ಬೆಂಗಳೂರು
ನೀಟ್ ಪರೀಕ್ಷೆಯಲ್ಲಿ ಫೇಲಾಗಿ ವೈದ್ಯಕೀಯ ಪದವಿ ಪಡೆಯಲಾಗದೇ ಪರಿತಪಿಸುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣದ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳಿಂದ ಸುಮಾರು 30 ಲಕ್ಷದವರೆಗೆ ಹಣ ಪಡೆದು ಸುಮಾರು 25 ಕೋಟಿ ರೂಗಳ ವಂಚನೆ ನಡೆಸುತ್ತಿದ್ದ ಬೃಹತ್ ಜಾಲವನ್ನು ಆಗೇಯ ವಿಭಾಗದ ಪೊಲೀಸರು ಭೇದಿಸಿದ್ದಾರೆ.
ಬೃಹತ್ ವಂಚನಾ ಜಾಲದಲ್ಲಿದ್ದ ಬಾಪೂಜಿನಗರದ ಸುಮನ್ ಅಲಿಯಾಸ್ ಶಯಿಸ್ತಾ ಸುಮನ್ (25), ಆಂಧ್ರಪ್ರದೇಶದ ಕರ್ನೂಲ್ ರಸ್ತೆಯ ವೆಂಕಟೇಶ್ವರ ನಗರದ ದಿಲೀಪ್ (28), ಏಡುಕೊಂಡಲು (55), ಹಳೆಗುಡ್ಡದಹಳ್ಳಿಯ ಆಯಿಷಾಬಾನು (25), ಸುದ್ದಗುಂಟೆಪಾಳ್ಯದ ರಂಗ ಅಲಿಯಾಸ್ ರಂಗನಾಯಕಲು (30), ಭಾಷಾ ಅಲಿಯಾಸ್ ಇಶಾಕ್ ಭಾಷ (28)ನನ್ನು ಬಂಧಿಸಲಾಗಿದೆ.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜಾಲದ ಕಿಂಗ್ ಪಿನ್‍ಗಳಾದ ಜಮೀರ್, ಗೋಪಿ ವೆಂಕಟರಾವ್ ಮತ್ತವನ ಪತ್ನಿ ನಿಖಿಲ ಬಂಧನಕ್ಕೆ ಮಡಿವಾಳ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ನಾಲ್ಕು ಕಡೆ ಆರಂಭ
ವಿದೇಶಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಆಂಧ್ರಪ್ರದೇಶದ ಗೋಪಾಲ್ ವೆಂಕಟರಾವ್ ಎಂಬಾತ 2011 ರಲ್ಲಿ ಅಮೆರಿಕನ್ ಸರ್ವೀಸ್ ಸೆಂಟರ್ ಎಂಬ ಕನ್ಸಲ್‍ಟೆನ್ಸಿ ಕಂಪನಿಯನ್ನು ಬೆಂಗಳೂರು, ಚೆನ್ನೈ, ಹೈದರಾಬಾದ್, ತಿರುಪತಿ ಹಾಗೂ ಕೊಯಮತ್ತೂರುಗಳಲ್ಲಿ ಆರಂಭಿಸಿ ಹಲವಾರು ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಶಿಕ್ಷಣ ಕೊಡಿಸುವುದಾಗಿ ವಿದೇಶಕ್ಕೆ ಕರೆದುಕೊಂಡು ಹೋಗಿ ಲಕ್ಷಾಂತರ ರೂ. ಹಣ ಪಡೆದು ಸಂಬಂಧಿಸಿದ ಯೂನಿವರ್ಸಿಟಿಗಳಿಗೆ ಹಣ ಕಟ್ಟದೆ, ವಂಚನೆ ನಡೆಸಿದ್ದನು.
ಈ ಸಂಬಂಧ ಚೆನ್ನೈನಲ್ಲಿ ಪ್ರಕರಣ ದಾಖಲಾದ ನಂತರ, ಬೇರೆ ಬೇರೆ ಸ್ಥಳಗಳಲ್ಲಿ ಮೆಡಿಕಲ್ ಟೀಚರ್ಸ್ ರೂಟ್ಸ್ ಎಜುಕೇಷನ್ ಎಂಬ ಹೆಸರಿನ ಕನ್ಸಲ್‍ಟೆನ್ಸಿ ಕಂಪನಿಗಳನ್ನು ಚೆನ್ನೈ, ಹೈದರಾಬಾದ್ ಹಾಗೂ ನಗರದ ಆಡುಗೋಡಿಯಲ್ಲಿ ಪ್ರಾರಂಭಿಸಿ ಹಲವು ವಿದ್ಯಾರ್ಥಿಗಳಿಗೆ ವಂಚಿಸಿದ ಬಗ್ಗೆ ಆಡುಗೋಡಿ, ಮಡಿವಾಳ ಠಾಣೆಗಳಲ್ಲಿ ದೂರು ದಾಖಲಾಗಿದ್ದವು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ನಂತರ ಆರೋಪಿಗಳು, ಕನ್ಸಲ್‍ಟೆನ್ಸಿ ಕಚೇರಿಗಳನ್ನು ಮುಚ್ಚಿ ಪೆÇಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು.
ನಂತರ ಇದೇ ಆರೋಪಿಗಳು ಕನ್ಸಲ್‍ಟೆನ್ಸಿ ಹೆಸರುಗಳನ್ನು ಹಾಗೂ ಸ್ಥಳಗಳನ್ನು ಬದಲಿಸಿ ಡಾಕ್ಟರ್ ವರ್ಡ್ ಹಾಗೂ ಯೂಕಾನ್ ಎಜುಕೇಷನ್ ಎಂಬ ಕನ್ಸಲ್‍ಟೆನ್ಸಿ ಕಂಪನಿಗಳನ್ನು ಎಚ್.ಎಸ್.ಆರ್. ಲೇಔಟ್ ಹಾಗೂ ಜಯನಗರಗಳಲ್ಲಿ ನಡೆಸುತ್ತಿದ್ದರು ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಹಣ ಪಡೆದು ವಂಚನೆ
ಈ ಕನ್ಸಲ್‍ಟೆನ್ಸಿ ಕಂಪನಿಗಳ ಮುಖಾಂತರ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸುಮಾರು 25 ಕೋಟಿ ರೂ. ಗೂ ಹೆಚ್ಚು ಹಣ ಪಡೆದು ವಿದ್ಯಾರ್ಥಿಗಳನ್ನು ಪ್ರವಾಸಿ ರೂಪದಲ್ಲಿ ವಿದೇಶಗಳಿಗೆ ಕರೆದೊಯ್ದು ಮಾನ್ಯತೆ ಇಲ್ಲದ ಮತ್ತು ಸರಿಯಾದ ಶಿಕ್ಷಣ ವ್ಯವಸ್ಥೆ ಇಲ್ಲದ ವಾಷಿಂಗ್ಟನ್ ಯೂನಿವರ್ಸಿಟಿ ಆಫ್ ಬಾರ್ಬೋಡಾಸ್, ಗಯಾನ, ಅಲೇಕ್ಸಾಂಡರ್ ಯೂನಿವರ್ಸಿಟಿ ಆಫ್ ಅಮೆರಿಕ, ತಿಯಾನ್ ಜಿನ್ ಮೆಡಿಕಲ್ ಯೂನಿವರ್ಸಿಟಿ, ಚೀನಾ ಮುಂತಾದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರತಿಯೊಬ್ಬರಿಂದ 20 ರಿಂದ 30 ಲಕ್ಷ ರೂ. ಹಣವನ್ನು ಪಡೆದು ಸಂಬಂಧಿಸಿದ ಯೂನಿವರ್ಸಿಟಿಗಳಿಗೆ ಪಾವತಿಸದೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಕೊಡಿಸದೆ ಮೋಸ ಮಾಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಎಸಿಪಿ ಸೋಮೇಗೌಡ, ಮಡಿವಾಳ ಪೊಲೀಸ್ ಇನ್ಸ್‍ಪೆಕ್ಟರ್ ಬೋಳೆತ್ತಿನ ನೇತೃತ್ವದ ವಿಶೇಷ ಪೊಲೀಸ್ ತಂಡ ಖಚಿತ ಮಾಹಿತಿ ಆಧರಿಸಿ ಕನ್ಸಲ್‍ಟೆನ್ಸಿ ಕಚೇರಿಯೊಂದರ ಮೇಲೆ ದಾಳಿ ನಡೆಸಿ, ಬೃಹತ್ ಜಾಲವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಜಾಲದಲ್ಲಿ ಕಿಂಗ್ ಪಿನ್‍ಗಳಾದ ಗೋಪಿ ವೆಂಕಟರಾವ್, ಆತನ ಪತ್ನಿ ನಿಖಿಲ ಹಾಗೂ ಜಮೀರ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗೇಗೌಡ ತಿಳಿಸಿದ್ದಾರೆ.
ಬಾಪೂಜಿನಗರದ ಸುಮನ್ ಅಲಿಯಾಸ್ ಶಯಿಸ್ತಾ ಸುಮನ್ ಮೊದಲು ಹೆಣ್ಣಾಗಿದ್ದು ರಾಜ್ಯ ಹಾಗೂ ದೇಶದಲ್ಲಿ ಎಂಬಿಬಿಎಸ್ ಸೀಟು ದೊರೆಯದ ವಿದ್ಯಾರ್ಥಿಗಳನ್ನು ಅಕರ್ಷಿಸಿ ವಿದೇಶದಲ್ಲಿ ಸುಲಭವಾಗಿ ಸೀಟು ಕೊಡಿಸುವುದಾಗಿ ಜಾಲದೊಳಗೆ ಬೀಳಿಸುತ್ತಿದ್ದಳು ಒಂದು ವರ್ಷದ ಹಿಂದೆ ಆಕೆ ಗಂಡಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ಬದಲಾವಣೆಯಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ