ಚಿತ್ರದುರ್ಗ:
ಕಳೆದ ಆರು ತಿಂಗಳಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಾನುಕೊಂಡ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಖಾಲಿ ಕೊಡಗಳನ್ನು ತಲೆಮೇಲೆ ಹೊತ್ತು ತೀವ್ರ ಪ್ರತಿಭಟನೆ ನಡೆಸಿದರು.ಸುಮಾರು 900 ಮನೆಗಳುಳ್ಳ ಜಾನುಕೊಂಡದಲ್ಲಿ 3500 ಮಂದಿ ವಾಸಿಸುತ್ತಿದ್ದು, ಆರು ತಿಂಗಳಿನಿಂದಲೂ ನಿರಂತರವಾಗಿ ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿದ್ದೇವೆ. ಗ್ರಾಮ ಪಂಚಾಯಿತಿಯಿಂದ 6-7 ಕೊಳವೆಬಾವಿಗಳನ್ನು ಕೊರೆಸಿದರು ಒಂದು ತಿಂಗಳು ಮಾತ್ರ ನೀರು ಸಿಕ್ಕಿತು. ಈಗ ಬೋರ್‍ವೆಲ್‍ಗಳೆಲ್ಲಾ ಬತ್ತಿ ಹೋಗಿರುವುದರಿಂದ ಅಕ್ಕಪಕ್ಕದ ತೋಟಗಳಿಗೆ ಹತ್ತಾರು ಕಿ.ಮೀ.ನಡೆದು ಹೋಗಿ ನೀರು ಹೊತ್ತು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಅಡಿಕೆ-ತೆಂಗಿನ ತೋಟಗಳು ಈಗಾಗಲೇ ಸಂಪೂರ್ಣವಾಗಿ ಒಣಗಿ ಹೋಗಿದೆ. ಕುರಿ, ಮೇಕೆ, ಹಸು, ಎಮ್ಮೆಗಳು ನೀರಿಲ್ಲದೆ ಬಾಯಾರಿಕೆಯಿಂದ ಸೊರಗಿ ಹೋಗಿವೆ. ಜಾನುಕೊಂಡದಿಂದ ಐದಾರು ಕಿ.ಮೀ.ದೂರದಲ್ಲಿ ಶಾಂತಿಸಾಗರದ ನೀರಿನ ಪೈಪ್‍ಲೈನ್ ಹಾದು ಹೋಗಿದೆ.
ಅಕ್ಕಪಕ್ಕದ ಗ್ರಾಮಗಳಿಗೆ ಶಾಂತಿಸಾಗರದಿಂದ ಕುಡಿಯುವ ನೀರನ್ನು ನೀಡಲಾಗಿದೆ. ನಮ್ಮದೂ ದೊಡ್ಡ ಗ್ರಾಮವಾಗಿರುವುದರಿಂದ ಕುಡಿಯುವ ನೀರಿನ ಅಭಾವ ನೀಗಿಸಬೇಕಾದರೆ ನಮಗೂ ಶಾಂತಿಸಾಗರದ ನೀರು ಪೂರೈಸಿ ಎಂದು ಜಾನುಕೊಂಡು ಗ್ರಾಮಸ್ಥರು ಜಿಲ್ಲಾಡಳಿತದ ಎದುರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು.
ಖಾಸಗಿ ವ್ಯಕ್ತಿಗಳ ಬೋರ್‍ವೆಲ್‍ಗಳಲ್ಲಿಯೂ ನೀರು ಸಿಗುತ್ತಿಲ್ಲ. ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಜಾನುಕೊಂಡ ಗ್ರಾಮಸ್ಥರು, ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರುಗಳು ಜಿಲ್ಲಾಡಳಿತವನ್ನು ಅಗ್ರಹಿಸಿದರು. ಸಿದ್ದಪ್ಪ, ಗುರುಸಿದ್ದಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಜಾನುಕೊಂಡದ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
