ಮಳೆಗೆ ಜಾರಿದ ಬಂಡೆ ಮನೆಗೆ ನುಗ್ಗಿ 3 ಮೇಕೆಗಳ ಸಾವು!!

 ಕೊರಟಗೆರೆ :

     ಸತತ ಮಳೆಯಿಂದ ಮಧ್ಯರಾತ್ರಿ ಗುಡ್ಡದ ಮೇಲಿನ ಕಲ್ಲೊಂದು ಕುಸಿದು ಮನೆಯ ಗೋಡೆ ಬಿದ್ದು ಕಲ್ಲು ನೇರ ಮನೆ ಒಳಗೇ ನುಗ್ಗಿದ ಪರಿಣಾಮ ಮೂರು ಮೇಕೆಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ತಾಲ್ಲೂಕು ವ್ಯಾಪ್ತಿಯಲ್ಲಿ ಜರುಗಿದೆ.

      ತಾಲ್ಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ. ವೆಂಕಟಾಪುರ ಬಳಿಯ ಮಣ್ಣು ತಿಮ್ಮನಹಳ್ಳಿಯಲ್ಲಿ ಈ ದುರ್ಘಟನೆ ಜರುಗಿದ್ದು, ಮನೆ ಮಾಲೀಕ ಚಿಕ್ಕರಂಗಯ್ಯನ ಮಗ ಮಂಜುನಾಥನ ಕುಟುಂಬ ಈ ದುರ್ಘಟನೆಯಿಂದ ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದೆ.

      ತಾಲ್ಲೂಕಿನಲ್ಲಿ ಸತತವಾಗಿ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದ್ದು, ಭೂಕುಸಿತದಿಂದ ಏಕಾಏಕಿ ಗುಂಡೊಂದು ಗುಡ್ಡದಿಂದ ಜಾರಿ ಮನೆಯ ಗೋಡೆಯನ್ನು ಕೆಡವಿ ಮನೆ ಒಳಗೇ ನುಗ್ಗಿದೆ. ಆಗ ಮನೆಯಲ್ಲಿ ಕಟ್ಟಿದ್ದ ಮೂರು ಮೇಕೆಗಳು ಸ್ಥಳದಲ್ಲೇ ಸಾವಿಗೀಡಾಗಿವೆ. ಅಲ್ಲದೆ ಎರಡು ಸೀಮೆಹಸುಗಳು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿವೆ. ಇದಕ್ಕೂ ಮಿಗಿಲಾಗಿ ಪಕ್ಕದ ಕೋಣೆಯಲ್ಲಿಯೇ ಮಲಗಿದ್ದ ಮಂಜುನಾಥ್ ಮಡದಿ ಮತ್ತು ಮಕ್ಕಳು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ.

     ಬಂಡೆ ಜಾರಿ ಉರುಳಿದ ರಭಸಕ್ಕೆ ಮಂಜುನಾಥ್ ಮಲಗಿದ್ದ ಕೋಣೆಗೆ ನುಗ್ಗಿದ್ದರೆ, ನಾಲ್ಕು ಜೀವಗಳು ಹೋಗುತ್ತಿದ್ದವು ಎಂದು ಆತಂಕದಿಂದ ಭಯಭೀತರಾಗಿ ಮನೆ ಮಾಲೀಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗ್ರಾಪಂ ಹಂಚಿಕೆ ಅವೈಜ್ಞಾನಿಕ :

      ನೀಲಗೊಂಡನಹಳ್ಳಿ ಗ್ರಾಮಪಂಚಾಯಿತಿ ಕಳೆದ 5-6 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ಬೆಟ್ಟದ ಬುಡದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಬಡಕುಟುಂಬ ಬೇರೆ ಜಾಗ ಇಲ್ಲದೆ ಗ್ರಾಮ ಪಂಚಾಯತ್ ನಿವೇಶನಗಳನ್ನೆ ಅವಲಂಬಿಸಿ ಇಲ್ಲಿಯೇ ಮನೆಗಳನ್ನು ಕಟ್ಟಿಕೊಂಡಿದೆ. ಅದರಲ್ಲೂ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕಟ್ಟಲಾದ ಮನೆಗಳೆ ಹೆಚ್ಚಿದ್ದು, ಇಂತಹ ಗುಡ್ಡಪ್ರದೇಶಗಳಲ್ಲಿ ಮನೆ ಕಟ್ಟುವುದರಿಂದ ಮುಂದೊಂದು ದಿನ ಅಪಾಯವಿದೆ ಎಂಬ ಅರಿವು ಗ್ರಾಮಪಂಚಾಯಿತಿಗೆ ಇಲ್ಲ ಎಂದರೆ ಆ ಗ್ರಾಮ ಪಂಚಾಯ್ತಿ ಜವಾಬ್ದಾರಿ ಎಷ್ಟು ಎಂದು ತಿಳಿಯಬಹುದಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬೇರೆಡೆ 3 ಎಕರೆ ಸರ್ಕಾರಿ ಜಾಗವಿದ್ದರೂ, ಈ ಪ್ರದೇಶವನ್ನು ಹಂಚಿಕೆ ಮಾಡಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap