ಬಳ್ಳಾರಿ
ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾವಹಿಸಲು ಚುನಾವಣಾ ಆಯೋಗ ಸಿ-ವಿಜಿಲ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರು ಈ ಆ್ಯಪ್ ಮೂಲಕ ಫೋಟೊ ಹಾಗೂ ವಿಡಿಯೋ ಸಹಿತ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಸಿ-ವಿಜಿಲ್ ಆ್ಯಪ್ ಅಪ್ಲಿಕೇಶನ್ ಮಾನಿಟರಿಂಗ್ ಸೆಲ್ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ-2019ಕ್ಕೆ ಸಂಬಂಧಿಸಿದಂತೆ ಸಿ-ವಿಜಿಲ್ ಆ್ಯಪ್ ಅಪ್ಲಿಕೇಶನ್ ಮಾನಿಟರಿಂಗ್ ಸೆಲ್ ಪರಿಣಾಮಕಾರಿ ಅನುಷ್ಠಾನಗೊಳಿಸಲು ವಿಧಾನಸಭಾ ಕ್ಷೇತ್ರವಾರು ಕೋಶವನ್ನು ಆರಂಭಿಸಲಾಗಿದೆ. ಒಬ್ಬ ನೋಡಲ್ ಅಧಿಕಾರಿ ಹಾಗೂ 3 ಜನ ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ಸಿ-ವಿಜಿಲ್ ಆ್ಯಪ್ ಮೇಲುಸ್ತುವಾರಿ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಮತ್ತು ಪ್ರತ್ಯೇಕವಾದ ಕಂಪ್ಯೂಟರ್ ಅಳವಡಿಸಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲು 3 ಶಿಪ್ಟ್‍ಗಳ ಅನುಸಾರ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿಸಿದ ಫಿಲ್ಡ್ ಯೂನಿಟ್ಸ್‍ನ(ಎಫ್‍ಎಸ್‍ಟಿ/ಎಸ್‍ಎಸ್‍ಟಿ/ಸೆಕ್ಟರ್ ಅಧಿಕಾರಿಗಳು) ಅಧಿಕಾರಿಗಳು ಸಿ-ವಿಜಿಲ್ ಇನ್ವೆಸ್ಟಿಗೆಟರ್ ಆ್ಯಪ್‍ನ್ನು ತಕ್ಷಣವೇ ಡೌನ್‍ಲೋಡ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದ್ದು, ಈ ಅಧಿಕಾರಿಗಳು ತಮ್ಮ ಶಿಫ್ಟ್ ಮುಗಿದ ನಚಿತರ ತಮ್ಮಲ್ಲಿರುವ ಮೊಬೈಲ್‍ನ್ನು ಮುಂದಿನ ಅವಧಿಯ ಅಧಿಕಾರಿಗಳಿಗೆ ನೀಡಲು ಕ್ರಮವಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಸಂಬಂಧಿಸಿದ ಎಫ್‍ಎಸ್‍ಟಿ/ಎಸ್‍ಎಸ್‍ಟಿ/ಸೆಕ್ಟರ್ ಅಧಿಕಾರಿಗಳು ದೂರು ಬಂದ ತಕ್ಷಣ ತುರ್ತಾಗಿ ಸ್ಪಂದಿಸಿ 100 ನಿಮಿಷಗಳಲ್ಲಿ ಪ್ರಕರಣಗಳನ್ನು ವಿಲೇವಾರಿಗೆ ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಫೋಟೊ ಹಾಗೂ ವಿಡಿಯೋ ಸಮೇತ ತಿಳಿಸಿದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಾರ್ಯೋನ್ಮುಖರಾಗಲಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ವಾಸ್ತವತೆ ಗಮನಿಸಿ ನೀತಿ ಸಂಹಿತೆ ಪ್ರಕರಣಗಳನ್ನು ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇನ್ನೂ ಆ್ಯಪ್‍ನಲ್ಲಿ ಜಿಯೋ ಟ್ಯಾಗ್ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ತೆಗೆದಿರುವ ಫೋಟೊ ಹಾಗೂ ವಿಡಿಯೋ ಎಲ್ಲಿಂದ ತೆಗೆದಿದ್ದಾರೆ ಎನ್ನುವ ಖಚಿತ ತಕ್ಷಣ ದೊರೆಯಲಿದೆ.
ಈ ಆ್ಯಪ್‍ನಲ್ಲಿ ಪ್ರಕರಣ ದಾಖಲಾದ 100 ನಿಮಿಷದೊಳಗೆ ಕ್ರಮ ಕೈಗೊಳ್ಳಲಾಗುವುದು. ಆ್ಯಪ್‍ನಲ್ಲಿ ಕಳುಹಿಸಿರುವ ಫೋಟೊಗಳನ್ನು ನಾನಾ ಹಂತದ ಅಧಿಕಾರಿಗಳು ವೀಕ್ಷಿಸಬಹುದಾಗಿದೆ. ಸುಳ್ಳು ಮಾಹಿತಿ ಹಾಕಿದರೂ ಸಂಪೂರ್ಣ ಮಾಹಿತಿ ದೊರೆಯಲಿದೆ. ಪ್ರಾಯೋಗಿಕವಾಗಿ 350 ಮೊಬೈಲ್‍ನಲ್ಲಿ ಆ್ಯಪ್ ಡೌನ್‍ಲೋಡ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈಗಾಗಲೇ ಸಿ-ವಿಜಿಲ್ ಕಾರ್ಯನಿರ್ವಹಿಸುತ್ತಿದೆ.
ಮಾಹಿತಿಯು ತ್ವರಿತಗತಿಯಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ತಲುಪಿ ಅವರಿಂದ ತಕ್ಷಣ ಕ್ರಮಕ್ಕೆ ಆದೇಶಿಸುವಂತಾ ಗುತ್ತದೆ. ಇದರಲ್ಲಿ ಮಾಹಿತಿ ನೀಡುವವರ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು. ಪದೇ ಪದೇ ಸುಳ್ಳು ಮಾಹಿತಿಗಳನ್ನು ನೀಡಿದರೆ ಅಂಥವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಿ-ವಿಜಿಲ್ ಆ್ಯಪ್‍ನಲ್ಲಿ ಇಲ್ಲಿಯವರೆಗೆ ದಾಖಲಾದ 16 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸಿ-ವಿಜಿಲ್ ಆ್ಯಪ್ ನೋಡಲ್ ಅಧಿಕಾರಿಗಳಾದ ಪ್ರೋಬೆಷನರಿ ಐಎಎಸ್ ಅಧಿಕಾರಿ ಕೆ.ಆರ್.ನಂದಿನಿ ಅವರು ತಿಳಿಸಿದ್ದಾರೆ.