ಹಾನಗಲ್ಲ :
ತಾಲೂಕಿನ ಗುಂಡೂರು ಗ್ರಾಮದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣ ಮಂಗಳವಾರ ಹಲವು ತಿರುವುಗಳನ್ನು ಪಡೆದುಕೊಂಡಿದ್ದು ಮೃತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗುಂಡೂರು ಗ್ರಾಮದ ಗೀತಾ ಎಂಬ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಮೂರು ತಿಂಗಳ ಹಿಂದೆ ಕೊಲೆ ಮಾಡಿ ನಂತರ ತಾನೇ ನಾಪತ್ತೆ ಪ್ರಕರಣ ದಾಖಲಿಸಿದ್ದಳು. ಮೂರು ತಿಂಗಳಿನಿಂದ ಪ್ರಕರಣ ಬೆಳಕು ಕಾಣದಿರುವುದರಿಂದ ಮೃತನ ಸಂಬಂಧಿಕರು ತೀವೃ ನಿರಾಶೆಗೊಳಗಾಗಿದ್ದರು. ಈ ಮಧ್ಯೆ ಗ್ರಾಮಸ್ಥರು ಸೋಮವಾರ ಸಭೆ ಸೇರಿ ಮೃತನ ಪತ್ನಿ ಗೀತಾಳನ್ನು ತರಾಟೆಗೆ ತೆಗೆದುಕೊಂಡಾಗ ತಾನೇ ಕೊಲೆ ಮಾಡಿರುವುದಾಗಿ ಸತ್ಯವನ್ನು ಹೊರಗೆಡಹಿದ್ದಳು.
ಇದರ ಜಾಡು ಹಿಡಿದು ಪೊಲೀಸರು ಬೆನ್ನತ್ತಿದಾಗ ಗೀತಾ ಸುಳ್ಳು ಮಾಹಿತಿಗಳನ್ನು ನೀಡುತ್ತ ಪೊಲೀಸರ ದಾರಿ ತಪ್ಪಿಸಿದ್ದಳು. ಮೃತದೇಹವನ್ನು ಸುಟ್ಟು ಹಾಕಿರುವುದಾಗಿ ಒಮ್ಮೆ ಹೇಳಿದ್ದಳು. ನಂತರ ಬೇರೆ-ಬೇರೆ ಸ್ಥಳಗಳಲ್ಲಿ ಹೂತು ಹಾಕಿರುವುದಾಗಿಯೂ ಬಾಯಿ ಬಿಟ್ಟಿದ್ದಳು.
ಸೋಮವಾರ ರಾತ್ರಿಯವರೆಗೂ ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತ ತನಿಖಾಧಿಕಾರಿಗಳ ದಿಕ್ಕು ತಪ್ಪಿಸಿದ್ದಳು. ಮಂಗಳವಾರ ಬೆಳಿಗ್ಗೆಯೂ ಗುಂಡೂರು ಗ್ರಾಮದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಪೊಲೀಸರು ಶವವನ್ನು ಹುಡುಕಿ ಸುಸ್ತಾಗಿದ್ದರು. ನಂತರ ಕಾರಿಕಟ್ಟಿ ಕೆರೆಯಲ್ಲಿ ಗ್ರಾಮಸ್ಥರು ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದ ಕಟ್ಟಿಗೆಯೊಂದಕ್ಕೆ ಹಗ್ಗವನ್ನು ಸುತ್ತಿದ್ದು ಕಂಡುಬಂದಿತ್ತು. ಕೂಡಲೇ ಗ್ರಾಮಸ್ಥರು ಅಲ್ಲಿಯೇ ಇದ್ದ ಆರೋಪಿ ಗೀತಾಳನ್ನು ಬಾಯಿ ಬಿಡಿಸಿದಾಗ ಸತ್ಯ ಹೊರಬಿದ್ದಿತು.
ಮೂರು ತಿಂಗಳ ಹಿಂದೆ ರಾತ್ರಿಯ ವೇಳೆ ಗೀತಾ ತನ್ನ ಪ್ರಿಯಕರ ಆನಂದ ದೊಡ್ಡಮನಿಯೊಂದಿಗೆ ಪೂರ್ವ ನಿಯೋಜಿತವಾಗಿ ರಾಜುನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಆನಂದ ಕೊಲೆ ನಡೆದ ರಾತ್ರಿ ಗ್ರಾಮದ ಬೀದಿದೀಪಗಳನ್ನು ಆರಿಸಿ ಬಂದಿದ್ದನು. ನಂತರ ಇಬ್ಬರೂ ಸೇರಿ ಮೃತ ದೇಹವನ್ನು ಗೋಣಿ ಚೀಲವೊಂದರಲ್ಲಿ ತುಂಬಿ ಗ್ರಾಮದಿಂದ 2ಕಿಮಿ ದೂರದ ಕೆರೆಯವರೆಗೂ ದ್ವಿಚಕ್ರ ವಾಹನದ ಮೇಲೆ ಶವವನ್ನು ಸಾಗಿಸಿದ್ದಾಗಿ ಗೀತಾ ತಿಳಿಸಿದ್ದಾಳೆ.
ಅದನ್ನು ಕೆರೆಯ ಮಧ್ಯದ ಪೊದೆಯಲ್ಲಿ ಕಟ್ಟಿಗೆ ಕಂಬ ನಿಲ್ಲಿಸಿ ಅದಕ್ಕೆ ಚೀಲವನ್ನು ಹಗ್ಗದಿಂದ ಕಟ್ಟಿ ಹಾಕಿರುದಾಗಿಯೂ ತನಿಖೆಯ ವೇಳೆ ಪೊಲೀಸರೆದುರು ಹೇಳಿಕೊಂಡಿದ್ದಾಳೆ. ಮಳೆಗಾಲದ ನಂತರ ಈಗ ನೀರು ಕಡಿಮೆಯಾಗಿದ್ದರಿಂದ ಕೊಳೆತ ಚೀಲದಲ್ಲಿ ಮೃತ ವ್ಯಕ್ತಿಯ ಅಸ್ತಿಪಂಜರ ಪತ್ತೆಯಾಗಿದೆ. ಕೆರೆಯ ಪಕ್ಕದಲ್ಲಿಯೇ ವೈದ್ಯರು ಶವಪರೀಕ್ಷೆ ನಡೆಸಿದರು.
ಮಕ್ಕಳು ಅನಾಥ : ಗೀತಾ ಹಾಗೂ ಮೃತ ರಾಜು ದಂಪತಿಗೆ ಇಬ್ಬರು ಪುತ್ರಿಯರು, ಪುತ್ರನಿದ್ದಾನೆ. ಇಬ್ಬರು ಪುತ್ರಿಯರೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಭ್ಯಸಿಸುತ್ತಿದ್ದಾರೆ. ಪುಟ್ಟ ಬಾಲಕ ಮಾತ್ರ ತಾಯಿಯೊಂದಿಗಿದ್ದ. ಪ್ರಿಯಕರನೊಂದಿಗೆ ಗೀತಾ ಅಕ್ರಮ ಸಂಬಂಧ ಹೊಂದಿ ಮೂವರು ಮಕ್ಕಳಿಗೆ ತಂದೆಯೂ ಇಲ್ಲದಂತಾಗಿಸಿ, ತಾನೂ ಕಾರಾಗೃಹ ಸೇರಿದ್ದಾಳೆ. ಈಗ ಮೂವರು ಮಕ್ಕಳಿಗೂ ಅನಾಥಪ್ರಜ್ಞೆ ಕಾಡುವಂತಾಗಿದೆ. ಸೋಮವಾರದವರೆಗೂ ತಲೆಮರೆಸಿಕೊಂಡಿದ್ದ ಗೀತಾಳ ಪ್ರಿಯಕರ ಆನಂದ್ ಮಂಗಳವಾರ ಪೊಲೀಸರ ಅತಿಥಿಯಾಗಿದ್ದಾನೆ.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಹೆಚ್ಚುವರಿ ವರಿಷ್ಠಾಧಿಕಾರಿ ಜಿ.ಎ.ಜಗದೀಶ್, ಶಿಗ್ಗಾವಿ ಡಿವೈಎಸ್‍ಪಿ ಎನ್.ವಿ.ಬರಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಪಿಐ ರೇವಣ್ಣ ಕಟ್ಟಿಮನಿ, ಪಿಎಸ್‍ಐ ಗುರುರಾಜ್ ಮೈಲಾರ, ಎಎಸ್‍ಐ ರೇಣುಕಾ ಪವಾರ ಸಿಬ್ಬಂದಿಗಳಾದ ಕುಮಾರ ಹಿರೇಮಠ, ಪಿ.ಬಿ.ಹೊಸಮನಿ, ಆರ್.ಕೆ.ದೇವಗಿರಿ, ಯು.ಬಿ.ಮಧು, ಪ್ರಶಾಂತ ಕಛವಿ, ಬಸವರಾಜ್ ಬಮ್ಮನಹಳ್ಳಿ, ಸುರೇಶ ಕೂಸನೂರ, ಆನಂದ ಪಾಟೀಲ, ಈರಣ್ಣ ಲಂಗೋಟಿ, ಶಿಲ್ಪಾ ಕಾಮನಹಳ್ಳಿ, ವಸುಮತಿ ಮೂಲಿಮನಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.