ಹಾನಗಲ್ಲ :
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಗಮನಹರಿಸಿ ವಿವೇಚನೆಯಿಂದ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಬಳಸಿ ಕೌಶಲ್ಯಯುಕ್ತ ಕೆಲಸ ನಿರ್ವಹಿಸಿದಾಗ ಯಾವುದೇ ಸರ್ಕಾರಿ ಉದ್ಯೋಗ ಸಿಗದಿದ್ದರೂ ತಮ್ಮ ಜೀವನವನ್ನು ಆತ್ಮವಿಶ್ವಾಸದಿಂದ ನಡೆಸಬಹುದಾಗಿದೆ ಎಂದು ತಾಳಗುಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪರಮೇಶ್ವರಪ್ಪ ಮಸಲವಾಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಮೂರು ದಿನಗಳ ಸುಪ್ತ ಚೇತನ–2019 -ಕಾಲೇಜು ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಸರ್ಕಾರಿ ನೌಕರಿಗಾಗಿ ಕಾಯದೇ ಸ್ವಂತ ಉದ್ಯೋಗವನ್ನು ಕೌಶಲ್ಯದಿಂದ ಆರಂಭಿಸಿದರೆ ಅನೇಕರಿಗೆ ಉದ್ಯೋಗ ಕೊಡುವ ಮಟ್ಟಿಗೆ ಬೆಳೆಯಬಹುದು ಎಂದರು.
ಮತ್ತೋರ್ವ ಅತಿಥಿ ಡೊಳ್ಳು ಜಾನಪದ ಕಲಾವಿದ ಬಡವಪ್ಪ ಆನವಟ್ಟಿ ಮಾತನಾಡಿ, ಕಲಾವಿದ ಎಂದೂ ನಿರುದ್ಯೋಗಿಯಲ್ಲ, ಕಲೆಯು ವಿಶೇಷ ಜ್ಞಾನವಾಗಿದ್ದು ಇದು ಸುಪ್ತವಾಗಿದ್ದು, ಪ್ರತಿಯೊಬ್ಬರ ಮನ ಒಂದಿಲ್ಲೊಂದು ಕಲೆಗಾಗಿ ಹಾತೊರೆಯುತ್ತಿರುವುದರಿಂದ ಯಾವುದೇ ಕಲಾವಿದನು ನಿರುದ್ಯೋಗಿಯಲ್ಲ, ಕಾರಣ ಪ್ರಾಮಾಣಿಕ ಪ್ರಯತ್ನದಿಂದ ವಿದ್ಯಾರ್ಥಿಗಳು ಭವಿಷ್ಯದ ನಿರ್ಮಾಣದಲ್ಲಿ ತೋಡಗಿಕೊಳ್ಳಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಎ.ಎಸ್.ಬಳ್ಳಾರಿ ಸುಪ್ತ ಚೇತನ 2019 ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ವಂತ ಕೌಶಲ್ಯದಿಂದ ತಯಾರಿಸಿದ ವಸ್ತುಗಳನ್ನು ಮನತುಂಬಿ ಶ್ಲಾಘಿಸಿದರು. ಇಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಉಂಟಾಗಿ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೇರಕವಾಗುತ್ತವೆ ಎಂದರು.
ಪ್ರಾಂಶುಪಾಲ ಪ್ರೊ. ಸಿ. ಮಂಜುನಾಥ ಅಧ್ಯಕ್ಷತೆ ವಹಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಎಂ.ಎಚ್. ಹೊಳಿಯಣ್ಣನವರ ಪ್ರಾಸ್ತಾವಿಕ ನುಡಿದರು. ಸಂಸ್ಥೆಯ ನಿರ್ದೇಶಕರುಗಳಾದ ಎನ್.ಎಸ್.ಕಾಶೀನಾಥ, ನಾಗೇಂದ್ರ ಬೊಮ್ಮನಹಳ್ಳಿ, ಮಾರುತಿ ಹರಿಹರ, ವಿನೋದ ಅಚಲಕರ, ಸುರೇಶ ರಾಯಕರ, ಹನುಮಂತಪ್ಪ ಮಲಗುಂದ, ಭದ್ರಪ್ಪ ಅಗಸಿಮನಿ, ಕಾರ್ಯದರ್ಶಿ ಮನೋಹರ ಬಳಿಗಾರ ಹಾಗೂ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಕಾಶ ಹೊಳೇರ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಒಟ್ಟಾರೆ ಮೂರು ದಿನಗಳಂದು ನಡೆದ ಸುಪ್ತ ಚೇತನ 2019, ಕಾಲೇಜು ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಮಿಸ್ ಎಸ್‍ಕೆಎಸಿ ಮತ್ತು ಮಿಸ್ಟರ್ ಎಸ್‍ಕೆಎಸಿ ಸ್ಪರ್ಧೆ, ವಸ್ತುಗಳ ತಯಾರಿಕಾ ಕೌಶಲ್ಯ ಸ್ಪರ್ಧೆ, ಆಹಾರ ತಯಾರಿಸುವ ಸ್ಪರ್ಧೆ, ಅವುಗಳನ್ನು ಮಾರಾಟ ಮಾಡುವ ವ್ಯವಹಾರಿಕ ಜ್ಞಾನ, ಇತರೆ ಸ್ಪರ್ಧೆಗಳಾದ ನಾಟ್ಯ ಮಂಚ, ರಂಗಮಂಚ, ಹಾಡು, ಇವಲ್ಲದೇ ಫುಡ್ ಸ್ಟಾಲ್‍ಗಳಲ್ಲಿ ತಯಾರಿಕೆ ಮತ್ತು ಖಾದ್ಯಗಳ ರುಚಿ ನೋಡುವಿಕೆ ವಿಶೇಷವಾಗಿತ್ತು. ಬಂದ ಅಥಿತಿಗಳು, ವಿದ್ಯಾರ್ಥಿಗಳು ಸ್ವತಃ ತಯಾರಿಸಿದ
ಸವಿ ಸವಿ ತಿಂಡಿ-ತಿನಿಸುಗಳಾದ ಪಾಪಡ ಮಸಾಲಾ, ಸಮೋಸಾ, ಟೋಸ್ಟ ಲಡ್ಡು, ಚಪಾತಿ, ಪಲಾವು, ದಾಲ್‍ಪ್ರೈ, ರೈತಾ, ಚಿಗಳಿ, ಎಳೆನೀರು, ಮಾವಿನಕಾಯಿ ಚಿತ್ರಾನ್ನ, ಮುಂತಾದ ತಿಂಡಿ-ತಿನಿಸು ಬಗೆ ಬಗೆಯ ಸ್ವೀಟ್ಸಗಳನ್ನು ತಿಂದು ಜ್ಯೂಸ್-ಮಜ್ಜಿಗೆ ಕುಡಿದು ಸಂತೋಷಪಟ್ಟರು ಹಾಗೂ ಅವುಗಳಿಗೆ ತಗಲುವ ಬೆಲೆಯನ್ನು ಕೊಟ್ಟರು. ಎಲ್ಲ ವಿದ್ಯಾರ್ಥಿಗಳು ಈ ವಿಶೇಷ ತಿಂಡಿ ತಿನಿಸುಗಳ ಸ್ಫರ್ಧೆಯಲ್ಲಿ ಮನಃ ಪೂರ್ವಕವಾಗಿ ಭಾಗವಹಿಸಿ ಖುಷಿ ಪಟ್ಟರು.