ದಾವಣಗೆರೆ:
ವಿದ್ಯಾರ್ಥಿಗಳು ಹೊಸ ಅನ್ವೇಷಣೆ ಹಾಗೂ ಸಂಶೋಧನೆ ನಡೆಸಲು ಅನುಕೂಲವಾಗಿರುವ ಮೂಲ ವಿಜ್ಞಾನದ ಕಡೆಗೆ ಚಿತ್ತ ಹರಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ ಸಿ.ಆರ್. ಕರೆ ನೀಡಿದರು.
ನಗಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಬಾಪೂಜಿ ಸಿಬಿಎಸ್‍ಸಿ ಶಾಲೆಯಲ್ಲಿ ಶನಿವಾರ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಪ್ರೈ. ಲಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ದಾವಣಗೆರೆ ವಿಜ್ಞಾನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 26ನೇ ರಾಷ್ಟ್ರೀ ಮಕ್ಕಳ ವಿಜ್ಞಾನ ಸಮಾವೇಶದ ಮಾರ್ಗದರ್ಶಿ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮೂಲವಿಜ್ಞಾನ ಓದುಗರ ಸಂಖ್ಯೆ ವಿರಳವಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ನಿಗಾ ಇಡಬೇಕಾಗಿದೆ. ಮೂಲ ವಿಜ್ಞಾನ ಓದುಗರ ಸಂಖ್ಯೆ ಕಡಿಮೆಯಾಗಿರುವ ಕಾರಣಕ್ಕಾಗಿಯೇ ಸಿಎನ್‍ಆರ್ ರಾವ್ ನಾವು ವಿಜ್ಞಾನಿಗಳನ್ನು ಸೃಷ್ಟಿಸುತ್ತಿಲ್ಲ ಎಂಬುದಾಗಿ ಮರುಕ ವ್ಯಕ್ತಪಡಿಸುತ್ತಿರುತ್ತಾರೆ. ಆದ್ದರಿಂದ ನಾವು ಹೆಚ್ಚು, ಹೆಚ್ಚು ಸಂಶೋಧನೆ, ಅನ್ವೇಷಣೆ ನಡೆಸಬೇಕಾದರೆ ವಿದ್ಯಾರ್ಥಿಗಳು ಮೂಲ ವಿಜ್ಞಾನ ಓದುವತ್ತ ಹೆಚ್ಚು ಚಿತ್ತ ಹರಿಸಬೇಕೆಂದು ಕಿವಿಮಾತು ಹೇಳಿದರು.
ವಸ್ತು ಪ್ರದರ್ಶನಗಳಲ್ಲಿ ಈಗಿನ ಬಹುತೇಕ ವಿದ್ಯಾರ್ಥಿಗಳು ಯಾರೋ ತಯಾರಿಸಿದ್ದ ಹಳೇ ಮಾದರಿಯನ್ನೊ, ಇಲ್ಲವೋ ಯಾರಿಂದಲೋ ಖರೀದಿಸಿ ಮಾದರಿಗಳನ್ನು ತಂದಿಡುವುದು ಸರಿಯಲ್ಲ. ನಾವು ವಸ್ತಪ್ರದರ್ಶನಗಳನ್ನು ಏರ್ಪಡಿಸುವುದೇ ವಿದ್ಯಾರ್ಥಿಗಳಲ್ಲಿ ನವೀನ ಕೌಶಲ್ಯ ಬೆಳೆಯಲಿ ಎಂಬ ಕಾರಣಕ್ಕೆ. ಆದ್ದರಿಂದ ವಿದ್ಯಾರ್ಥಿಗಳು ಸ್ವತಃ ಮಾದರಿಗಳನ್ನು ತಯಾರಿಸುವ ಮೂಲಕ ಸಂಶೋಧನೆಯತ್ತ ಮುಖ ಮಾಡಬೇಕು ಎಂದರು.
ಇಂದು ನಾವು ವಿಜ್ಞಾನ ಯುಗದಲ್ಲಿ ನಾವಿದ್ದು, 24 ಗಂಟೆಯೂ ನಮಗೆ ವಿಜ್ಞಾನ ಬೇಕಾಗಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ನಡವಳಿಕೆಗಳನ್ನು ಬೆಳೆಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿಜ್ಞಾನದಿಂದ ಸಾಕಷ್ಟು ಬದಲಾವಣೆಯಾಗಿದೆ. ಸಮಾಜದಲ್ಲಿ ಮನೆ ಮಾಡಿದ್ದ ಮೂಢನಂಬಿಕೆಗಳು ತೊಲಗುತ್ತಿವೆ. ಆದರೂ, ಗಣಿತ, ವಿಜ್ಞಾನ ಅಂದರೆ ವಿದ್ಯಾರ್ಥಿಗಳು ಕಬ್ಬಿಣದ ಕಡಲೆಯಂತೆ ಭಾವಿಸಿದ್ದಾರೆ.
ಯಾರ ಮಾರ್ಗದರ್ಶನವೂ ಇಲ್ಲದೇ, ಮೊಬೈಲ್, ಕಂಪ್ಯೂಟರ್‍ಗಳನ್ನು ಬಳಸುವ ಮಕ್ಕಳು ಗಣಿತ ಮತ್ತು ವಿಜ್ಞಾನ ವಿಷಯಗಳ ಬಗ್ಗೆ ಭಯ ಇರುವುದರಿಂದ ಅವುಗಳನ್ನು ಕಲಿಯಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಮಕ್ಕಳಲ್ಲಿರುವ ಈ ಭಯವನ್ನು ಹೊಗಲಾಡಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಪ್ರತಿಯೊಬ್ಬರ ಜೀವನದಲ್ಲಿ ಇಂದು ವಿಜ್ಞಾನ ಹಾಸುಹೊಕ್ಕಾಗಿದೆ. ಹೀಗಾಗಿ ಈ ವಿಷಯದಲ್ಲಿ ವಿಶ್ವ ಮಟ್ಟದಲ್ಲಿ ಪೈಪೋಟಿ ನಡೆಸಬೇಕಾಗಿದೆ. ಆದ್ದರಿಂದ ಶಿಕ್ಷಕರು ಗುಣಾತ್ಮಕ ಭೋಧನೆಯತ್ತ ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಪರಿಪೂರ್ಣ ವಿಜ್ಞಾನ ಕಲಿಯುವ ದಿನಗಳು ಬರಲಿವೆ ಎಂದರು.
ಬ್ಯಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುನಾಥಸ್ವಾಮಿ ಮಾತನಾಡಿ, ಇಂದು ಮೂಲ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ನಾವು ಓದುವುದೇ ಒಂದಾದರೆ, ಕೆಲಸ ಮಾಡುವುದೇ ಇನ್ನೊಂದು ಎಂಬ ಪರಿಸ್ಥಿತಿ ಶಿಕ್ಷಣ ವ್ಯವಸ್ಥೆಯಲ್ಲಿದೆ. ಹೀಗಾಗಿ ನಾವು ಓದಿರುವ ವಿಷಯಕ್ಕೆ ಬೆಲೆ ಇಲ್ಲದಂತಾಗಿದೆ.
ಹೀಗಾಗಿ ಮೂಲ ವಿಜ್ಞಾನ ಕಲಿತರೆ, ನಾವು ಏನು ಕಲಿಯುತ್ತೆವೋ ಆ ಕ್ಷೇತ್ರದಲ್ಲೇ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ನಾವು ಮತ್ತಷ್ಟು ಸಾಧನೆ ಮಾಡಬಹುದಾಗಿದೆ. ಆದ್ದರಿಂದ ಶಿಕ್ಷಕರು ಮೂಲ ವಿಜ್ಞಾನ ಕಲಿಯಲು ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಬೇಕೆಂದು ಸಲಹೆ ನೀಡಿದರು.
ಬರೀ ಅಭಿವೃದ್ಧಿ ಸಾಲದು, ಸುಸ್ಥಿರ ಅಭಿವೃದ್ಧಿಯಾಗಬೇಕಾಗಿದೆ. ಇದಾಗಬೇಕಾದರೆ, ಮಕ್ಕಳಲ್ಲಿ ಮೂಲ ವಿಜ್ಞಾನದ ಬೀಜ ಬಿತ್ತಬೇಕೆಂದು ಸಲಹೆ ನೀಡಿದರು.
ಪರಿಷತ್ತಿನ ಅಧ್ಯಕ್ಷ ಡಾ.ಬಿ.ಇ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಬಿ.ವಸಂತಕುಮಾರಿ , ಪಾಲಿಕೆಯ ಆರೋಗ್ಯ ಶಾಖೆ ಸಹಾಯಕ ನಿರ್ದೇಶಕ ಡಾ.ಚಂದ್ರಶೇಖರ್ ಸುಂಖದ್, ಸ್ಮಾರ್ಟ್ ಸಿಟಿ ಪ್ರೈ. ಲಿನ ಕೆ.ಎಂ.ಗುರುಪಾದಯ್ಯ , ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮಂಗಲ , ಸಂಯೋಜಕ ಜೆ.ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು . ಪರಿಷತ್‍ನ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಹೇಮಂತ್ ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/vijnana-karyagara.gif)