ವಿ ಟಿ ಯು ವಿಭಜನೆ ಖಂಡಿಸಿ ಬಿಜೆಪಿ ಪ್ರತಿಭಟನೆ..!!

ಬೆಂಗಳೂರು

     ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ವಿಭಜನೆ ಮಾಡಲು ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಬಿಜೆಪಿ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ತೀವ್ರವಾಗಿ ವಿರೋಧಿಸಿದೆ.

       ರಾಜಕೀಯ ಹಿತಾಸಕ್ತಿಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ವಿಭಜನೆ ಮಾಡಲು ಹೊರಟಿದ್ದು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯರಾದ ಅರುಣ್ ಶಹಪುರ್, ಶಂಕನೂರು ಹಾಗೂ ಹನುಮಂತ ನಿರಾಣಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ಹಾಗೂ ವಿಟಿಯು ವಿಶ್ರಾಂತ ಕುಲಪತಿ ರಾಜಶೇಖರ್ ಎಚ್ಚರಿಕೆ ನೀಡಿದರು.

      ಗಾಂಧೀ ಭವನದಲ್ಲಿ ಎಬಿವಿಪಿ ಏರ್ಪಡಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ವಿಭಜನೆಯ ಸಾಧಕ-ಭಾಧಕಗಳ ಚರ್ಚೆಗೆ ಕರೆದಿದ್ದ ದುಂಡು ಮೇಜಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ವಿಭಜನೆ ರಾಜಕೀಯ ಹಿತಾಸಕ್ತಿ ಹೊಂದಿದೆ ಎಂದು ಆರೋಪಿಸಿದರು.

       ಶಿಕ್ಷಣ ಕ್ಷೇತ್ರ ರಾಜಕೀಯದಿಂದ ಮುಕ್ತವಾಗಿರಬೇಕು. ವಿಟಿಯುಗೆ ಇದುವರೆಗೂ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಸಂಶೋಧನಾ ವಿಭಾಗಗಳನ್ನು ಹಾಗೂ ಸೂಕ್ತ ಬೋಧಕ ವ್ಯವಸ್ಥೆಯಲ್ಲಿ ಪೂರ್ಣಗೊಳಿಸಿಲ್ಲ. ಅದಕ್ಕೂ ಮೊದಲೇ ತಾಂತ್ರಿಕ ಶಿಕ್ಷಣ ಕ್ಷೇತ್ರ ಸುಧಾರಿಸುವ ನೆಪದಲ್ಲಿ ಹಾಸನದಲ್ಲಿ ಹೊಸ ತಾಂತ್ರಿಕ ವಿವಿ ಸ್ಥಾಪನೆಯ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.

        ವಿಟಿಯು ವಿಭಜನೆಯ ಬದಲು ಕಲ್ಬುರ್ಗಿ, ಮೈಸೂರು, ಮಂಗಳೂರು ಹಾಗೂ ಬೆಂಗಳೂರಿನ ಪ್ರಾದೇಶಿಕ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಬಹುದು. ಅಗತ್ಯವಿದ್ದರೆ ಇನ್ನು ಹೆಚ್ಚು ಪ್ರಾದೇಶಿಕ ಕಛೇರಿಗಳನ್ನು ಆರಂಭಿಸಬಹುದು. ಪ್ರಾದೇಶಿಕ ಕಛೇರಿಗಳಿಗೆ ಅರ್ಥಿಕ ಮಿತಿ ವಿಧಿಸಿ ಹೆಚ್ಚು ಅಧಿಕಾರ ನೀಡುವುದು ಸೂಕ್ತ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು.ವಿದ್ಯಾರ್ಥಿಗಳ ಅವಶ್ಯಕತೆಗನುಗುಣವಾಗಿ ವಿವಿಗಳು ಆರಂಭವಾಗಬೇಕು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿವಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ವಿಟಿಯು ವಿಭಜನೆ ಹೊಸ ಸಮಸ್ಯೆಗಳಿಗೆ ನಾಂದಿಯಾಗಬಾರದು ಎಂದರು.

       ರಾಜ್ಯದ 11 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಒಟ್ಟು 218 ಕಾಲೇಜುಗಳು, 71 ಸ್ನಾತಕ ಕೋರ್ಸ್‍ಗಳಲ್ಲಿ 12 ಸಾವಿರ ಸ್ನಾತಕ ವಿದ್ಯಾರ್ಥಿಗಳು ಹಾಗೂ 30 ಪದವಿ ಕೋರ್ಸ್‍ಗಳಲ್ಲಿ 4.6 ಲಕ್ಷ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ವಿಟಿಯು ನಲ್ಲಿ ಮೌಲ್ಯಮಾಪನ ಸಮಸ್ಯೆ, ಫಲಿತಾಂಶ ಗೊಂದಲ ಸೇರಿದಂತೆ ಅನೇಕ ಆರೋಪಕ್ಕೆ ಗುರಿಯಾಗಿದೆ ಎಂದು ಈ ವೇಳೆ ಎಬಿವಿಪಿ ಪದಾಧಿಕಾರಿಗಳು ಆರೋಪಿಸಿದರು.

      ಸರ್ಕಾರದ ಈ ಚಿಂತನೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲಿದೆ. ಪ್ರತ್ಸೇಕ ರಾಜ್ಯದ ಕೂಗು ಎದ್ದಿರುವ ಈ ಸಂದರ್ಭದಲ್ಲಿ ವಿಟಿಯು ವಿಭಜನೆಯಂತಹ ಚಿಂತನೆ ಸರಿಯಲ್ಲ. ಸರ್ಕಾರ ಈ ಕುರಿತು ಸೂಕ್ತ ಮಾರ್ಗದರ್ಶನ ಪಡೆದು ಕ್ರಮ ಕೈಗೊಳ್ಳಬೇಕು ಎಂದರು.

     ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಭಜನೆಯ ಸರ್ಕಾರದ ನಿರ್ಧಾರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಮರುಜೀವ ನೀಡಲಿದೆ. ಶಿಕ್ಷಣ ಕ್ಷೇತ್ರ ಸಮಗ್ರ ಚಿಂತನೆಯಿಂದ ಅಭಿವೃದ್ಧಿಯಾಗಬೇಕಿದೆ. ವಿವಿ ಗಳು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು. ಮತದಾರರ ಓಲೈಕೆಗೆ ಶಿಕ್ಷಣ ಬಳಕೆಯಾಗಬಾರದು ಎಂದು ಅರುಣ್ ಶಹಪುರ ತಿಳಿಸಿದರು.ವಿಟಿಯು ಸೆನೆಟ್ ಸದಸ್ಯ ಸಂಜೀವ್, ವಿಶ್ರಾಂತ ಕುಲಪತಿ ರಾಜಶೇಖರ್ ಸೇರಿದಂತೆ ಇನ್ನಿತರ ತಜ್ಞರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap