ಕೊರಟಗೆರೆ
ರಾಜ್ಯ ಸಮ್ಮಿಶ್ರ ಸರ್ಕಾರದ ಮಹತ್ವಕಾಂಕ್ಷೆಯ ರೈತಡಿ ಸಾಲಮನ್ನಾ ನಿರ್ಧಾರ ರೈತರ ಮುಖದಲ್ಲಿ ಮಂದಹಾಸ ಬೀರುವ ಸಂದರ್ಭದಲ್ಲಿ ತಾಲ್ಲೂಕಿನ ತೀತಾ ಕಲ್ಪತರು ಗ್ರಾಮೀಣ ಬ್ಯಾಂಕ್ ಕೆಲವು ರೈತರಿಗೆ ಸಾಲ ಮರು ಪಾವತಿ ಮಾಡುವಂತೆ ಕೋರ್ಟಿನ ನೋಟಿಸ್ ನೀಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಕೊರಟಗೆರೆ ತಾಲ್ಲೂಕಿನಲ್ಲಿ ಸತತ 15-20 ವರ್ಷಗಳಿಂದ ಮಳೆ ಇಲ್ಲದೆ ಬರಗಾಲಕ್ಕೆ ತುತ್ತಾಗಿ ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಈ ಬೆನ್ನಲ್ಲೆ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುವ ನಿರ್ಧಾರದಿಂದ ಸಂಕಷ್ಟದಲ್ಲಿದ್ದರೈತರ ಮುಖದಲ್ಲಿ ಮಂದಹಾಸ ಬೀರುವ ಸಂದರ್ಭದಲ್ಲಿ ಬ್ಯಾಂಕ್ ಸಾಲ ಮರು ಪಾವತಿಸುವಂತೆ ನೋಟಿಸ್ ನೀಡಿರುವುದು ರೈತರಿಗೆ ಬರಸಿಡಿಲು ಬಡಿದಂತಾಗಿದೆ.
ರಾಜ್ಯ ಸರ್ಕಾರ ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗಿದೆ ಎಂದು ಘೋಷಣೆ ಮಾಡಿದಾಗ, ಸಣ್ಣ ರೈತರು ಸಾಲ ಮುಕ್ತಿ ಹೊಂದಿದೆವು ಎಂದು ನಿಟ್ಟುಸಿರು ಬಿಟ್ಟಿದ್ದರು. ತಾಲ್ಲೂಕಿನ ತೀತಾ ಕಲ್ಪತರು ಗ್ರಾಮೀಣ ಬ್ಯಾಂಕ್‍ನಿಂದ ಲಂಕೇನಹಳ್ಳಿಯ ಈರಾನಾಯ್ಕ, ಪೋಲೇನಹಳ್ಳಿ ಲಕ್ಷ್ಮಮ್ಮ, ಓಬಳದೇವರಹಳ್ಳಿ ಲಕ್ಷ್ಮಮ್ಮ ಸೇರಿದಂತೆ 10-15 ರೈತರಿಗೆ ಕೋರ್ಟಿನಿಂದ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ಜಾರಿಗೊಳಿಸಿರುವುದು ರೈತರಿಗೆ ನಿದ್ದೆಗೆಡಿಸಿದೆ. ಸತತ ಬರಗಾಲದಿಂದ ತತ್ತರಿಸಿರುವ ರೈತರ ಬಾಳಿನಲ್ಲಿ ಸಾಲಮನ್ನಾ ಎಂಬ ಹೊಂಬೆಳಕು ಈಗ ಮರುಪಾವತಿ ಎಂಬ ನೋಟಿಸ್‍ನಿಂದ ನಂದಿ ಹೋದಂತಾಗಿದೆ.
ಕೊರಟಗೆರೆ ತಾಲ್ಲೂಕಿನಲ್ಲಿ ಈ ಬಾರಿಯೂ ಮುಂಗಾರು ಮಳೆ ಕೈಕೊಟ್ಟು, ರೈತರು ಬಿತ್ತಿದ ಬೆಳೆ ಕೈ ಸೇರದೆ, ಜಮೀನಿನಲ್ಲಿ ಬತ್ತಿಹೋಗಿದೆ. ಒಬ್ಬೊ ರೈತ 3-4 ಕೊಳವೆಬಾವಿ ಕೊರೆಸಿದರೂ ನೀರು ಸಿಗದೆ, ಇದ್ದ ಹಣವನ್ನು ಖರ್ಚು ಮಾಡಿಕೊಂಡು, ಒಂದಷ್ಟು ಕೈ ಸಾಲದ ಜೊತೆಗೆ ಬ್ಯಾಂಕ್ ಸಾಲವನ್ನೂ ಮಾಡಿ, ಸಂಕಷ್ಟದಲ್ಲಿದ್ದಾನೆ. ಈಗ ಕಲ್ಪತರು ಗ್ರಾಮೀಣ ಬ್ಯಾಂಕ್ ನೋಟಿಸ್ ಜಾರಿಗೊಳಿಸಿರುವುದು ರೈತರ ನಿದ್ದೆಗೆಡಿಸಿದ್ದು, ಬ್ಯಾಂಕ್ ಸಾಲ ಮರುಪಾವತಿ ಮಾಡುವ ದಿಕ್ಕು ಕಾಣದೆ ರೈತ ಕಂಗಾಲಾಗಿದ್ದಾನೆ.
ರಾಜ್ಯದಲ್ಲಿನ ರೈತರ ಆತ್ಮಹತ್ಯೆ ತಡೆಗಟ್ಟುವ ಉದ್ದೇಶದಿಂದ ಕೃಷಿ ಸಾಲ ಮರು ಪಾವತಿಗೆ ರೈತರಿಗೆ ನೋಟಿಸ್ ನೀಡದಂತೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ಯಾಂಕುಗಳಿಗೆ ಆದೇಶ ನೀಡಿದ್ದಾರೆ. ಆದರೆ ತೀತಾ ಕಲ್ಪತರು ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ನ್ಯಾಯಾಲಯದಲ್ಲಿ ದಾವೆ ಹೂಡಿ ವಕೀಲರ ಮೂಲಕ ರೈತರ ಮನೆಗೆ ನೋಟಿಸ್ ನೀಡಿ, ಸಾಲ ಕಟ್ಟುವಂತೆ ಬ್ಯಾಂಕಿನಿಂದ ಎಚ್ಚರಿಕೆಯನ್ನು ನೀಡಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೃಷಿ ಬೆಳೆಸಾಲಕ್ಕೂ ನೊಟೀಸ್:-
ಲಂಕೇನಹಳ್ಳಿ ಗ್ರಾಮದ ಈರನಾಯ್ಕ ಎಂಬ ರೈತನು 2006-07ನೇ ಸಾಲಿನಲ್ಲಿ ತೀತಾ ಗ್ರಾಮದ ಕಲ್ಪತರು ಬ್ಯಾಂಕಿನಿಂದ 4ಎಕರೆ ಭೂಮಿಯ ಮೇಲೆ 80 ಸಾವಿರ ರೂ. ಬೆಳೆಸಾಲ ಪಡೆದು, ಸಾಲ ತೀರಿಸಲಾಗದೆ ಮೃತ ಪಟ್ಟಿದ್ದಾರೆ. 2006ರಿಂದ 2018ರ ಮಾರ್ಚ್‍ವರೆಗಿನ ಅಸಲು, ಬಡ್ಡಿ ಮತ್ತು ಚಕ್ರಬಡ್ಡಿಯ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿ, ರೈತನಿಗೆ 3 ಲಕ್ಷದ 15 ಸಾವಿರ ರೂ. ಹಣಕಟ್ಟುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ವಕೀಲರ ಮೂಲಕ ನೊಟೀಸ್ ಜಾರಿ ಮಾಡಿಸಿರುವ ಹಿನ್ನಲೆ ರೈತನ ಕುಟುಂಬ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ