ನಿಮ್ಮನ್ನು ಹೆಗಲಮೇಲೆ ಹೊತ್ತು ಗೌರವಿಸುತ್ತೇನೆ : ಶಾಸಕ ಪಿ.ಟಿ.ಪರಮೇಶ್ವರನಾಯ್ಕ

ಹೂವಿನಹಡಗಲಿ :

      ವೀರಶೈವ ಪಂಚಮಸಾಲಿ ಸಮಾಜದ ಬಗ್ಗೆ ನನಗೆ ಅತ್ಯಂತ ಗೌರವವಿದ್ದು, ನೀವು ನನ್ನೊಂದಿಗಿದ್ದರೆ ನಿಮ್ಮನ್ನು ಹೆಗಲಮೇಲೆ ಹೊತ್ತು ಗೌರವಿಸುತ್ತೇನೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

        ಅವರು ತಾಲೂಕಿನ ನಾಗತಿಬಸಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವೀರಶೈವ ಪಂಚಮಸಾಲಿ ಸಮಾಜದ ಸಭೆಯಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಂಡು ಮತಯಾಚಿಸಿ ಮಾತನಾಡಿದರು. ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾನು ನಿಮ್ಮ ಸಮಾಜದ ಬಗ್ಗೆ ಸಂಪೂರ್ಣವಾದ ವಿಶ್ವಾಸವನ್ನು ಹೊಂದಿದ್ದೆ, ಹುಲಿಗುಡ್ಡದ ಪ್ರವಾಸಿಮಂದಿರದಲ್ಲಿನಡೆದ ಸಮಾಜದ ಸಭೆಯಲ್ಲಿ ನೀವು ಸೇರಿದ್ದನ್ನು ನೋಡಿ 2013ರ ಚುನಾವಣಾ ಫಲಿತಾಂಶವನ್ನು ನಿರೀಕ್ಷೆ ಮಾಡಿದ್ದೆ ಎಂದ ಅವರು, ಯಾವುದೋ ಒಬ್ಬ ವ್ಯಕ್ತಿಯ ಬೋಗಸ್ ಚೆಕ್ಕಿಗೆ ಮೊರೆ ಹೋಗಿ, ದಾರಿ ತಪ್ಪಿದಿರಿ ಎಂದು ಹೇಳಿದರು.

       ಈಗಲೂ ಕೂಡಾ ನನಗೆ ನಿಮ್ಮ ಬಗ್ಗೆ ಅತ್ಯಂತ ಅಭಿಮಾನವಿದ್ದು, ನನ್ನ ಜೊತೆಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡರೆ, ನಿಮ್ಮ ಮಹತ್ವದ ಬೇಡಿಕೆಯಾದ ವೀರಶೈವ ಪಂಚಮಸಾಲಿ ಸಮಾಜದ ಭವನ ನಿರ್ಮಾಣಕ್ಕೆ ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.

        ಸಮಾಜವನ್ನು ದಾರಿ ತಪ್ಪಿಸುವಂತಹ ಕೆಲವು ವ್ಯಕ್ತಿಗಳು ತಮ್ಮ ಹಿತಾಸಕ್ತಿಗಾಗಿ ನನ್ನ ವಿರುದ್ಧ ಅಪಪ್ರಚಾರ ನಡೆಸಿದರು. ಅವರ ಮಾತಿಗೆ ಕಿವಿಗೊಟ್ಟನೀವು ಚುನಾವಣೆಯಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೀರಿ. ಇನ್ನು ಮುಂದೆ ಅಂತಹ ತಪ್ಪನ್ನು ಮಾಡಬೇಡಿ ನವಂಬರ್ 3 ರಂದು ನಡೆಯುವ ಲೋಕಸಭಾ ಉಪ ಚುನಾವಣೆಯಲ್ಲಿ ವಿ.ಎಸ್.ಉಗ್ರಪ್ಪನವರಿಗೆ ಮತ ನೀಡುವುದರ ಮೂಲಕ ಪ್ರಚಂಡ ಬಹುಮತದಿಂದ ಅವರನ್ನು ಗೆಲ್ಲಿಸಬೇಕೆಂದು ವಿನಂತಿಸಿಕೊಂಡರು.

       ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ರಾಜಶೇಖರ ಪಾಟೀಲ್ ಮಾತನಾಡಿ, ಶಾಸಕರು ಈ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಉತ್ತಮ ಅಭಿವೃದ್ದಿ ಕೆಲಸವನ್ನು ಕೈಗೊಂಡಿದ್ದಾರೆ. ಅಂತಹವರ ಬಗ್ಗೆ ವಿಶ್ವಾಸವನ್ನಿಟ್ಟು, ನಮ್ಮ ಸಮಾಜಬಾಂಧವರು ಉಗ್ರಪ್ಪನವರಿಗೆ ಮತ ನೀಡುವುದರ ಮೂಲಕ ಪಿ.ಟಿ.ಪರಮೇಶ್ವರನಾಯ್ಕರ ಕೈ ಬಲಪಡಿಸಬೇಕು ಎಂದರು.

       2018ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರ ಬಗ್ಗೆ ಕೆಲವರು ಪ್ರತ್ಯೇಕ ಲಿಂಗಾಯ್ತ ಧರ್ಮದ ಬಗ್ಗೆ ಅಪಪ್ರಚಾರ ಮಾಡಿ ಲಿಂಗಾಯ್ತ ಸಮಾಜದವರು ಕಾಂಗ್ರೆಸ್ ವಿರುದ್ಧ ಮತ ನೀಡುವಂತಹ ಕಾರ್ಯವನ್ನು ಕೈಗೊಂಡರು, ಆದರೆ ಸಿದ್ದರಾಮಯ್ಯನವರು ಎಂದಿಗೂ ಕೂಡಾ ಸಮಾಜ ಒಡೆಯುವಂತಹ ಕೆಲಸಕ್ಕೆ ಕೈ ಹಾಕಿದವರಲ್ಲ, ವೀರಶೈವ ಮಹಾಸಭಾದವರು ಪ್ರತ್ಯೇಕ ಧರ್ಮದ ಬಗ್ಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರಿಂದ ಅದನ್ನು ಪುರಸ್ಕರಿಸಿದ್ದರು ಎಂದರು ಸ್ಪಷ್ಟಪಡಿಸಿದರು.

        ಕಾಂಗ್ರೆಸ್‍ಪಕ್ಷ ಒಂದು ಇತಿಹಾಸವುಳ್ಳ ಪಕ್ಷವಾಗಿದ್ದು, ಈ ಪಕ್ಷಮಾತ್ರ ಸರ್ವ ಸಮಾಜದ ಹಿತದೃಷ್ಟಿಯನ್ನು ಕಾಪಾಡಲು ಸಾದ್ಯ, ಆಕಾರಣಕ್ಕಾಗಿ ತಾವೆಲ್ಲರೂ ಒಗ್ಗಟ್ಟಾಗುವುದರ ಮೂಲಕ ಪ್ರಸ್ತುತ ಬಂದಿರುವಂತಹ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ವಿ.ಎಸ್. ಉಗ್ರಪ್ಪನವರಿಗೆ ಮತ ನೀಡಬೇಕೆಂದು ವಿನಂತಿಸಿದರು.

       ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಇಟ್ಟಿಗಿ ಬ್ಲಾಕ್ ಕಾಂಗೈ ಅಧ್ಯಕ್ಷರಾದ ಐಗೋಳ್ ಚಿದಾನಂದ, ಶಾಸಕರಾದ ಅನಿಲ್ ಚಿಕ್ಕಮಾಧು, ಕುಣಿಗಲ್ ಶಾಸಕರಾದ ಡಾ.ರಂಗನಾಥ, ದೊಡ್ಡಬಳ್ಳಾಪುರ ಶಾಸಕರಾದ ವೆಂಕಟರಮಣಪ್ಪ ಮಾತನಾಡಿದರು.

        ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ್, ಸಮಾಜದ ಮುಖಂಡರಾದ ಅರವಳ್ಳಿ ವೀರಣ್ಣ, ಅಳವುಂಡಿ ಮುದಿ ಮಲ್ಲಪ್ಪ, ಬ್ಯಾಲಹುಣ್ಸಿ ಬಸವನಗೌಡ, ಸೇರಿದಂತೆ ಹಲವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link