ನವಜಾತ ಶಿಶು ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

ಬಳ್ಳಾರಿ

         ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದರ ಜೊತೆಯಲ್ಲಿಯೇ ಹೆರಿಗೆಯಾದ ಅರ್ಧ ಗಂಟೆಯೊಳಗೆ ಎದೆ ಹಾಲು ಊಣಿಸುವುದು, ಮಗುವಿಗೆ ತಾಯಿ ಹಾಲನ್ನು ಹೊರತುಪಡಿಸಿ ಏನನ್ನೂ ನೀಡಬೇಡಿ ಮತ್ತು ಸಕಾಲದಲ್ಲಿ ಎಲ್ಲ ಲಸಿಕೆಗಳನ್ನು ನೀಡಿ; ಅಂದಾಗ ಮಾತ್ರ ನವಜಾತ ಶಿಶುವಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ ಹೆಡೆ ಹೇಳಿದರು.

        ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ನವಜಾತ ಶಿಶು ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

          ಬಾಲ್ಯ ವಿವಾಹ ಮಾಡದೇ 18 ವರ್ಷ ಮೇಲ್ಪಟ್ಟು ಮದುವೆ ಮಾಡಲು ಆದ್ಯತೆ ನೀಡಬೇಕು ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಡಿಎಚ್‍ಒ ಹೆಡೆ ಅವರು, 2009 ರಲ್ಲಿ 41 ರಷ್ಟು ಇದ್ದ ಶಿಶು ಮರಣ ದರ 2018 ಕ್ಕೆ 16ಕ್ಕೆ ಇಳಿದಿದ್ದು ಇದಕ್ಕೆ ಸಾರ್ವಜನಿಕರು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದರಿಂದ ಮತ್ತು ಮಕ್ಕಳಲ್ಲಿ ಕಂಡು ಬರುವ ನ್ಯುಮೋನಿಯಾ, ವಾಂತಿಬೇದಿ, ಸೋಂಕು, ಇತ್ಯಾದಿಗಳನ್ನು ಸಕಾಲದಲ್ಲಿ ಚಿಕಿತ್ಸೆ, ಆರೈಕೆಯಿಂದ ಸಾಧ್ಯವಾಗಿದೆ ಎಂದರು.

           ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸ್ತುತ ವಿಶೇಷ ನವಜಾತ ಶಿಶು ಆರೈಕೆ ಘಟಕ, ತಾಲೂಕ ಆಸ್ಪತ್ರೆಗಳಲ್ಲಿ ನವಜಾತ ಶಿಶು ಸ್ಥೀರಿಕರಣ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನವಜಾತ ಶಿಶು ಆರೈಕೆ ಸ್ಥಳ ನಿಗದಿ ಮಾಡಿ ಮಗು ಬೆಚ್ಚಗಿಡಲು ರೇಡಿಯಂಟ್ ವಾರ್ಮರಗಳಿದ್ದು ಇಲ್ಲಿ ವಿಶೇಷ ಆರೈಕೆ ನೀಡಲಾಗುತ್ತಿದೆ ಎಂದು ವಿವರಿಸಿದ ಅವರು, ಜೆಎಸ್‍ಎಸ್‍ಕೆ ಯೋಜನೆ ಅಡಿಯಲ್ಲಿ ಪ್ರತೀ ಗರ್ಭಿಣಿ ಸ್ತ್ರೀಗೆ ಮತ್ತು ಒಂದು ವರ್ಷದ ತನಕ ಶಿಶುವಿಗೆ ಸಂಪೂರ್ಣ ಉಚಿತ ಸೇವೆಯನ್ನು ನೀಡಲಾಗುತ್ತಿದೆ ಮತ್ತು ತಾಯಿಯ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮದ ಮೂಲಕ ಸ್ತನ್ಯ ಪಾನ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದೆ ಎಂದರು.

          ಅಪೌಷ್ಟಿಕ ಮಕ್ಕಳ ಆರೈಕೆಗೆ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರಗಳ ಮೂಲಕ ಆರೈಕೆ ಕೈಗೊಳ್ಳಲಾಗುತ್ತಿದ್ದು ಇನ್ನು ಹೆಚ್ಚಿನ ಸಹಕಾರ ನೀಡುವುದರ ಮೂಲಕ ಶಿಶು ಮರಣ ಕಡಿಮೆ ಮಾಡಲು ಎಲ್ಲರೂ ಸಹಕರಿಸಬೇಕು ಎಂದರು.

           ಉಪನ್ಯಾಸ ನೀಡಿದ ಹಿರಿಯ ಮಕ್ಕಳ ತಜ್ಞ ಡಾ ವೀರಶಂಕರ, ಸಾಮಾನ್ಯವಾಗಿ ಉಸಿರಾಟದ ತೊಂದರೆ, ಮೈ ತಣ್ಣಗಾಗುವಿಕೆ, ಸೋಂಕುಗಳು ಮಕ್ಕಳ ಮರಣಕ್ಕೆ ಪ್ರಮುಖ ಕಾರಣವಾಗಿದ್ದು ತಾಯಿ ಗರ್ಭವತಿ ಎಂದು ತಿಳಿದ ತಕ್ಷಣ, ಹೆಸರು ನೋಂದಣಿ, ವೈದ್ಯರಿಂದ ತಪಾಸಣೆ, ಟಿಟಿ ಚುಚ್ಚುಮದ್ದು ಪಡೇಯುವಿಕೆ, ಕಬ್ಬಿಣಾಂಶ ಮಾತ್ರೆಗಳ ಸೇವನೆ ಮಾಡಬೇಕು ಎಂದರು.

          ಆಸ್ಪತ್ರೆಯಲ್ಲಿ ಹೆರಿಗೆಯಾದಲ್ಲಿ ಹೆಚ್ಚಿನ ಸಮಸ್ಯೆಗಳು ಬಗೆಹರಿದಂತೆ ಎಂದು ಹೇಳಿದರು. ನವಜಾತು ಶಿಶುವಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

          ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಎನ್.ಬಸರೆಡ್ಡಿ ಅವರು ಹೆರಿಗೆಗೆ ಆಗಮಿಸಿದ ತಾಯಿಯ ಜೋತೆಗೆ ವಾರ್ಡ್‍ಗಳಲ್ಲಿ ಒಬ್ಬರು ಪಾಲಕರು ಮಾತ್ರ ಇದ್ದರೆ ಉತ್ತಮ, ಅಧಿಕ ಜನ ಬಂದಲ್ಲಿ ನವಜಾತ ಶಿಶುಗಳಿಗೆ ಸೋಂಕು ಮತ್ತು ಇತರ ತಾಯಂದಿರಿಗೆ ತೊಂದರೆಯಾಗುತ್ತದೆ, ಆಸ್ಪತ್ರೆಯ ಒಳಭಾಗದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲು ಅನಾನೂಕೂಲವಾಗಲಿದ್ದು,ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.

          ಹೆರಿಗೆ ನಂತರ ಅರ್ಹ ಫಲಾನುಭವಿಗಳಿಗೆ ಜೆಎಸ್‍ವೈ, ಮತ್ತು ಪ್ರಸೂತಿ ಅಡಿಯಲ್ಲಿ ರೂ.1000 ಸಹಾಯಧನ ನೀಡಲಾಗುವುದು ಎಂದರು.ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ರವೀಂದ್ರನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.

         ಆರ್‍ಎಂಒ ಡಾ.ಎನ್.ಸೌಭಾಗ್ಯವತಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಗುರುನಾಥ ಚವ್ಹಾಣ, ಪ್ರಸೂತಿ ತಜ್ಞೆ. ಡಾ.ಸುಯಜ್ಞ ಜೋಷಿ, ಶುಶ್ರೂಷಕ ಅಧೀಕ್ಷಕಿ ರೋಹಿಣಿ, ಮಕ್ಕಳ ತಜ್ಞರಾದ ಬಾಲವೆಂಕಟೇಶ, ಭಾವನಾ, ಬಸವಪ್ರಭು, ಗಣೇಶ್, ಸುನೀಲ್. ಲಕ್ಷ್ಮೀಕಾಂತ ಹಾಜರಿದ್ದರು. ಈಶ್ವರ್ ದಾಸಪ್ಪನವರ್ ನಿರೂಪಿಸಿದರು ಶೈಲಜಾ ಪ್ರಾರ್ಥಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link