗೆ ಇತ್ಯರ್ಥವಾಗಲಿದೆ.
ಈ ಮುನ್ನ ಮಂತ್ರಿ ಮಂಡಲಕ್ಕೆ ಹೊರಗಿನಿಂದ ಬಂದು ಶಾಸಕರಾದವರ ಪೈಕಿ ಹತ್ತು ಮಂದಿ ಹಾಗೂ ಬಿಜೆಪಿಯ ಮೂರು ಮಂದಿ ಮಂತ್ರಿಗಳಾಗಲಿದ್ದಾರೆ ಎಂಬುದು ಬಹುತೇಕ ನಿಕ್ಕಿಯಾಗಿತ್ತು.ಆದರೆ ಬಿಜೆಪಿ ವತಿಯಿಂದ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವವರ ಪಟ್ಟಿಯಲ್ಲಿದ್ದ ಸಿ.ಪಿ.ಯೋಗೇಶ್ವರ್ ಅವರಿಗೆ ಯಾವ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದು ಎಂಬ ಕೂಗು ಬಿಜೆಪಿಯಲ್ಲೇ ದಟ್ಟವಾಗುತ್ತಿರುವುದರಿಂದ ವರಿಷ್ಟರು ವಿವಶರಾಗಿದ್ದಾರೆ.
ಹೀಗಾಗಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುವವರ ಸಧ್ಯದ ಪಟ್ಟಿಯಲ್ಲಿ ಹನ್ನೆರಡು ಮಂದಿಯ ಹೆಸರುಗಳು ಮಾತ್ರ ಇದ್ದು ಸಿ.ಪಿ.ಯೋಗೇಶ್ವರ್ ಅವರ ಹೆಸರು ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪಟ್ಟು ಹಿಡಿದಿದ್ದರೆ,ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಉಳಿದವರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.ಹೀಗಾಗಿ ಯಾವ ಕಾರಣಕ್ಕೂ ಅವರು ಮಂತ್ರಿಯಾಗುವುದು ಬೇಡ ಎಂದು ವರಿಷ್ಟರು ಹಗ್ಗ ಜಗ್ಗಾಟ ನಡೆಸಿದ್ದಾರೆ.
ಹೀಗಾಗಿ ಮಂತ್ರಿಗಳಾಗುವವರ ಪಟ್ಟಿಯಲ್ಲಿ ಹನ್ನೆರಡು ಮಂದಿಯ ಹೆಸರುಗಳಿದ್ದು ಅದೇ ಕಾಲಕ್ಕೆ ಅಂತಿಮ ಕ್ಷಣದಲ್ಲಿ ಯಡಿಯೂರಪ್ಪ ತಮ್ಮ ಬಿಗಿಪಟ್ಟಿನಲ್ಲಿ ಸಕ್ಸಸ್ ಆದರೆ ಸಿ.ಪಿ.ಯೋಗೇಶ್ವರ್ ಅವರು ಸೇರ್ಪಡೆಯಾಗಿ ಒಟ್ಟು ಹದಿಮೂರು ಮಂದಿ ಮಂತ್ರಿಗಳಾಗಲಿದ್ದಾರೆ ಎಂಬುದು ಬಿಜೆಪಿ ಮೂಲಗಳ ಹೇಳಿಕೆ.
ಅದೇ ಕಾಲಕ್ಕೆ ಸಿ.ಪಿ.ಯೋಗೇಶ್ವರ್ ಅವರ ಹೆಸರನ್ನು ಕೈ ಬಿಡಿ.ಆದರೆ ಅದೇ ಕಾಲಕ್ಕೆ ಹಾಲಪ್ಪ ಆಚಾರ್,ಅಂಗಾರ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಮಂತ್ರಿಗಳನ್ನಾಗಿ ಮಾಡಬೇಕು ಎಂಬ ಪ್ರಸ್ತಾಪ ಹೈಕಮಾಂಡ್ ಕಡೆಯಿಂದಲೇ ಬಂದಿದೆ.
ಅಂಗಾರ ಸತತ ಆರು ಬಾರಿ ಶಾಸಕರಾದವರು,ಹಾಲಾಡಿ ಶ್ರೀನಿವಾಸ ಶೆಟ್ಟಿ ಐದು ಬಾರಿ ಶಾಸನ ಸಭೆಗೆ ಆಯ್ಕೆಯಾಗಿ ಬಂದವರು.ಅದೇ ರೀತಿ ಹಾಲಪ್ಪ ಆಚಾರ್ ಅವರು ಸಂಘಪರಿವಾರದ ಮೂಲದಿಂದ ಬಂದ ನಿಷ್ಟರು.ಹೀಗಾಗಿ ಇವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದು ಈ ಪ್ರಸ್ತಾವದ ವಿವರ.
ಹೀಗಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವವರು 12 ಮಂದಿಯೋ?13 ಮಂದಿಯೋ?ಅಥವ 15 ಮಂದಿಯೋ?ಎಂಬ ವಿಷಯದಲ್ಲಿ ಇನ್ನೂ ಕುತೂಹಲ ಉಳಿದುಕೊಂಡಿದ್ದು ಗುರುವಾರ ಬೆಳಿಗ್ಗೆ ಈ ಪ್ರಶ್ನೆಗೆ ಉತ್ತರ ದೊರೆಯಲಿದೆ.ಉಳಿದಂತೆ ಬಿಜೆಪಿ ಸರ್ಕಾರ ಬರಲು ಕಾರಣರಾದ ಮತ್ತು ಉಪಚುನಾವಣೆಯಲ್ಲಿ ನಿಂತು ಗೆದ್ದಿರುವ ಎಸ್.ಟಿ.ಸೋಮಶೇಖರ್,ಭೈರತಿ ಬಸವರಾಜ್ , ಗೋಪಾಲಯ್ಯ ,ಬಿ.ಸಿ.ಪಾಟೀಲ್,ಶ್ರೀಮಂತ ಪಾಟೀಲ್,ರಮೇಶ್ ಜಾರಕಿಹೊಳಿ,ಶಿವರಾಂ ಹೆಬ್ಬಾರ್,ನಾರಾಯಣಗೌಡ,ಸುಧಾಕರ್ ಹಾಗೂ ಆನಂದ್‍ಸಿಂಗ್ ಅವರು ಗುರುವಾರ ಮಂತ್ರಿಗಳಾಗಲಿದ್ದಾರೆ.
ಬಿಜೆಪಿಯ ವತಿಯಿಂದ ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಮಂತ್ರಿಗಳಾಗುವುದು ಬಹುತೇಕ ನಿಶ್ಚಿತವಾಗಿದ್ದು ಹತ್ತು ವರ್ಷಗಳಿಗಿಂತ ಹೆಚ್ಚು ವರ್ಷಗಳಿಂದ ಬಿಜೆಪಿಯಲ್ಲಿರುವವರು ಎಂಬ ಅಂಶವನ್ನು ಇವರ ಸೇರ್ಪಡೆಗೆ ಮಾನದಂಡವಾಗಿ ಇರಿಸಿಕೊಳ್ಳಲಾಗಿದೆ.
ಉಳಿದಂತೆ ಸಿ.ಪಿ.ಯೋಗೇಶ್ವರ್ ಅವರಿಗೆ ಲಕ್ಕು ಕುದುರುತ್ತದಾ?ಅಥವಾ ಹಾಲಪ್ಪ ಆಚಾರ್,ಅಂಗಾರ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಲಕ್ಕು ಕುದುರುತ್ತದಾ?ಎಂಬುದನ್ನು ಕಾದು ನೋಡಬೇಕಿದೆ.
ಈ ಮಧ್ಯೆ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲು ಎರಡು ಡಜನ್‍ಗೂ ಹೆಚ್ಚು ಮಂದಿ ನಿರಂತರ ಯತ್ನ ನಡೆಸುತ್ತಲೇ ಇದ್ದು ತಮಗಿರುವ ಸಂಪರ್ಕವನ್ನು ಬಳಸಿಕೊಂಡು ಹೈಕಮಾಂಡ್ ವರಿಷ್ಟರಿಗೆ ಇಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
