ತುಮಕೂರು
ಬುಧವಾರ ಮುಂಜಾನೆ ಸುರಿದ ಬಿರುಮಳೆಯಿಂದ ತುಮಕೂರು ನಗರದ ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್‍ನಲ್ಲಿ ಮಳೆ ನೀರು ನಿಂತು ಜನ-ವಾಹನ ಸಂಚಾರ ಗಂಟೆಗಟ್ಟಲೆ ಸ್ಥಗಿತಗೊಂಡ ಪ್ರಸಂಗ ನಡೆದಿದೆ.
ಮುಂಜಾನೆ ಸುಮಾರು 4 ಗಂಟೆಯಿಂದ 7 ಗಂಟೆಯವರೆಗೂ ಬಿರುಸಾದ ಮಳೆ ಸುರಿಯಿತು. ಎಲ್ಲರೂ ಸವಿನಿದ್ದೆಯಲ್ಲಿರುವ ಸಂದರ್ಭದಲ್ಲೇ ಮಳೆ ನೀರು ರಸ್ತೆಗಳ ತುಂಬ ಹರಿಯಿತು. ಲಾಕ್ ಡೌನ್ ಕಾರಣದಿಂದ ಜನ-ವಾಹನ ಸಂಚಾರ ನಿರ್ಬಂಧಿ ಸಲ್ಪಟ್ಟಿರುವುದರಿಂದ ಬೆಳಗ್ಗೆ ಜನಸಂಚಾರ ಅತಿ ವಿರಳವಾಗಿತ್ತು. ಹೀಗಾಗಿ ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡ ಸಂಗತಿ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿತು.
ಅಂಡರ್ ಪಾಸ್ ಒಳಭಾಗ ನೀರು ನಿಲ್ಲುತ್ತಿದ್ದಂತೆ ಅಂಡರ್ ಪಾಸ್‍ನ ಎರಡೂ ತುದಿಗಳಲ್ಲಿ ಬ್ಯಾರಿಕೇಡ್‍ಗಳನ್ನಿಟ್ಟು ಸಂಚಾರ ನಿರ್ಬಂಧಿಸಲಾಯಿತು. ಸೋಮೇಶ್ವರಪುರಂ ಹಾಗೂ ಎಸ್.ಐ.ಟಿ. ಕಡೆಯಿಂದ ಶೆಟ್ಟಿಹಳ್ಳಿ ಮುಖ್ಯರಸ್ತೆ ಭಾಗಕ್ಕೆ ಬರುವ ಹಾಗೂ ಶೆಟ್ಟಿಹಳ್ಳಿ ಮುಖ್ಯರಸ್ತೆ ಕಡೆಯಿಂದ ಸೋಮೇಶ್ವರ ಮತ್ತು ಎಸ್.ಐ.ಟಿ. ಕಡೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿತು. ಮುಂಜಾನೆ ಅಂಡರ್ ಪಾಸ್‍ನ ಎರಡೂ ಬದಿಗಳÀತ್ತ ಬಂದವರು ಅನಿವಾರ್ಯವಾಗಿ ಉಪ್ಪಾರಹಳ್ಳಿ ಮೇಲ್ಸೇತುವೆ/ ಕೆಳಸೇತುವೆಯ ದಾರಿಯನ್ನು ಅವಲಂಬಿಸಬೇಕಾಯಿತು.
ರಸ್ತೆಗೆ ಹರಿದ ನೀರು
ಹೊತ್ತೇರಿದಂತೆ ಇತ್ತ ಕಡೆ ಬಂದ ಸಾರ್ವಜನಿಕರಿಗೆ ಈ ತೊಂದರೆ ಮನದಟ್ಟಾಯಿತು. ಅಂಡರ್‍ಪಾಸ್ ನಲ್ಲಿ ನೀರು ತುಂಬಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು. ಬಳಿಕ ಇದರತ್ತ ಸಂಬಂಧಿಸಿದವರು ಗಮನ ಹರಿಸಿ, ಅಂಡರ್ ಪಾಸ್ ನ ಮಧ್ಯಭಾಗದಲ್ಲಿರುವ ಸ್ವಯಂಚಾಲಿತ ಮೋಟಾರ್ ಅನ್ನು ದುರಸ್ತಿಗೊಳಿಸಿ, ಚಾಲನೆಗೊಳಿಸಿದ ಬಳಿಕ, ಅಲ್ಲಿಂದ ಎತ್ತಲ್ಪಟ್ಟ ನೀರು ಮೇಲ್ಭಾಗದ ವಿಜಯನಗರ ಬಡಾವಣೆಯ ದೇವನೂರು ರಸ್ತೆ ಪ್ರಾರಂಭದ ಬಳಿ ನೇರವಾಗಿ ರಸ್ತೆಯ ಜಾಗಕ್ಕೆ ರಭಸವಾಗಿ ಸುರಿಯತೊಡಗಿತು. ಇದರಿಂದ ಅಂಡರ್ ಪಾಸ್ ನ ಮೇಲ್ಭಾಗದ ಕಲ್ಲು ಮಣ್ಣಿನ ರಸ್ತೆಯೆಲ್ಲ ಜಲಾವೃತಗೊಂಡಿತು. ಅಲ್ಲಿ ತುಂಬಿದ ನೀರು ಉಪ್ಪಾರ ಹಳ್ಳಿ ಕಡೆಗೆ ತೆರಳುವ ರಸ್ತೆಯ ಉದ್ದಕ್ಕೂ ಸರ್ವೋದಯ ಶಾಲೆಯವರೆಗೂ ಹರಿದು ಇಡೀ ರಸ್ತೆಯ ತುಂಬ ನೀರು ತುಂಬಿಕೊಂಡಿತು.
ಮೊದಲೇ ಹಳ್ಳ-ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ನೀರು ಹರಿಯತೊಡಗಿದ್ದರಿಂದ ಮತ್ತಷ್ಟು ಸಮಸ್ಯೆ ಉದ್ಭವಿಸಿ, ಜನ-ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಅದರಲ್ಲೂ ಪಾದಚಾರಿಗಳ ಪಾಡು ದೇವರೇ ಗತಿ ಎನ್ನುವಂತಾಯಿತು. ಮಧ್ಯಾಹ್ನವಾದರೂ ಪರಿಸ್ಥಿತಿ ಹಾಗೆಯೇ ಇತ್ತು. ಮಧ್ಯಾಹ್ನ 2-30 ರ ಹೊತ್ತಿಗೆ ಅಂಡರ್ ಪಾಸ್ ಒಳಗಿನ ನೀರೆಲ್ಲ ಮೇಲಕ್ಕೆ ಎತ್ತಲ್ಪಟ್ಟ ಹಿನ್ನೆಲೆಯಲ್ಲಿ ಪರಿಸ್ಥಿತಿ ಸುಧಾರಿಸಿದ ಕಾರಣ ಕ್ರಮೇಣ ಅಂಡರ್ ಪಾಸ್ ನಲ್ಲಿ ಜನ-ವಾಹನ ಸಂಚಾರ ಪುನರಾರಂಭಗೊಂಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ