ಹಾವೇರಿ :
ಸಾಮಾಜಿಕ ತಾಣಗಳ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಸಂಸ್ಕೃತಿ, ಸಾಹಿತ್ಯ, ಭವ್ಯ ಪರಂಪರೆಯನ್ನು ಮರೆಯುತ್ತಿದ್ದು, ನಾಡಹಬ್ಬದಂತಹ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದರ ಮೂಲಕ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದು ಶಾಸಕ ನೆಹರೂ ಓಲೇಕಾರ ಹೇಳಿದರು.
ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಾಡಹಬ್ಬ ಉತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 21 ನೇ ನಾಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಲ್ಮಡಿ ಶಾಸನದಿಂದ ಆರಂಭವಾಗಿ ಇಂದಿನ ವರೆಗೆ ಕನ್ನಡ ಭಾಷೆಯು ಸಹೃದಯ ರಾಜಾಶ್ರಯದಿಂದ, ಅಪಾರ ಪಾಂಡಿತ್ಯದ ಕವಿ, ಸಾಹಿತಿಗಳಿಂದ ಅದ್ವಿತೀಯವಾಗಿ ಬೆಳೆದು ದೇಶದಲ್ಲಿಯೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ತನ್ನ ಚಲನಶೀಲತೆಯಿಂದ ಪ್ರತಿ ಕನ್ನಡಿಗನು ಹೆಮ್ಮೆ ಪಡೆಯಬಹುದಾದ ಭಾಷೆ ಇದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸವದತ್ತಿಯ ಸರಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯ ಡಾ|| ವಾಯ್.ಎಂ ಯಾಕೊಳ್ಳಿ ಮಾತನಾಡಿ ಕನ್ನಡಭಾಷೆ, ಸಾಹಿತ್ಯ, ಅತ್ಯಂತ ಶ್ರೀಮಂತವಾದದು, ಪ್ರಸ್ತುತ ಕನ್ನಡದ ನೆಲ ಜಲದ ಸಮಸ್ಯೆಗಳಿಗೆ ಕನ್ನಡದ ಜನತೆ ಏಕವ್ಯಕ್ತಿಯಂತೆ ನಿಂತು ಹೋರಾಡಬೇಕು. ಇಡೀ ವಾತಾವರಣ ಕನ್ನಡದ ವಿರುದ್ಧವಾಗಿದೆ. ಇಂತಹ ಸಂದರ್ಭದಲ್ಲಿ ಗೋಕಾಕ ಮಾದರಿಯ ಹೋರಾಟ ಇನ್ನೊಮ್ಮೆ ಆಗಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಗೋಕಾಕ ಹೋರಾಟವು ಕನ್ನಡಿಗರಲ್ಲಿ ಅದಮ್ಯ ಚೇತನವನ್ನು ಉಂಟು ಮಾಡಿತ್ತು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ|| ವಿ.ಪಿ ದ್ಯಾಮಣ್ಣನವರ ಮಾತನಾಡಿ. ನಾಡಹಬ್ಬದಂತಹ ಕಾರ್ಯಕ್ರಮದ ಮೂಲಕ ನಾಡು, ನುಡಿ, ಸಂಸ್ಕತಿಯನ್ನು ಒಂದು ಜನಾಂಗದಿಂದ ಮತ್ತೊಂದು ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಕಾರ್ಯವನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದ್ದು, ಇಂತಹ ಕಾರ್ಯಕ್ರಮಗಳಿಗೆ ಸರ್ಕಾರವು ಅನುದಾನ ನೀಡುವುದರ ಮೂಲಕ ಕನ್ನಡ ಕಟ್ಟುವ ಕೆಲಸಕ್ಕೆ ಉದಾರತೆ ತೋರಬೇಕು ಎಂದು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಹೊಸಮಠದ ಬಸವ ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡದ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರೇ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸದೇ ಆಂಗ್ಲ ಮಾಧ್ಯಮ ಶಾಲೆ ಸೇರಿಸುತ್ತಿದ್ದು, ಕನ್ನಡಾಭಿಮಾನ ಕೇವಲ ತೋರಿಕೆಯಾಗಿದ್ದು, ಪ್ರತಿ ಕನ್ನಡಿಗನು ಕನ್ನಡ ಮಾಧ್ಯಮದ ಶಾಲೆಗಳನ್ನು ಬೆಳಸಬೇಕಾಗಿದೆ ಆ ಮೂಲಕ ಕನ್ನಡ ಸಂಸ್ಕತಿ ಉಳಿಸಲು ಸಾಧ್ಯ. ನೆರೆಯ ತಮಿಳರ ಮತ್ತು ತೆಲಗು ಭಾಷಿಕರ ಭಾಷಾಭಿಮಾನವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ ಲಿಂಗಯ್ಯ, ನಾಡಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಡಾ|| ವಿ.ಪಿ ದ್ಯಾಮಣ್ಣನವರ, ಸಿ.ಎಸ್ ಹಾಲಪ್ಪನವರಮಠ, ನಾಗರಾಜ ದ್ಯಾಮನಕೊಪ್ಪ, ರಾಚಪ್ಪ ಲಂಬಿ, ಬೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ, ಎಸ್.ಎಂ ಬಡಿಗೇರ,ಕೆ.ಸಿ ಕೋರಿ, ಎಸ್.ಎನ್ ದೊಡ್ಡಗೌಡರ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಸಮತಾ ಕಲಾ ತಂಡದವರು ಪ್ರಾರ್ಥಿಸಿದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್ ಹಿರೇಮಠ ಸ್ವಾಗತಿಸಿದರು.. ನಾಗರಾಜ ದೇಶಳ್ಳಿ ನಿರೂಪಿಸಿದರು. ಕೊನೆಯಲ್ಲಿ ಎಂ.ಎಸ್ ಬಡಿಗೇರ ವಂದಿಸಿದರು. ಕಾರ್ಯಕ್ರಮದ ನಂತರ ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ