ರಸ್ತೆ ಬದಿ ನಿತ್ಯ ಬೀಳುತ್ತಿದೆ ಮದ್ಯದಂಗಡಿ ತ್ಯಾಜ್ಯ

ಹುಳಿಯಾರು:

      ಪಟ್ಟಣದ ಮದ್ಯದಂಗಡಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಮನ ಬಂದಂತೆ ವಿಲೇವಾರಿ ಮಾಡುತ್ತಿದ್ದರೂ ಪಪಂ ಕಣ್ಮುಚ್ಚಿ ಕುಳಿತಿದೆ.ಪಟ್ಟಣದ ಹೊರವಲಯದ ಎಸ್‍ಎಲ್‍ಆರ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 234 ಪಕ್ಕದಲ್ಲಿ ಮದ್ಯದಂಗಡಿ ತ್ಯಾಜ್ಯ ರಾಶಿಯಾಗಿ ಮೂರ್ನಲ್ಕು ಕಡೆ ಬಿದ್ದಿದೆ.

     ಮದ್ಯದ ಖಾಲಿ ಸಾಚೆಟ್‍ಗಳು ಜೊತೆ ಪಟ್ಟಣದಲ್ಲಿ ನಿಶೇಧವಿರುವ ಪ್ಲಾಸ್ಟಿಕ್ ಲೋಟ, ಕವರ್ ಸಹ ಬಿದ್ದಿರುವುದು ಪಪಂ ಕರ್ತವ್ಯವನ್ನೇ ಅಣಕ ಮಾಡುವಂತಿದೆ. ಹುಳಿಯಾರು ಪಟ್ಟಣದಲ್ಲಿರುವ ಎಲ್ಲಾ ಮದ್ಯದಂಗಡಿಗಳೂ ಮದ್ಯ ಮಾರಾಟ ಕೇಂದ್ರವಾಗಿವೆ. ಆದರೂ ಸಹ ಅಂಗಡಿಯಲ್ಲೇ ಮದ್ಯ ಕುಡಿಯಲು ನೀಡುತ್ತಿದ್ದಾರೆ. ಹೀಗೆ ಕುಡಿಯಲು ನಿಷೇಧವಿರುವ ಪ್ಲಾಸ್ಟಿಕ್ ಲೋಟಗಳನ್ನು ನೀಡುತ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿಯವರೆವಿಗೂ ಈ ತ್ಯಾಜ್ಯವನ್ನು ಅಂಗಡಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಮದ್ಯರಾತ್ರಿ ಬೀದಿ ಬದಿಯಲ್ಲಿ ಸುರಿಯುತ್ತಿದ್ದಾರೆ.

   ಅಬಕಾರಿ ಇಲಾಖೆ ಜಾಣಕುರುಡು ಪ್ರದರ್ಶಿಸುತ್ತಿರುವುದರಿಂದ ಮದ್ಯದಂಗಡಿಗಳು ಇಲ್ಲಿ ರೆಸ್ಟೋರೆಂಟ್‍ಗಳಾಗಿ ಪರಿವರ್ತನೆಗೊಂಡಿವೆ. ಅಲ್ಲದೆ ಪಟ್ಟಣ ಪಂಚಾಯ್ತಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳದಿದ್ದರಿಂದ ಮದ್ಯದಂಗಡಿಗಳಲ್ಲಿ ಪ್ಲಾಸ್ಟಿಕ್ ಲೋಟಗಳ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಪರಿಣಾಮ ಅಬಕಾರಿ ಕಾನೂನು, ಪಪಂ ನಿಯಮ ಮದ್ಯದ ದೊರೆಗಳಿಗೆ ಇಲ್ಲಿ ಅನ್ವಯಿಸಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಈಗಷ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಸುಂದರವಾದ ರಸ್ತೆಯನ್ನು ಈ ಮದ್ಯದಂಗಡಿ ತ್ಯಾಜ್ಯ ಅಂದಗೆಡಿಸುತ್ತಿದೆ.

     ಅಲ್ಲದೆ ಕೆಲವೊಮ್ಮೆ ತ್ಯಾಜ್ಯ ಸುರಿದು ಬೆಂಕಿ ಸಹ ಇಡುತ್ತಿರುವುದರಿಂದ ಪರಿಸರ ಮಾಲಿನ್ಯಕ್ಕೂ ಕಾರಣರಾಗುತ್ತಿದ್ದಾರೆ. ತ್ಯಾಜ್ಯದ ಜತೆ ಮಳೆ ನೀರು ಸೇರಿ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನಾದರೂ ಅಬಕಾರಿ ಇಲಾಖೆಯವರು ಮದ್ಯದಂಗಡಿಯಲ್ಲೇ ಮದ್ಯ ಸೇವನೆಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಪಪಂ ಅಧಿಕಾರಿಗಳೂ ಸಹ ನಿಷೇಧಿತ ಪ್ಲಾಸ್ಟಿಕ್ ಲೋಟ ಬಳಸುತ್ತಿರುವುದಕ್ಕೆ ದಂಡ ವಿಧಿಸಬೇಕಿದೆ. ಬಹುಮುಖ್ಯವಾಗಿ ರಸ್ತೆ ಬದಿಯಲ್ಲಿ ಮದ್ಯದಂಗಡಿ ತ್ಯಾಜ್ಯ ಹಾಕುವುದನ್ನು ತಡೆಯಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap