ಜಾತಿ ವಿನಾಶದ ವರೆಗೂ ಸಮ ಸಮಾಜ ಅಸಾಧ್ಯ

ದಾವಣಗೆರೆ:

       ಜಾತಿ ವಿನಾಶ ಆಗುವ ವರೆಗೂ ಅಂಬೇಡ್ಕರ್ ಕನಸಿನ ಸಮ ಸಮಾಜ ನಿರ್ಮಾಣ ಅಸಾಧ್ಯ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್ ಅಭಿಪ್ರಾಯಪಟ್ಟರು.

      ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಕರ್ನಾಟಕ ಜನಶಕ್ತಿ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ಜನತೆಯ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ದೇಶದಲ್ಲಿ ಸಮಾನತೆ ಬರಬೇಕಾದರೆ, ಜಾತಿ ವಿನಾಶ ಆಗಬೇಕೆಂಬುದಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಯಸಿದ್ದರು. ಆದರೆ, ಇಂದಿಗೂ ಸಹ ಜಾತಿಯ ಬೇರುಗಳು ಆಳವಾಗಿ ಬೇರೂರಿವೆ. ಹೀಗಾಗಿ ಜಾತಿಯ ಬೇರುಗಳನ್ನು ಅಲ್ಲಾಡಿಸಲು ಸಾಧ್ಯವಾಗುತ್ತಿಲ್ಲ. ಜಾತಿ ನಿರ್ಮೂಲನೆ ಆಗುವ ವರೆಗೂ ಅಂಬೇಡ್ಕರ್ ಅವರ ಕನಸಿನ ಸಮತಾ ಸಮಾಜ ನಿರ್ಮಾಣವಾಗುವುದಿಲ್ಲ ಎಂದು ಹೇಳಿದರು.
ಸಂವಿಧಾನ ರಚಿಸುವ ಮೂಲಕ ಈ ದೇಶದ ದೀನ-ದಲಿತರಿಗೆ, ಶೋಷಿತರಿಗೆ ಹಕ್ಕುಗಳು ನೀಡಿರುವ ಅಂಬೇಡ್ಕರ್ ಅವರು ಹುಟ್ಟಿದ ದಿನವನ್ನು ಇಡೀ ಪ್ರಪಂಚವು ಜನತೆಗಳ ಹಕ್ಕುಗಳ ದಿನವನ್ನಾಗಿ ಆಚರಿಸಿದರೆ, ನಿಜಕ್ಕೂ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗಲಿದೆ ಎಂದರು.

       ಶೋಷಿತ ಸಮುದಾಯಗಳಿಗೆ ದನಿಯಾದ ಅಂಬೇಡ್ಕರ್ ಅವರೇ ತಾವು ಹುಟ್ಟಿರುವ ಜಾತಿಯ ಕಾರಣಕ್ಕೆ ಹಲವರು ಅವಮಾನ-ಅಪಮಾನ, ದೌರ್ಜನ್ಯವನ್ನು ಅನುಭವಿಸಿದ್ದರು. ಆದ್ದರಿಂದ ತಳ ಸಮುದಾಯದ ಜನತೆ ಈ ದೌರ್ಜನ್ಯ, ಶೋಷಣೆಗಳಿಂದ ಮುಕ್ತರಾಗಬೇಕಾದರೆ, ಜಾತೀಯತೆ ತೊಲಗಬೇಕೆಂಬುದಾಗಿ ಪ್ರತಿಪಾದಿಸುವ ಮೂಲಕ ಭ್ರಾತೃತ್ವದ ಸಮಾಜ ನಿರ್ಮಾಣವಾಗಬೇಕೆಂಬ ಆಶಯ ಹೊಂದಿದ್ದರು ಎಂದು ಸ್ಮರಿಸಿದರು.

        ಇಂದು ಪ್ರಜಾಪ್ರಭುತ್ವ ಉಸಿರಾಡುತ್ತಿರುವುದಕ್ಕೆ ಹಾಗೂ ಅಖಂಡ ಭಾರತದ ಪರಿಕಲ್ಪನೆ ಉಳಿದಿರುವುದಕ್ಕೆ ಸಂವಿಧಾನವೇ ಮೂಲ ಕಾರಣವಾಗಿದೆ. ನಿಜವಾದ ಗಣರಾಜ್ಯ ರೂಪುಗೊಳ್ಳಬೇಕಾದರೆ, ಜನತೆಗೆ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವೂ ಸಿಬೇಕೆಂಬುದನ್ನು ಪ್ರತಿಪಾದಿಸಿ, ಆರ್ಥಿಕ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕೆಂಬುದನ್ನು ಬಯಸಿದ್ದರು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ ಏಳು ದಶಕಗಳು ಕಳೆದರೂ ಸಹ ಆರ್ಥಿಕ ಸಂಪತ್ತು ದೇಶದ ಕೆಲವರ ಕೈಯಲ್ಲಿಯೇ ಕ್ರೊಢೀಕರಣಗೊಂಡಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

         ಲಾಭ ತರುವ ಉದ್ಯಮ, ಕೈಗಾರಿಕೆಗಳು ಪ್ರಭುತ್ವ ಅಥವಾ ಸರ್ಕಾರದ ಕೈಯಲ್ಲಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಉದ್ದಿಮೆಗಳು ಸಹ ಖಾಸಗೀಕರಣಕ್ಕೆ ಒಳಗಾಗುತ್ತಿದ್ದು, ಖಾಸಗೀರಣದಿಂದ ಸಮಾನತೆ ಸಿಗಲು ಹೇಗೆತಾನೆ ಸಾಧ್ಯ ಎಂದು ಪ್ರಶ್ನಿಸಿದರು.

       ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಅನೀಸ್ ಪಾಷಾ ಮಾತನಾಡಿ, ಚುನಾವಣಾ ನೀತಿಸಂಹಿತೆಯ ನೆಪದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದಿರುವುದು ಸರಿಯಲ್ಲ. ಚುನಾವಣೆಗೆ ಭದ್ರ ಬುನಾದಿ ಹಾಕಿದ ಅಂಬೇಡ್ಕರ್ ಜಯಂತಿಗೂ ಹಾಗೂ ನೀತಿ ಸಂಹಿತೆಗೆ ಏನು ಸಂಬಂಧ? ಎಂದು ಪ್ರಶ್ನಿಸಿದರು.

       ಅಂಬೇಡ್ಕರ್ ಅವರೇ ಸ್ವತಃ ಮಾಂಸಹಾರಿಗಳಾಗಿದ್ದರು. ಅಲ್ಲದೇ, ಅವರು ಮಾಂಸಹಾರದ ವಿರುದ್ಧ ಎಂದೂ ಸಹ ಮಾತನಾಡಿರಲಿಲ್ಲ. ಆದರೆ, ಸರ್ಕಾರ ಅಂಬೇಡ್ಕರ್ ಜಯಂತಿಯಂದು ಮಾಂಸ ಮಾರಾಟ ನಿಷೇಧಿಸಿರುವುದರ ಹಿಂದೆ ಕಾಣದ ಕೈಗಳ ಕುತಂತ್ರ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ಎಲ್ಲಾ ವರ್ಗದವರಿಗೂ ರಾಜಕೀಯ ಪ್ರಾತಿನಿಧ್ಯ ಸಿಗಬೇಕೆಂಬುದಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಬಯಸಿದ್ದರು. ಆದರೆ, ದಲಿತರು, ಅದರಲ್ಲೂ ಮುಸಲ್ಮಾನರನ್ನು ತುಳಿಯುವ ಪ್ರಯತ್ನ ನಿರಂತರವಾಗಿ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಇಂದು ಸೈನಿಕರ ಸಾಧನೆಯ ಮೇಲೆ ರಾಜಕಾರಣ ಮಾಡುತ್ತಿರುವ ಬಿಜೆಪಿ ಹಾಗೂ ಸಂಘಪರಿವಾರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಸೈನಿಕನ ತಂದೆ ಇಕ್ಲಾಖ್ ಅವರನ್ನು ಗೋಮಾಂಸ ಮನೆಯಲ್ಲಿಟ್ಟಿದ್ದಾರೆಂಬ ಕಾರಣಕ್ಕೆ ಕೊಲೆ ಮಾಡಿದರು. ಅಲ್ಲದೇ, ತಮ್ಮ ಪ್ರಭಾವ ಬಳಸಿ ಮೃತರ ಕುಟುಂಬದ ಸದಸ್ಯರ ವಿರುದ್ಧವೇ ಮಾರಣಾಂತಿಕ ಹಲ್ಲೆಯ ಸುಳ್ಳು ಪ್ರಕರಣ ದಾಖಲಿಸಿತ್ತು. ಅಧಿಕಾರದ ದಾಹಕ್ಕಾಗಿ ಬಿಜೆಪಿ ಸುಳ್ಳು ಹರಡಿ ರಾಜಕಾರಣ ಮಾಡುತ್ತಿದೆ ಎಂದು ಅವರು ದೂರಿದರು.

        ಕರ್ನಾಟಕ ಜನಶಕ್ತಿ ಜಿಲ್ಲಾ ಸಂಚಾಲಕ ಸತೀಶ್ ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ, ಪ್ರಗತಿಪರ ಚಿಂತಕ ಬಿ.ಪೀರ್ ಭಾಷಾ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ರೈತ ಮುಖಂಡ ಮೌಲಾ ನಾಯ್ಕ, ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆಯ ಲೀಲಾವತಿ, ಚೈತ್ರಾ, ನಿಜಾಮುದ್ದಿನ್ ಮತ್ತಿತರರು ಉಪಸ್ಥಿತರಿದ್ದರು. ಆದಿಲ್‍ಖಾನ್ ನಿರೂಪಿಸಿದರು, ಬಿ.ಖಲೀಲ್ ಸ್ವಾಗತಿಸಿದರು. ಪವನಕುಮಾರ್ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap