ಸಂಪುಟ ರಚನೆಗೆ ಬ್ರೇಕ್ ಹಾಕಿದ ಮಹಾಮಳೆ

ತುಮಕೂರು:
     ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವೇಳೆಗಾಗಲೇ ಸಂಪುಟ ರಚನೆ ಆಗಬೇಕಿತ್ತು. ಇದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿದ್ದವು. ಹೈಕಮಾಂಡ್ ಗ್ರೀನ್ ಸಿಗ್ನಲ್ ಮಾತ್ರವೇ ಬಾಕಿ ಉಳಿದಿತ್ತು. ಇನ್ನೇನು 2-3 ದಿನಗಳಲ್ಲಿ ಸಂಪುಟ ರಚನೆ ನಡೆಯಲಿದೆ ಎನ್ನುವಾಗಲೇ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆರಂಭವಾಯಿತು. ಪ್ರವಾಹ ಕರ್ನಾಟಕಕ್ಕೂ ಪ್ರವೇಶಿಸಿತು. ಅಷ್ಟೇ ಅಲ್ಲ, ಮಹಾರಾಷ್ಟ್ರದ ಮಹಾಮಳೆ ಕರ್ನಾಟಕಕ್ಕೂ ಕಾಲಿಟ್ಟಿತು. 
      ಬೆಳಗಾವಿ, ಬಾಗಲಕೋಟೆ ಮತ್ತಿತರ ಪ್ರದೇಶಗಳಲ್ಲಿ ಪ್ರವಾಹ ಹೆಚ್ಚುತ್ತಿದ್ದಂತೆಯೇ ಗಮನ ಅತ್ತ ಸೆಳೆಯಿತು. ಅಲ್ಲಿಯವರೆಗೆ ಎಲ್ಲ ಸುದ್ದಿ ವಾಹಿನಿಗಳಲ್ಲಿ ಕರ್ನಾಟಕ ರಾಜಕೀಯದ್ದೇ ಸುದ್ದಿಯಾಗಿತ್ತು. ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಹೋಗಿ ಬಂದದ್ದು, ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿರುವುದು ಸಂಪುಟ ರಚನೆಗೆ ದಿನಗಣನೆ ಆರಂಭವಾಗಿರುವುದು ಇದೇ ಸುದ್ದಿಗಳು ರಾರಾಜಿಸುತ್ತಿದ್ದವು. ಆದರೆ ಒಂದೇ ದಿನದಲ್ಲಿ ಪ್ರವಾಹದ ಸುದ್ದಿ ರಾಜಕೀಯ ವಿಶ್ಲೇಷಣೆಗಳನ್ನೆಲ್ಲಾ ಕೊಚ್ಚಿ ಹೋಗುವಂತೆ ಮಾಡಿತು. 
      ಸದ್ಯಕ್ಕೀಗ ಕರ್ನಾಟಕ ನಾಡಿನ ಜಲಪ್ರಳಯ ಬಿಜೆಪಿ ಸರ್ಕಾರದ ದಿಕ್ಕು ದೆಸೆಯನ್ನೇ ಬದಲಿಸಿದ್ದು, ಸಚಿವ ಸ್ಥಾನ ಆಕಾಂಕ್ಷಿತರ ದನಿಯನ್ನು ಮೆತ್ತಗಾಗಿಸಿದೆ. ಒಂದು ಕಡೆ ಆಕಾಂಕ್ಷಿಗಳ ಧ್ವನಿ ಮೆತ್ತಗಾಗಿದ್ದರೆ ಮತ್ತೊಂದು ಕಡೆ ಸರ್ಕಾರದಲ್ಲಿ ಸಚಿವರಲ್ಲದೆ ಬಿ.ಎಸ್.ಯಡಿಯೂರಪ್ಪ ಏಕಾಂಗಿಯಾಗಿ ಓಡಾಡುವಂತಾಗಿದೆ. ಅಧಿಕಾರಿಗಳ ಸಭೆ ಕರೆಯುವುದು, ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುವುದು ಬಿಟ್ಟರೆ ಮತ್ತಿನ್ನಾವುದೇ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಈ ವೈಖರಿಯನ್ನು ಗಮನಿಸಿಯೇ ವಿರೋಧ ಪಕ್ಷದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೊದಲಾದವರು ಯಡಿಯೂರಪ್ಪ ಅವರದ್ದು ಏಕಚಕ್ರಾಧಿಪತ್ಯ ಎಂದು ಕರೆಯುತ್ತಿರುವುದು.
      ಕರ್ನಾಟಕದಲ್ಲಿನ ಈ ಬೆಳವಣಿಗೆಗಳು ಒಂದು ರೀತಿಯಲ್ಲಿ ಯಡಿಯೂರಪ್ಪ ಅವರಿಗೆ ವರದಾನವೂ ಹೌದು ಮತ್ತೊಂದು ರೀತಿಯಲ್ಲಿ ಸಮಸ್ಯೆಯೂ ಹೌದು ಎನ್ನುವಂತಾಗಿದೆ. ಸಂಪುಟ ರಚನೆಯ ಸಂದರ್ಭದಲ್ಲಿ ಎದುರಾಗುವ ಅಸಮಾಧಾನಗಳನ್ನು ನಿವಾರಿಸುವುದು ಬಹುದೊಡ್ಡ ಸಮಸ್ಯೆ ಎಂಬುದು ಬಿ.ಎಸ್.ವೈಗೆ ಚೆನ್ನಾಗಿ ಗೊತ್ತು. ಆದರೆ ಹೈಕಮಾಂಡ್ ಇರುವುದರಿಂದ ಈ ಎಲ್ಲ ಸಮಸ್ಯೆಗಳೂ ಇತ್ಯರ್ಥವಾಗುತ್ತವೆ ಎಂಬ ಆಶಾಭಾವ ಅವರಲ್ಲಿದೆ. ಆದರೂ ಸಂಪುಟ ರಚನೆ ಎಂಬುದು ಅಷ್ಟು ಸುಲಭವಲ್ಲ. ಒಬ್ಬರನ್ನು ಬಿಟ್ಟರೂ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳೇನು ಎಂಬ ಅರಿವು ಅವರಿಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ತಲೆನೋವು ಉಂಟು ಮಾಡಿಕೊಂಡೇ ದೆಹಲಿಗೆ ಹೋಗಿಬಂದಿದ್ದರು.
     ಅಲ್ಲಿ ಎರಡು ಲಕೋಟೆಗಳು ಸಿದ್ಧವಾಗಿವೆ. ಯಾವ ಲಕೋಟೆಯನ್ನು ಹೈಕಮಾಂಡ್ ಮಾನ್ಯ ಮಾಡುತ್ತದೆ ಎಂಬುದು ತಿಳಿದಿಲ್ಲ. ಸದ್ಯಕ್ಕೆ ಇನ್ನೂ ಒಂದೆರಡು ದಿನ ಸಂಪುಟ ರಚನೆ ಸಾಧ್ಯವಾಗಲಿಕ್ಕಿಲ್ಲ. ಬಹುಶಃ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಸಂಪುಟ ರಚನೆ ಆಗಬಹುದು ಎಂಬ ಲೆಕ್ಕಾಚಾರಗಳು ಇನ್ನೂ ಚಿಗುರೊಡೆದಿವೆ. 
      ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ಇನ್ನಿಲ್ಲದ ಸರ್ಕಸ್ ಆರಂಭಿಸಿತು. ಅದರಲ್ಲಿ ಯಶಸ್ವಿಯೂ ಆಯಿತು. ಇನ್ನೇನು ಸರ್ಕಾರ ರಚನೆಯಾಗಬೇಕು ಎನ್ನುವಷ್ಟರಲ್ಲಿ ಕರ್ನಾಟಕದಲ್ಲಿ ಒಂದು ರೀತಿಯ ಬೆಳವಣಿಗೆ ಕಂಡುಬಂದರೆ ದೆಹಲಿಯಲ್ಲಿ ಮತ್ತೊಂದು ರೀತಿಯ ಬೆಳವಣಿಗೆಗೆ ಕಾರಣವಾಯಿತು. ಸಂಸತ್ ಕಲಾಪ, 370ನೇ ವಿಧಿ ರದ್ದು ಇತ್ಯಾದಿಗಳಲ್ಲಿ ಮುಳುಗಿದ ಕೇಂದ್ರ ಹೈಕಮಾಂಡ್ ಯಡಿಯೂರಪ್ಪ ಅವರ ಮನವಿಗೆ ಅಷ್ಟು ಸ್ಪಂದಿಸಲು ಸಾಧ್ಯವಾಗಲೇ ಇಲ್ಲ. ಅಷ್ಟೇ ಏಕೆ ಅಮಿತ್ ಷಾ ಅವರನ್ನು ಭೇಟಿ ಮಾಡಲು ಎರಡು ಮೂರು ದಿನ ಬಿ.ಎಸ್.ಯಡಿಯೂರಪ್ಪ ಕಾಯಬೇಕಾಯಿತು. 
     ಕಾಶ್ಮೀರ ಸಮಸ್ಯೆಯಲ್ಲಿ ಮುಳುಗಿ ಹೋಗಿದ್ದ ಕೇಂದ್ರದ ನಾಯಕರಿಗೆ ಕರ್ನಾಟಕದ ಸಂಪುಟ ರಚನೆ ಯಾವ ಲೆಕ್ಕ? ಈ ಬಗ್ಗೆ ಚರ್ಚೆ ಮಾಡಲು ಸಮಯ ಎಲ್ಲಿ ಸಿಗಬೇಕು? ಇದೇ ವೇಳೆಗೆ ಜಲ ಪ್ರಳಯ ಆವರಿಸಿ ರಾಜ್ಯ ತತ್ತರಿಸುವಂತಾಯಿತು. ಸರ್ಕಾರ ಎಂಬುದು ಒಂದಿದ್ದರೆ ಜಲ ಪ್ರಳಯದ ಸಮಸ್ಯೆಗಳ ಬಗ್ಗೆ ತೀವ್ರವಾಗಿ ಸ್ಪಂದಿಸಲು ಸಾಧ್ಯವಾಗುತ್ತಿತ್ತು. ಆದರೆ ಅಂತಹ ಹೇಳಿಕೊಳ್ಳುವ ಪ್ರಯತ್ನಗಳು ಈಗ ನಡೆದಿಲ್ಲ. ಈ ಕಾರಣಕ್ಕಾಗಿಯೇ ಏಕ ಚಕ್ರಾಧಿಪತ್ಯ ಎಂಬ ಆರೋಪಗಳು ಹೆಚ್ಚು ಮುನ್ನಲೆಗೆ ಬಂದಿರುವುದು.ಸಂಪುಟವಿಲ್ಲದೆ ಆಡಳಿತ ನಡೆಸುವುದು ಕಷ್ಟಕರ ವಿಷಯ.
 
     ಆದರೆ ಆಕಾಂಕ್ಷಿಗಳು ಮಾತ್ರ ದಿನಗಳನ್ನು ಎದುರಿಸುತ್ತಿದ್ದಾರೆ. ಈಗ ಸರ್ಕಾರ ರಚನೆಯಾದರೂ ಸಂಪೂರ್ಣ ಅವಧಿ ಪೂರೈಸುತ್ತದೆಯೋ ಇಲ್ಲವೋ ಎಂಬ ಅನುಮಾನ ಹಲವರಲ್ಲಿದೆ. ಹೀಗಾಗಿ ಕೂಡಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಇರುವಷ್ಟು ದಿನಗಳ ಕಾಲ ಅಧಿಕಾರ ಅನುಭವಿಸಬಹುದು ಎಂಬುದು ಹಲವರ ಲೆಕ್ಕಾಚಾರ. ಇದರಲ್ಲಿ ಹಿರಿಯರಿಂದ ಹಿಡಿದು ಹೊಸಬರ ತನಕವೂ ಅಧಿಕಾರದ ದಾಹ ಇದ್ದೇ ಇದೆ. ಬಿಜೆಪಿ ವಲಯದಲ್ಲಿಯೇ ಮುಸುಕಿನ ಗುದ್ದಾಟ ಆರಂಭವಾಗಿದೆ. 
     ಈ ಹಿಂದಿನ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ ಮಾತ್ರವೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ ಸಂಪುಟ ರಚನೆಗೆ 14 ದಿನಗಳು ಹಿಡಿದಿದ್ದವು. ಈಗ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡು 17 ದಿನಗಳು ಕಳೆದಿವೆ. ಆದರೂ ಸಂಪುಟ ರಚನೆ ಸಾಧ್ಯವಾಗದೇ ಇರುವುದು ಹಲವರಲ್ಲಿ ತಳಮಳ ಉಂಟು ಮಾಡಿದೆ. ಕೆಲವರಿಗೆ ಸಂಪುಟ ರಚನೆಯ ಆಸೆ ಇದ್ದರೆ ಮತ್ತೆ ಕೆಲವರಿಗೆ ಜಲಪ್ರಳಯದ ಸಂತ್ರಸ್ತರಿಗೆ ಪರಿಹಾರ ಏನು ಎಂಬ ಚಿಂತೆ. ರಾಜಕೀಯದವರಿಗೆ ರಾಜಕೀಯ ಚಿಂತೆಯಾದರೆ, ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಬದುಕಿನ ಚಿಂತೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link