ಬೆಂಗಳೂರು:
ರಾಜ್ಯದಲ್ಲಿ ಬಿಜೆಪಿ ಪರ ಉತ್ತಮ ವಾತಾವರಣವಿದೆ.ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆಯಲ್ಲಿಯೇ ರಾಜ್ಯದಲ್ಲಿ 20-22 ಸ್ಥಾನ ಗೆಲ್ಲಿಸಿ ಮೋದಿ ಕೈ ಬಲಪಡಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದರು.ಅದರಂತೆ ನಾವು ಆ ಗುರಿ ಮುಟ್ಟುತ್ತೇವೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸದ ಬಳಿ ಮಾತನಾಡಿದ ಅವರು, ಬಿಎಸ್‍ವೈ ಅವರು ಎರಡು ದಿನಗಳ ಕಾಲ ಸಿಎಂ ಆಗಿದ್ದರು. ಆ ನಂತರ ರಾಜೀನಾಮೆ ನೀಡುವ ವೇಳೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20-22 ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಆ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದಿದ್ದರು. ಆ ನಿಟ್ಟಿನಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಭಾರತದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಇಂದು ನರೇಂದ್ರ ಮೋದಿ ಅವರ ಮುಂದೆ ಯಾರು ಸರಿಸಾಟಿ ಇಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್‍ಪಿ ಸುಪ್ರೀಮೊ ಮಾಯಾವತಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಾಟಿ ಆಗಲು ಸಾಧ್ಯ ಇಲ್ಲ ಎಂದು ಅಭಿಪ್ರಾಯಪಟ್ಟರು. ಇಡೀ ದೇಶದ ಜನ ಇಂದು ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದು ತೀರ್ಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ 20-22 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಾಣಲಿದೆ ಎಂದರು.
ಸ್ವಾತಂತ್ರ್ಯ ಬಂದು ಹಲವಾರು ವರ್ಷಗಳಾಗಿದ್ರು ಪಾಕಿಸ್ತಾನದ ಉಗ್ರರ ಅಟ್ಟಹಾಸ ನೆಡೆಯುತ್ತಲೇ ಇದೆ. ಭಾರತದಲ್ಲಿ ಸಮಸ್ಯೆಗಳನ್ನು ಹುಟ್ಟಿಹಾಕಿ ನಮ್ಮ ಜನರಿಗೆ ಉಗ್ರರು ತೊಂದರೆ ಕೊಡುತ್ತಿದ್ದಾರೆ. ನಿನ್ನೆ ಉಗ್ರರ ಮೇಲೆ ಏರ್ ಸ್ಟ್ರೈಕ್ ನಡೆದಿದೆ. ಆ ಉಗ್ರರೇ ಹಿಂದೆ ನಮ್ಮ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ್ದರು. ಹಾಗೆ ಬೇರೆ ಬೇರೆ ಕೃತ್ಯ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ್ದಾರೆ. ಪುಲ್ವಾಮಾದಲ್ಲಿ ಆದ ಘಟನೆ ನಮ್ಮ ಭಾರತೀಯರಲ್ಲಿ ರಕ್ತ ಕುದಿಯುವಂತೆ ಮಾಡಿತ್ತು ಎಂದು ಬಿ ವೈ ವಿಜಯೇಂದ್ರ ತಿಳಿಸಿದರು.
ಯಡಿಯೂರಪ್ಪ ಅವರು ಜನರ ಸೇವೆ ಹಾಗೂ ಜನರಿಗಾಗಿ ಏನು ಬೇಕಾದರೂ ಮಾಡುವಂತವರು. ಓರ್ವ ಸಾಮಾನ್ಯ ಕಾರ್ಯಕರ್ತರಾಗಿ ಮೂರು ದಶಕಗಳಿಂದ ಪಕ್ಷವನ್ನು ಬಲಪಡಿಸಿದ್ದಾರೆ. ಇವತ್ತು ಅವರ ಜನುಮದಿನ. ಆದ್ರೆ ಸಿದ್ದಗಂಗಾ ಶ್ರೀಗಳು ನಮ್ಮ ಜೊತೆಗಿಲ್ಲ. ಅಲ್ಲದೇ ರಾಜ್ಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಅಹಿತಕರ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಅವರು ಜನುಮದಿನವನ್ನು ಆಚರಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ