ಬಳ್ಳಾರಿ
ಮಕ್ಕಳು, ನಾಗರಿಕರು, ಕಾನೂನುಗಳ ಬಗ್ಗೆ ಹಾಗೂ ತಮ್ಮ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಸಿ.ಬಿರಾದರ್ ಹೇಳಿದರು.
ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕ ಹಕ್ಕುಗಳು ಮತ್ತು ಪೋಕ್ಸೊ ಕಾಯ್ದೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬುದನ್ನು ವ್ಯಾಖ್ಯಾನಿಸಿದ ನ್ಯಾಯಾಧೀಶರಾದ ಬಿರಾದಾರ್ ಅವರು, ಮಾನವ ಮಾನವನಾಗಿ ಬದುಕಬೇಕು ಎಂದರು. ಮಕ್ಕಳು ಹಕ್ಕುಗಳ ಬಗ್ಗೆ ತಿಳಿಸಿದರು. ಬಳ್ಳಾರಿಯಿಂದ ಕೇವಲ 8 ಕಿ ಮೀ ದೂರದಲ್ಲಿರುವ ಹಲಕುಂದಿಯಿಂದ ಮಿಂಚೇರಿ ರಸ್ತೆಯ ದುರಸ್ತಿ ಕುರಿತು ಕಳವಳ ವ್ಯಕ್ತಪಡಿಸಿದರು;ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.
ಯಾವುದೇ ಕೆಲಸವನ್ನು ಸತತ ಪರಿಶ್ರಮ, ಭಕ್ತಿಯಿಂದ ಮಾಡಿದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯವೆಂದು ಸ್ವಾಮಿ ವಿವೇಕಾನಂದರ ಹೇಳಿಕೆಗಳನ್ನು ಪ್ರಸ್ತಾಪಿಸಿದರು.ರಾಜ್ಯ ವಕೀಲರ ಪರಿಷತ್ ಸದಸ್ಯ ಕೋಟೇಶ್ವರರಾವ್ ಅವರು ಮಾತನಾಡಿ,
ಕಾರ್ಮಿಕರ ಹಕ್ಕುಗಳ ಕುರಿತು ಕಾರ್ಮಿಕರು ತಮ್ಮ ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು. ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾದ ಕಾನೂನಿನ ಅರಿವಿರಬೇಕು ನಮಗಿರುವ ಹಕ್ಕುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಬಿ.ಹಂದ್ರಾಳ್ ಅವರು ಮಾತನಾಡಿ, ಕಾರ್ಮಿಕರ ಹಕ್ಕಗಳು, ಸಂವಿಧಾನ, ಕಾನೂನು, ಕರ್ತವ್ಯ ಜವಾಬ್ದಾರಿಗಳ ತಿಳಿದುಕೊಂಡಿರಬೇಕು ಅಂದರೆ ಕಾನೂನಿನ ಅರಿವು ತಿಳಿದಿರಬೇಕು, ನಮಗೆ ಸಿಗುವ ಸೌಲಭ್ಯಗಳ ಸದ್ಭಳಕೆಯನ್ನು ಮಾಡಿಕೊಳ್ಳಬೇಕು ಹಾಗೂ ಶಾಲೆಯನ್ನು ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಕಾರ್ಯಕ್ರಮ ಕೈಗೊಳ್ಳಿರಿ ನಿಮಗೆ ಯಾವುದೆ ರೀತಿಯ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿರಿ ಪರಿಶೀಲಿಸುತ್ತೇವೆ ಎಂದರು.
ಹಲಕುಂದಿ ಗ್ರಾಮಪಂಚಾಯತಿ ಸುತ್ತ ಮುತ್ತ ಬರುವ ಕಾರ್ಖಾನೆಯ ಕಾರ್ಮಿಕರ ಸಮ್ಮುಖದಲ್ಲಿ ಕಾರ್ಮಿಕರ ಬಗ್ಗೆ ಕಾರ್ಮಿಕರ ಹಕ್ಕುಗಳನ್ನು ಕುರಿತು ಮತ್ತೊಂದು ಕಾರ್ಯಗಾರ ಏರ್ಪಡಿಸಲಾಗುವುದು ಎಂದರು.ವಕೀಲೆ ಎಂ.ಪ್ರಭಾವತಿ, ಕಾರ್ಮಿಕ ನಿರೀಕ್ಷಕ ರವಿದಾಸ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಂ.ಅಂಕಲಯ್ಯ ಮಾತನಾಡಿ, ಕಾನೂನು ಮತ್ತು ಅರಿವು ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಕೈಗೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸಬೇಕೆಂದರು.
ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೆ.ಜಿ.ಉಮಾಪತಿ, ಉಪಾಧ್ಯಕ್ಷರಾದ ಶಾಂತಿಬಾಯಿ ರಾಮುನಾಯ್ಕ, ತಾಪಂ ಸಹಾಯಕ ನಿರ್ದೇಶಕ ಬಸವರಾಜ, ವಕೀಲ ಸಂಘದ ಕಾರ್ಯದರ್ಶಿಗಳಾದ ಎಸ್.ವಿ.ಅರಸೂರು, ಉಪಾಧ್ಯಕ್ಷರಾದ ಅಬ್ದುಲ್ ಮಾಜೀದ್, ಖಜಾಂಚಿಗಳಾದ ಟಿ.ತಿಪ್ಪೇರುದ್ರ ಹಾಗೂ ವಕೀಲರುಗಳಾದ ಕೆ.ತಿಪ್ಪೇಸ್ವಾಮಿ, ಎಂ.ಭೀಮಪ್ಪ, ಡಿ.ಟಿ.ಮುನಿಯಪ್ಪ, ಎನ್.ವಿ.ವಿನಯ್, ಗ್ರಾಪಂ ಪಿಡಿಒ ಆರ್.ಕೃಷ್ಣನಾಯ್ಕ, ಗ್ರಾಪಂ ಸಿಬ್ಬಂದಿ ಹಾಗೂ ಶಾಲೆಯ ಮುಖ್ಯಗುರುಗಳು,ಸಹಶಿಕ್ಷರು, ವಿದ್ಯಾರ್ಥಿಗಳು ಹಾಗೂ ಹಲಕುಂದಿ, ಹೊನ್ನಳ್ಳಿ ಮತ್ತು ಹೊನ್ನಳ್ಳಿತಾಂಡ,ಮಿಂಚೇರಿ ಗ್ರಾಮಸ್ಥರು ಇದ್ದರು. ಮಲ್ಲಿಕಾರ್ಜುನ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ