ಹಾವೇರಿ
ಮಕ್ಕಳ ಎಳ್ಗೆಗಾಗಿ ಶಿಕ್ಷಕರು ಸದಾ ಕಾರ್ಯನಿರ್ವಹಿಸಬೇಕು. ಶಾಲೆಯಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣಕ್ಕೆ ಮಾತ್ರ ಮಹತ್ವ ನೀಡದೇ ಮಕ್ಕಳ ಭಾವನೆಗಳನ್ನು ಅರಿತು ಅವರೊಂದಿಗೆ ಆತ್ಮೀಯವಾಗಿ ಮಾತನಾಡಬೇಕು ಎಂದು ಹಿರೇಕೆರೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಸಿದ್ದಲಿಂಗಪ್ಪ ಅವರು ಹೇಳಿದರು.
ಹಿರೇಕೆರೂರು ಪಟ್ಟಣದ ಗುರುಭವದಲ್ಲಿ ಮಂಗಳವಾರ ಮಕ್ಕಳ ರಕ್ಷಣಾ ಯೋಜನೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಯೋಗದಲ್ಲಿ ಆಯೋಜಿಸಲಾದ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಮತ್ತು ಮಹಿಳಾ ಶಿಕ್ಷಕಿಯರಿಗೆ “ಪೊಕ್ಸೋ ಕಾಯ್ದೆ-2012, ಮತ್ತು ಬಾಲ್ಯವಿವಾಹ ನಿಷೇದ ಕಾಯ್ದೆ– 2006” ರ ಕುರಿತು ಒಂದು ದಿನದ ಸಾಮಥ್ರ್ಯಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012ಕ್ಕೆ ಜಾರಿಗೆ ಬಂದಿದ್ದರೂ ಸಹ ಇದರ ಬಗ್ಗೆ ಯಾವುದೇ ಅರಿವು ಇಲ್ಲ ಹಾಗೂ ಬಾಲ್ಯವಿವಾಹ ನಿಷೇದ ಕಾಯ್ದೆ-2006ಕ್ಕೆ ಜಾರಿಗೆ ಬಂದಿದ್ದರೂ ಇನ್ನು ಕೇಲವು ಕಡೆ ಬಾಲ್ಯ ವಿವಾಹ ನಡೆಯುತ್ತಿರುವುದು ವಿಷಾಧನೀಯ ಸಂಗತಿ. ಶಿಕ್ಷಕರಾದ ನೀವು ಗ್ರಾಮ ಮಟ್ಟದ ಬಾಲ್ಯವಿವಾಹ ನಿಷೇದ ಅಧಿಕಾರಿಗಳಾಗಿದ್ದು ಈ ತರಬೇತಿ ಅತ್ಯವಶ್ಯಕವಾಗಿದೆ. ಇದರ ಸದುಪಯೋಗ ಪಡಿಸಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶ್ರೀಮತಿ ಮಂಗಳಾ ಅಳಗುಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪೊಲೀಸ್ ಇಲಾಖೆಯ ಎಮ್. ಆರ್ ಜಾಲಗರ “ಪೊಕ್ಸೋ ಕಾಯ್ದೆ-2012” ರ ಕುರಿತು ಹಾಗೂ ಬಾಲ್ಯವಿವಾಹ ನಿಷೇದ ಕಾಯ್ದೆ -2006ರ ಕುರಿತು ಆಶಾ ಕಿರಣ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಅಧ್ಯಕ್ಷರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಜಗದೀಶ ಬಳಿಗಾರ, ಸಹಾಯಕ ಶಿಶುಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಗೀತಾ ಬಾಳಿಕಾಯಿ, ಶ್ರೀಮತಿ ಶೋಭಾ ಪಿ.ಎಸ್, ಮಾರುತೆಪ್ಪ, ಆರ್.ಎನ್.ಕಡೂರ, ಎಸ್.ಪಿ. ಪಿಂಜಾರ, ಎನ್.ವ್ಹಿ. ನಾಯಕ್, ರಾಘವೇಂದ್ರ ಶಿರೂರು, ಮಾತೇಂಶ ಬಸವನಾಯ್ಕರ್, ವಿನಯ್ ಗೂಡಗುರ ಇತರರು ಉಪಸ್ಥಿತರಿದ್ದರು.