ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಹೆಣ್ಣು ಶಿಶುವಿಗೆ ತನುಶ್ರೀ ಎಂದು ನಾಮಕರಣ

ಹಾವೇರಿ:

        ಹೆಣ್ಣು ಮಗುವಿನ ರಕ್ಷಣೆ ಹಾಗೂ ಅವಳ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹಮ್ಮಿಕೊಂಡಿರುವ ‘ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮದ ಅಂಗವಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುವಿಗೆ ಶನಿವಾರ ನಾಮಕರಣ ಸಮಾರಂಭವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಹೆಣ್ಣು ಮಕ್ಕಳ ಬಗೆಗಿನ ಕಾಳಜಿ ಕುರಿತಂತೆ ಜಾಗೃತಿ ಮೂಡಿಸಲಾಯಿತು.

      ಕೇಂದ್ರ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’(ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ) ಜಾಗೃತಿ ಸಪ್ತಾಹದ ಅಂಗವಾಗಿ ನವಂಬರ್ 1 ರಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಣ್ಣು ಮಗುವಿನ ರಕ್ಷಣೆ ಮತ್ತು ವಿದ್ಯಾಭ್ಯಾಸದ ಮಹತ್ವ ಕುರಿತಂತೆ ಅರಿವು ಮೂಡಿಸಲಾಗುತ್ತಿದೆ.
ರಾಣೇಬೆನ್ನೂರ ತಾಲೂಕಿನ ಬಿಲ್ಲಹಳ್ಳಿ ಗ್ರಾಮದ ಸಿದ್ದಪ್ಪ ಹಾಗೂ ರೂಪಶ್ರೀ ದಂಪತಿಗಳ ಎರಡನೇ ಮಗಳಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಜನಿಸಿದ ನವಜಾತ ಹೆಣ್ಣು ಮಗುವಿಗೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮದ ಅಂಗವಾಗಿ ಶನಿವಾರ ನಾಮಕರಣ ಸಮಾರಂಭವನ್ನು ಆಯೋಜಿಸಿ ‘ತನುಶ್ರೀ’ ಎಂದು ನಾಮಕರಣ ಮಾಡಲಾಯಿತು.

        ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೆಹರು ಚ.ಓಲೇಕಾರ ಅವರು ಪೋಷಕರ ಇಚ್ಛೆಯಂತೆ ಮಗುವಿಗೆ ತನುಶ್ರೀ ಎಂದು ನಾಮಕರಣ ಮಾಡಿದರು. ಜಿ.ಪಂ.ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ನಾಮಕರಣದಲ್ಲಿ ಪಾಲ್ಗೊಂಡು ಮಗುವಿಗೆ ಶುಭಹಾರೈಸಿದರು.

          ಈ ಸಂದರ್ಭದಲ್ಲಿ ಮಗುವಿನ ತಂದೆ ಸಿದ್ದಪ್ಪ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವೈದ್ಯರು ಭಾಗವಹಿಸಿ ಮಗುವಿಗೆ ಶುಭ ಹಾರೈಸಿ ಕೇಕ್ ಕತ್ತರಿಸುವುದರ ಮೂಲಕ ಹೆಣ್ಣು ಮಗುವಿನ ಜನನಕ್ಕೆ ಸಂಭ್ರಮಾಚರಣೆ ನಡೆಸಿದರು.

        ಸಮಾರಂಭವನ್ನುದ್ದೇಶಿಸಿ ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ನೆಹರು ಓಲೇಕಾರ ಅವರು ಮಾತನಾಡಿ, ‘ಬೇಟಿ ಬಚಾವೋ ಬೇಟಿ ಪಡಾವೋ’ ಬಹಳ ಮಹತ್ವವಾದ ಯೋಜನೆಯಾಗಿದ್ದು, ಹೆಣ್ಣು ಮಕ್ಕಳ ರಕ್ಷಣೆಗೆ ಹಾಗೂ ವಿದ್ಯಾಭ್ಯಾಸಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ.

          ಹಿಂದಿನ ಕಾಲದಲ್ಲಿ ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎಂದು ಭಾವಿಸುತ್ತಿದ್ದರು. ಈ ಭಾವನೆ ಹೋಗಲಾಡಿಸಲು ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಿಂದ ಭಾಗ್ಯಬಂದಂತಾಗಿದೆ. ಹೆಣ್ಣು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಲಾಲನೆಪಾಲನೆ, ಪೋಷಣೆ ಮಾಡಿದಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಎಲ್ಲರೂ ಒಟ್ಟಾಗಿ ಹೆಣ್ಣು ಮಕ್ಕಳ ರಕ್ಷಣೆಗೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನಿಡೋಣ ಎಂದು ಹೇಳಿದರು.

          ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ.ಅಧ್ಯಕ್ಷ ಕೆ.ಎಸ್.ಕರಿಯಣ್ಣನವರ ಅವರು ಮಾತನಾಡಿ, ಹೆಣ್ಣು ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳೆಯಲು ಎಲ್ಲರ ಸಹಕಾರ ಅತ್ಯಗತ್ಯ. ಸ್ತ್ರೀಯರನ್ನು ಎಲ್ಲಿ ಪೂಜಿಸುತ್ತಾರೆ ಅಲ್ಲಿ ದೇವರು ವಾಸಿಸುತ್ತಾರೆ, ಸ್ತ್ರೀಯರಲ್ಲಿ ಹಿಂಸಿಸುವಲ್ಲಿ ಸಾಕ್ಷಸರು ವಾಸಿಸುತ್ತಾರೆ.

       ಹಾಗಾಗಿ ನಾವು ಸ್ತ್ರೀಯರನ್ನು ಪೂಜ್ಯ ಭಾವನೆಯಿಂದ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳು ಈ ದೇಶದ ಆಸ್ತಿಯಾಗಿದ್ದು, ಗಂಡು-ಹೆಣ್ಣು ಎಂಬ ಬೇಧಭಾವ ಇರಬಾರದು, ಹೆಣ್ಣು ಮತ್ತು ಗಂಡು ಮಕ್ಕಳು ಒಂದೇ ಹಾಗೂ ಸಮಾನ ಎಂಬ ಭಾವನೆಹೊಂದಬೇಕು. ಇಂದು ಗಂಡು ಮಕ್ಕಳನ್ನು ಹೊಂದಿದ ತಂದೆ-ತಾಯಿ ಬೀದಿ ಪಾಲಾದ ಅನೇಕ ಸನ್ನಿವೇಶಗಳನ್ನು ನೋಡಬಹುದು. ಆದರೆ ಹೆಣ್ಣು ಮಕ್ಕಳು ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಹಾಗೂ ಶಿಕ್ಷಣ, ಕೃಷಿ, ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕಲ್ಪಿಸಿದೆ. ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದು ಹೇಳಿದರು.

         ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಹೆಣ್ಣು ಮಗು ಜನಿಸಿದರೆ ತಾತ್ಸಾರ, ಉದಾಸೀನತೆ ಹಾಗೂ ನಾನಾ ರೀತಿ ಸಮಸ್ಯೆ ಬರುತ್ತದೆ ಎಂದು ಆತಂಕಕ್ಕೆ ಒಳಗಾಗುತ್ತಿದ್ದರು. ಇಂದು ಕಾಲ ಬದಲಾಗಿದೆ. ಮಹಿಳೆಯರೂ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ರಾಜಕೀಯ ಹಾಗೂ ಅಧಿಕಾರಿ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಲ್ಪನಾ ಚಾವ್ಹಾಲಾರಂತಹ ಮಹಿಳೆಯರು ಅನ್ಯ ಗ್ರಹಗಳಿಗೂ ಸಹ ಹೋಗಿ ಸಾಧನೆ ಮಾಡಿದ್ದಾರೆ ಎಂದರು.

        ಹೆಣ್ಣು ಮಕ್ಕಳು ಜನಿಸಿದರೆ ಖುಷಿ ಪಡಬೇಕು ಹಾಗೂ ಸಂಭ್ರಮಿಸಬೇಕು. ಸರ್ಕಾರ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದೆ. ಗ್ರಾ.ಪಂ., ತಾ.ಪಂ. ಚುನಾವಣೆಯಲ್ಲಿ ಶೇ.50 ಹಾಗೂ ಸರ್ಕಾರಿ ಕೆಲಸದಲ್ಲಿ ಶೇ.33 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. 2001-2011ರ ಜನಗತಿ ಪ್ರಕಾರ 954 ಇದ್ದು, ಹಾವೇರಿ ಜಿಲ್ಲೆಯ ಲಿಂಗಾನುಪಾತ 921 ಇದ್ದು ಈಗ 930 ಆಗಿರುತ್ತದೆ. ಕಾರಣ ಹೆಣ್ಣು ಮಕ್ಕಳ ಜನನದ ಬಗ್ಗೆ ಶಿಕ್ಷಣದ ಬಗ್ಗೆ ತಾತ್ಸಾರ ಬೇಡ. ಹೆಣ್ಣು ಮಕ್ಕಳನ್ನು ಗೌರವಿಸುವ ಜೊತೆಗೆ ಅವರ ರಕ್ಷಣೆ ಹಾಗೂ ಶಿಕ್ಷಣದ ಕುರಿತು ತಂದೆ-ತಾಯಿ ಹಾಗೂ ಸಾರ್ವಜನಿಕರಿಗೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಕರೆ ನೀಡಿದರು.

        ಇದೇ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ಆರಂಭಿಸಿದ ಹೆಣ್ಣು ಮಕ್ಕಳಿಗೆ ಪಾಸ್‍ಬುಕ್‍ಗಳನ್ನು ವಿತರಿಸಲಾಯಿತು.

          ಸಮಾರಂಭಕ್ಕೂ ಮುನ್ನ ನಜಾತ ಶಿಶುವಿನ ನಾಮಕರಣ ಸಮಾರಂಭದ ನೆನಪಿಗಾಗಿ ಆಸ್ಪತ್ರೆ ಆವರಣದಲ್ಲಿ ಜಿ.ಪಂ.ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ ಹಾಗೂ ಶಾಸಕರಾದ ನೆಹರು ಓಲೇಕಾರ ಅವರು ಸಸಿ ನೆಟ್ಟು ನೀರೂಣಿಸಿದರು.

         ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ .ನಾಗರಾಜ ನಾಯಕ್, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಜೀದ್ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಸ್ವಾಗತಿಸಿದರು. ಮುತ್ತುರಾಜ ಮಾದರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link