ಹೊಸಪೇಟೆ :
ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ವಾಲ್‍ಮಾರ್ಟ್ ಕಂಪನಿ ಪ್ರವೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ಎಫ್.ಎಂ.ಸಿ.ಜಿ ವಿತರಕರ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ, ಬಳಿಕ ತಹಶೀಲ್ದಾರರ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ನಗರದ ಮುಖ್ಯರಸ್ತೆಯ ನಗರೇಶ್ವರ ದೇವಸ್ಥಾನದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆಯ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಹೊಸಪೇಟೆ ತಾಲೂಕು ವಿತರಕರ ಸಂಘದ ಅಧ್ಯಕ್ಷ ಕಾಕುಬಾಳು ರಾಜೇಂದ್ರ ಮಾತನಾಡಿ, ಅಮೇರಿಕಾದ ದೈತ್ಯ ಕಂಪನಿ ವಾಲ್‍ಮಾರ್ಟ್, ಸ್ವದೇಶಿ ಫ್ಲೀಪ್ ಕಾರ್ಟ್ ಕಂಪನಿಯ ಶೇ.77ರಷ್ಟು ಶೇರು ಖರೀದಿಸಿ ತನ್ನ ಪಾಲುದಾರಿಕೆಯನ್ನು ಹೊಂದಿದೆ. ಇದರಿಂದ ಇನ್ನು ಮುಂದೆ ಆನ್‍ಲೈನ್ ವ್ಯವಹಾರದಲ್ಲಿ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ವಾಲ್‍ಮಾರ್ಟ್ ತನ್ನ ಸರಕುಗಳನ್ನು ಸುಲಭವಾಗಿ ಮಾರಲು ಅನುಕೂಲವಾಗುತ್ತದೆ.
ಈಗಾಗಲೆ ಅಮೇರಿಕಾದ ಅಮೇಜಾನ್ ಕಂಪನಿಯು ಇ-ಕಾಮಸ್ರ್ಸ್ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವುದರಿಂದ ಅಮೇರಿಕಾದ ವಾಲ್‍ಮಾರ್ಟ್ ಭಾರತದಲ್ಲಿ ಎರಡನೇ ದೈತ್ಯ ವಿದೇಶಿ ಕಂಪನಿಯಾಗಲಿದೆ. ಈ ಎರಡೂ ಕಂಪನಿಗಳು ಬಲಾಡ್ಯವಾಗಿದ್ದು, ಸ್ವದೇಶಿ ಮಾರಾಟಗಾರರಿಗೆ, ವಿತರಕರಿಗೆ ಇವರ ವಿರುದ್ದ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ ಎಂದರು.
ಎರಡನೇಯದಾಗಿ ಈ ಕಂಪನಿಗಳು ಮಾರುಕಟ್ಟೆ ಹಿಡಿಯಲು ದುಬಾರಿ ಬೆಲೆ ಕಡಿತಗೊಳಿಸಿ, ಖರೀದಿದಾರರಿಗೆ ಇಲ್ಲಸಲ್ಲದ ಆಮಿಷ ತೋರಿಸಿ ವಾಮಮಾರ್ಗಗಳನ್ನು ಅನುಸರಿಸುವುದರಿಂದ ವ್ಯಾಪಾರಿ ಕ್ಷೇತ್ರದ ವಾತಾವರಣ ಕಲುಷಿತವಾಗುತ್ತದೆ. ಈ ರೀತಿ ಭಾರತದ ಚಿಲ್ಲರೆ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವುದು ವಿದೇಶಿ ಕಂಪನಿಗಳ ಉದ್ದೇಶವಾಗಿರುವುದರಿಂದ ಸ್ವದೇಶಿ ವ್ಯಾಪಾರಿಗಳಿಗೆ ಮತ್ತು ಅವರ ಕುಟುಂಬಗಳಿಗೆ ವಿಪರೀತ ತೊಂದರೆಯಾಗುವುದು ಖಚಿತ.
ಪ್ರತಿಯೊಬ್ಬ ಸ್ಥಳೀಯ ವ್ಯಾಪಾರಿಗಳೊಂದಿಗೆ ಅವರ ಮಾರಾಟ ಪ್ರತಿನಿಧಿ, ವಿತರಣಾ ವಾಹನ ಚಾಲಕ, ಡೆಲಿವರಿ ಸಿಬ್ಬಂದಿಗಳು, ಹಣ ಸಂಗ್ರಾಹಕಾರು ಹೀಗೆ ಒಬ್ಬ ವ್ಯಾಪಾರಿಯಿಂದ ಕನಿಷ್ಟ ಆರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಈ ಎಲ್ಲಾ ಕುಟುಂಬಗಳಿಗೂ ಗಂಡಾಂತರವಾಗಲಿದೆ. ಅದಕ್ಕಾಗಿ ವಿದೇಶಿ ವಾಲ್‍ಮಾರ್ಟ್ ಕಂಪನಿಗೆ ಭಾರತದಲ್ಲಿ ಯಾವುದೇ ಕಾರಣಕ್ಕೂ ಆನ್‍ಲೈನ್ ವ್ಯವಹಾರ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ವಿತರಕರ ಸಂಘದ ಕಾರ್ಯದರ್ಶಿ ಕಟ್ಟಾ ಶ್ರೀನಿವಾಸ್, ಪದಾಧಿಕಾರಿಗಳಾದ ಜೆ.ಎಸ್. ಮನೋಹರ ಗುಪ್ತ, ರಾಜೇಶ್, ಆನಂದ, ಮಹೇಂದ್ರ, ಪುಣ್ಯಮೂರ್ತಿ ಶೇಷಣ್ಣ, ಗುರುದತ್ತ, ಬಂಡ್ರಿ ಸತೀಶ್, ಹರೀಶ್, ಹನುಮೇಶ್, ಜನಾದ್ರಿ ಮುರಳಿ ಸೇರಿದಂತೆ ನೂರಾರು ಜನ ವಿತರಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ