ಮಾ.9ರಂದು ‘ರಾಜಮಾರ್ಗ’ ಪುಸ್ತಕ ಬಿಡುಗಡೆ

ತುಮಕೂರು

      ನಿವೃತ್ತ ಐಎಎಸ್ ಅಧಿಕಾರಿ ಕೆ ಜೈರಾಜ್‍ರವರು ತಮ್ಮ ಅಧಿಕಾರವಧಿಯ ಅನುಭವ, ಘಟನೆಗಳನ್ನು ಲೇಖನ ರೂಪದಲ್ಲಿ ಬರೆದು ಸಂಕಲನ ಮಾಡಿರುವ ‘ರಾಜಮಾರ್ಗ’ ಕೃತಿ ಈ ತಿಂಗಳ 9ರಂದು ನಗರದ ಎಸ್‍ಐಟಿ ಬಿರ್ಲಾಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಾರ್ಪಣೆಯಾಗಲಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಮಹದೇವ ಬಿದರಿ ಪುಸ್ತಕ ಬಿಡುಗಡೆ ಮಾಡುವರು.

      ಲೇಖಕ ಕೆ. ಜೈರಾಜ್ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಅಂದು ಸಂಜೆ 5 ಗಂಟೆಗೆ ಸಿದ್ಧಗಂಗಾಮಠದ ಸಿದ್ಧಲಿಂಗಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಎಂ ಎನ್ ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಲೇಖಕಿ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ ಹ ರಮಾಕುಮಾರಿ ಕೃತಿ ಕುರಿತು ಮಾತನಾಡುವರು. ನಂತರ ಲೇಖಕ ಕೆ ಜೈರಾಜ್‍ರೊಂದಿಗೆ ಸಂವಾದ ಏರ್ಪಡಿಸಲಾಗಿದೆ ಎಂದರು.

      ತುಮಕೂರು ಜಿಲ್ಲಾಧಿಕಾರಿಗಳೂ ಆಗಿದ್ದ ತಾವು ಸಕಾರದ ಸಾರ್ವಜನಿಕ ಆಡಳಿತದ ಬಹುತೇಕ ಇಲಾಖೆಗಳು, ನಿಗಮ ಮಂಡಳಿಗಳಲ್ಲಿ ಕೆಲಸ ಮಾಡಿ, ಸರ್ಕಾರದ ಅಪರ ಕಾರ್ಯದರ್ಶಿಯಾಗಿ ಸುಮಾರು 37 ವರ್ಷ ಸೇವೆ ಸಲ್ಲಿಸಿದ್ದು, ಈ ಅಧಿಕಾರವಧಿಯ ಆಡಳಿತಾನುಭವದ ಲೇಖನಗಳ ಸಂಕಲನವಾಗಿ ಜೈತ್ರಯಾತ್ರೆ ಎಂಬ ಮೊದಲ ಕೃತಿ ನಂತರ ಅದರ ಮುಂದುವರೆದ ಭಾಗವಾಗಿ ರಾಜಮಾರ್ಗ ಮೂಡಿಬಂದಿದೆ ಎಂದು ಕೆ ಜೈರಾಜ್ ಹೇಳಿದರು.

      ಈ ಪುಸ್ತಕದಲ್ಲಿ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಹೇಗೆ ಅನುಕೂಲ ಮಾಡಿಕೊಡಬೇಕು ಎಂಬ ಲೇಖನಗಳಿವೆ. ಅಧಿಕಾರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೊಂದಿಗೆ ಸ್ಪಂದಿಸಿ ಹೇಗೆ ಕೆಲಸ ಮಾಡಬೇಕು ಎಂಬ ತಮ್ಮ ಅನುಭವ ಒಳಗೊಂಡ ಲೇಖನಗಳು ಮುಂದೆ ಅಧಿಕಾರಿಯಾಗುವವರಿಗೆ ಮಾರ್ಗದರ್ಶನವಾಗಬಹುದು, ಈ ತಿಳುವಳಿಕೆ ಮೂಲಕ ಆಡಳಿತ ಬಾಂಧವ್ಯ ಹೆಚ್ಚಿಸಬೇಕು ಎಂಬ ಆಶಯದಿಂದ ತಾವು ಈ ಪುಸ್ತಕ ಹೊರ ತರುತ್ತಿರುವುದಾಗಿ ಹೇಳಿದರು.

       ತಾವು ತುಮಕೂರು ಜಿಲ್ಲಾಧಿಕಾರಿಯಾಗಿದ್ದಾಗ ಮಾಜಿ ಸಚಿವರಾಗಿ ಕೆಲಸಮಾಡಿದ್ದ ಹಿರಿಯ ರಾಜಕಾರಣಿ ಹುಚ್ಚಮಾಸ್ತಿಗೌಡರು ಹುಲಿಯೂರುದುರ್ಗ ಕ್ಷೇತ್ರದ ಶಾಸಕರಾಗಿದ್ದರು. ಅವರಿಗೆ 70 ವರ್ಷ, ನನಗೆ 30 ವರ್ಷ. ಡೀಸಿ ಕಛೇರಿಗೆ ಬಂದಾಗ ಅವರು ಎದ್ದು ನಿಂತು ನನಗೆ ಗೌರವ ನೀಡುತ್ತಿದ್ದರು. ಅವರು ಹಿರಿಯರು, ಇಷ್ಟೊಂದು ಗೌರವ ತೋರುವುದು ತಮಗೆ ಮುಜುಗರವೇ ಆಗುತ್ತಿತ್ತು. ಈ ಬಗ್ಗೆ ಒಮ್ಮೆ ಕೇಳಿದಾಗ, ನಾನು ಗೌರವ ಕೊಡುವುದು ನಿಮಗೆ ಅನ್ನುವುದಕ್ಕಿಂತಾ ನಿಮ್ಮ ಸ್ಥಾನಕ್ಕೆ ಎಂದರು.

        ನಾನು ನಿಮಗೆ ಗೌರವ ಕೊಟ್ಟರೆ, ಬೇರೆಯವರೂ ಕೊಡುತ್ತಾರೆ, ಆ ವಿಶ್ವಾಸದ ಮೇಲೆ ಸರ್ಕಾರ ನಡೆಯಬೇಕು ಎಂದಿದ್ದರು. ಒಮ್ಮೆ ಕಛೇರಿಯಲ್ಲಿ ಅಧಿಕಾರಿಯೊಬ್ಬರು ಯಾವುದೋ ವಿಚಾರವಾಗಿ ತಮ್ಮೊಂದಿಗೆ ಚರ್ಚಿಸಿ ಹೋದರು. ಅಲ್ಲಿ ಕುಳಿತಿದ್ದ ಹುಚ್ಚಮಾಸ್ತಿಗೌಡರು ನಮ್ಮ ಮಾತು ಆಲಿಸಿ, ಆ ಅಧಿಕಾರಿ ಬಗ್ಗೆ ಎಚ್ಚರವಾಗಿರಿ ಎಂದು ಹೇಳಿದ್ದರು. ಐದೇ ನಿಮಿಷದಲ್ಲಿ ಆ ಅಧಿಕಾರಿಯ ಬಗ್ಗೆ ಹೇಗೆ ತಿಳಿದುಕೊಂಡರು ಎಂದು ಆಶ್ಚರ್ಯವಾಯಿತು. ಮುಂದೆ ಆ ಅಧಿಕಾರಿಯಿಂದ ತಮಗೆ ತೊಂದರೆಯೂ ಆಯಿತು ಎಂದು ಕೆ ಜೈರಾಜ್ ನೆನಪು ಮಾಡಿಕೊಂಡು, ಇಂತಹ ಘಟನೆಗಳನ್ನೂ ಪುಸ್ತಕದಲ್ಲಿ ದಾಖಲಿಸಿರುವುದ್ದಾಗಿ ಹೇಳಿದರು.ಎಸ್‍ಐಟಿ ನಿರ್ದೇಶಕರಾದ ಡಾ. ಎಂ ಎನ್ ಚನ್ನಬಸಪ್ಪ, ಪ್ರಾಂಶುಪಾಲರಾದ ಶಿವಕುಮಾರಯ್ಯ, ಭೂಮಿ ಬಳಗ ಅಧ್ಯಕ್ಷ ಜಿ ಎಸ್ ಸೋಮಶೇಖರ್, ಜಿಲ್ಲಾ ಕಸಾಪ ಅಧಯಕ್ಷೆ ಬಾ ಹ ರಮಾಕುಮಾರಿ, ಶಿವಾನಂದ್ ಮೊದಲಾದವರು ಸುದ್ದಿಗೊಷ್ಠಿಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link