ಹಂಪಿ ಉತ್ಸವದಲ್ಲಿ ರೈತರಿಗಾಗಿ ಪ್ರತ್ಯೇಕ ವೇದಿಕೆ ನಿರ್ಮಾಣ ಮಾಡಲು ಆಗ್ರಹ

ಬಳ್ಳಾರಿ

        ಜಿಲ್ಲೆಯ ರೈತರನ್ನೊಳಗೊಂಡಂತೆ ರಾಜ್ಯಮಟ್ಟದ ರೈತ ನಾಯಕರು ಕೃಷಿ ಕುರಿತು ಕಾರ್ಯಕ್ರಮ ರೂಪಿಸಲು ಈ ಬಾರಿಯ ಹಂಪಿ ಉತ್ಸವದಲ್ಲಿ ಪ್ರತ್ಯೇಕ ವೇದಿಕೆ ನಿರ್ಮಾಣ ಮಾಡಬೇಕೆಂದು ಹಂಪಿ ಉತ್ಸವ ಸಮಿತಿಗೆ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಆಗ್ರಹಿಸಿದ್ದಾರೆ.

       ರೈತ ಮುಖಂಡ ವೀರೇಶ್ ಗಂಗಾವತಿ ಇವರೊಂದಿಗೆ ಜನಧೃವದೊಂದಿಗೆ ಮಾತನಾಡಿದ ಅವರು, ಕಳೆದ 2016ರಲ್ಲಿ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು, ಜಿಲ್ಲೆಯ ರೈತರ ಮನವಿ ಮೇರೆಗೆ ಶ್ರೀ ಹಂಪಿ ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿ ರೈತರಿಗಾಗಿ ಪ್ರತ್ಯೇಕ ವೇದಿಕೆ ನಿರ್ಮಾಣ ಮಾಡಿದ್ದರು. ರೈತಪರ ಕಾಳಜಿ ಹೊಂದಿರುವ ಡಿಸಿ ಅವರು ಕಳೆದ ವರ್ಷ ಹಂಪಿ ಉತ್ಸವದಲ್ಲಿ ತೋರಿದ ಕಾಳಜಿ ಈ ಬಾರಿಯೂ ತೋರಬೇಕೆಂದರು.

         ಇತ್ತೀಚಿನ ದಿನಗಳಲ್ಲಿ ಕೃಷಿ ಎನ್ನುವುದು ಕಷ್ಟಸಾಧ್ಯ ಎನ್ನುವಂತಾಗಿದೆ. ಯುವಕ-ಯುವತಿಯರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆಧುನಿಕ ಜೀವನಶೈಲಿಗೆ ಮಾರು ಹೋಗಿರುವ ಯುವ ಜನತೆ ಕೃಷಿಯಿಂದ ದೂರವೇ ಉಳಿದಿದ್ದಾರೆ. ಹಂಪಿ ಉತ್ಸವದ ರೈತ ವೇದಿಕೆಯಲ್ಲಿ ರೈತರಿಗಾಗಿ ಅಪರೂಪದ ಕಾರ್ಯಕ್ರಮಗಳನ್ನು ಪ್ರದರ್ಶನಕ್ಕೆ ಇಡಬೇಕು. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯಿಂದ ರೈತರಿಗೆ ಇರುವ ಯೋಜನೆಗಳ ಕುರಿತು ಸಮಗ್ರವಾಗಿ ಅರಿವು ಮೂಡಿಸುವ ಕೆಲಸವಾಗಬೇಕು. ಸಾಂಪ್ರದಾಯಿಕ ಬೆಳೆಗಳೊಂದಿಗೆ ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಪೂರಕವಾಗಿರುವ ಪ್ರಾತ್ಯಕ್ಷಿಕೆಗಳನ್ನೂ ಸಹ ಪ್ರದರ್ಶಿಸಬೇಕು. ಸಾವಯವ ಕೃಷಿ ಪದ್ಧತಿಯಲ್ಲೂ ಲಾಭದಾಯಕ ಬೆಳೆ ಬೆಳೆಯುವುದು ಹೇಗೆ? ಜವುಕು ನೆಲದಲ್ಲೂ ಸಮೃದ್ಧ ಫಸಲು ತೆಗೆಯುವುದು ಹೇಗೆ? ಇರುವ ಸ್ವಲ್ಪ ನೀರಿನ ಅನುಕೂಲತೆಯಲ್ಲೂ ಯಾವ ರೀತಿ ಬೆಳೆ ಬೆಳೆಯಬೇಕು? ಎನ್ನುವುದರ ಕುರಿತು ತಜ್ಞರಿಂದ ಉಪನ್ಯಾಸ ನೀಡಲು ಹಂಪಿ ಉತ್ಸವದಲ್ಲಿ ಪ್ರತ್ಯೇಕ ವೇದಿಕೆ ಅಗತ್ಯವಿದೆ ಎಂದರು.

        ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಹೂಳು ತುಂಬಿಕೊಂಡಿದೆ. ಈ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಾರೆ. ಕಾರ್ಯರೂಪಕ್ಕೆ ತರಲು ವಿಫಲರಾಗಿದ್ದಾರೆ. ತುಂಗಭದ್ರ ರೈತ ಸಂಘದಿಂದ ಪ್ರಾಯೋಗಿಕ ಹೂಳು ತೆಗೆಯಲಾಗಿದ್ದು ಅಂದಿನ ಚಿತ್ರಾವಳಿಗಳ ಪ್ರದರ್ಶನ ಮಾಡಿದಲ್ಲಿ ಅನುಕೂಲವಾಗುತ್ತದೆ. ಮುಖ್ಯವಾಗಿ ಕೃಷಿಯಿಂದ ವಿಮುಖರಾಗುವ ಇಂದಿನ ಯುವ ಸಮೂಹವನ್ನು ಕೃಷಿಯತ್ತ ಆಕರ್ಷಿಸಲು ಬೇಕಾದ ಎಲ್ಲ ರೀತಿಯ ಯೋಜನೆಗಳನ್ನೊಳಗೊಂಡ ಅಪರೂಪದ ವೇದಿಕೆಯನ್ನು ಜಿಲ್ಲಾ ಹಂಪಿ ಉತ್ಸವ ಸಮಿತಿ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link