ಮಂಗಳೂರು:
ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ರಾಜ್ ಪೂಜಾರಿಯ ಅವರ 2 ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶನಿವಾರ ಬೆಳಗ್ಗೆ 7 ಗಂಟೆಗೆ ರಾಜ್ಯದ ಬೇರೆ ಬೇರೆ ಕಡೆಯ 14 ಮಂದಿ ಅಧಿಕಾರಿಗಳು ವಿವೇಕ್ ರಾಜ್ ಪೂಜಾರಿಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಿದರು. ಅತ್ತಾವರ ಮತ್ತು ಮಣ್ಣಗುಡ್ಡೆಯಲ್ಲಿರುವ ಎರಡು ಮನೆಗೆ ಹಾಗೂ ವಿವೇಕನಗರದಲ್ಲಿರುವ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ವಿವೇಕ್ ರಾಜ್ ಪೂಜಾರಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸ್ಪರ್ಧಿಸುವ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಉಸ್ತುವಾರಿಯ ಜವಾಬ್ದಾರಿ ನೀಡಿದೆ. ಅದರಂತೆ ಅವರು ಚಿಕ್ಕಮಗಳೂರು ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ಸಿನ ಮಾಜಿ ಶಾಸಕ ಹಾಗೂ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಕ್ಷೇತ್ರದ ಅಭ್ಯರ್ಥಿ ಕೆ.ವೆಂಕಟೇಶ್ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮರದೂರಿನಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಅವರ ಆಪ್ತ ಕೆ.ಹೊಲದಪ್ಪನವರ ಮನೆಯ ಮೇಲೆ ಶನಿವಾರ ಮಧ್ಯಾಹ್ನ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು.
ಬೆಂಗಳೂರಿನಿಂದ ಖಾಸಗಿ ವಾಹನದಲ್ಲಿ ಆಗಮಿಸಿದ ಅಧಿಕಾರಿಗಳು, ವೆಂಕಟೇಶ್ ಅವರ ಮರದೂರು ತೋಟದ ಮನೆ ಹಾಗೂ ಅವರ ಆಪ್ತ ಕೆ.ಹೊಲದಪ್ಪನವರ ಮನೆ ಮೇಲೆ ದಾಳಿ ನಡೆಸಿದರು. ದಾಳಿ ನಡೆದಾಗ ಶಾಸಕ ಕೆ.ವೆಂಕಟೇಶ್ ಅವರ ಧರ್ಮಪತ್ನಿ ಭಾರತಿ ವೆಂಕಟೇಶ್ ಮನೆಯಲ್ಲಿದ್ದರು. ಮನೆಯಲ್ಲಿ 2.5 ಲಕ್ಷ ಹಣ ಸಿಕ್ಕಿದ್ದು, ಇದಕ್ಕೆ ಸೂಕ್ತ ದಾಖಲೆ ತೋರಿಸಿದ್ದರಿಂದ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.