ಚಿತ್ರದುರ್ಗ;
ಚಿತ್ರದುರ್ಗ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ವಿವರ ಸಂಗ್ರಹಿಸಲು ನ. 14 ರಿಂದ ಸಮೀಕ್ಷಾ ಕಾರ್ಯ ಪ್ರಾರಂಭವಾಗಲಿದ್ದು, ಯಾವುದೇ ಮನೆ, ಪ್ರದೇಶ, ಮಕ್ಕಳು ಸಮೀಕ್ಷೆಯಿಂದ ಹೊರಗುಳಿಯದಂತೆ, ನಿಖರ ಮಾಹಿತಿ ಸಂಗ್ರಹಿಸುವ ಮೂಲಕ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಜಿಲ್ಲೆಯಲ್ಲಿ ಕೈಗೊಳ್ಳಬೇಕಿರುವ ಸಮೀಕ್ಷಾ ಕಾರ್ಯದ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯ ಮುಖ್ಯ ವಾಹಿನಿಗೆ ಬರುವ ಮಕ್ಕಳ ವಿವರವನ್ನು ಎಸ್‍ಎಟಿಎಸ್ ತಂತ್ರಾಂಶದಲ್ಲಿ ಅಳವಡಿಸುವ ಮೂಲಕ ಇಂತಹ ಮಕ್ಕಳ ಜಾಡು ಹಿಡಿಯುವ ಪ್ರಕ್ರಿಯೆ ಈಗಾಗಲೆ ಶಿಕ್ಷಣ ಇಲಾಖೆಯಲ್ಲಿ ಜಾರಿಯಲ್ಲಿದೆ. ಸದ್ಯ ಲಭ್ಯವಿರುವ ಮಾಹಿತಿಯಂತೆ ರಾಜ್ಯದಲ್ಲಿ 82,173 ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ 888 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ನ. 14 ರಿಂದ ಕೈಗೊಳ್ಳಲಿರುವ ಸಮೀಕ್ಷಾ ಕಾರ್ಯದ ಬಳಿಕ, ಈ ಸಂಖ್ಯೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಶಿಕ್ಷಣ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಸಮೀಕ್ಷೆಯನ್ನು ಕೈಗೊಳ್ಳಬೇಕಿದೆ.
ಇದಕ್ಕೆ ಪಂಚಾಯತಿ ಸದಸ್ಯರು, ಎಸ್‍ಡಿಎಂಸಿ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಎನ್‍ಎಸ್‍ಎಸ್ ಸ್ವಯಂ ಸೇವಕರು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಹಳೆ ವಿದ್ಯಾರ್ಥಿಗಳ ಸಂಘಗಳು ಅಲ್ಲದೆ ವಿವಿಧ ಎನ್‍ಜಿಒ ಗಳ ಸಹಯೋಗದೊಂದಿಗೆ ತಂಡವನ್ನು ರಚಿಸಿಕೊಂಡು, ಸಮೀಕ್ಷಾ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ವಿವರವನ್ನು ಆಯಾ ದಿನದಂದೇ ನೂತನ ತಂತ್ರಾಂಶದಲ್ಲಿ ಅಳವಡಿಸಬೇಕು.
ಸಮೀಕ್ಷೆ ಕಾರ್ಯ ಕುರಿತು ರಚಿಸಲಾಗಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿ ಸಭೆಯನ್ನು ಕೂಡಲೆ ನಡೆಸಿ, ಸಮೀಕ್ಷೆ ಕೈಗೊಳ್ಳಲು ರೂಪಿಸಿರುವ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಸಮೀಕ್ಷಾ ಕಾರ್ಯವನ್ನು ಕೇವಲ ಕರ್ತವ್ಯವೆಂದು ಭಾವಿಸದೆ, ಇದೊಂದು ಸಾಮಾಜಿಕ ಹೊಣೆಗಾರಿಕೆ ಎಂದರಿತು, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸೂಚನೆ ನೀಡಿದರು.
ಯಾವುದೇ ಪ್ರದೇಶ ಬಿಡಬೇಡಿ :
ನ. 14 ರಿಂದ ಜಿಲ್ಲೆಯಲ್ಲಿ 6 ರಿಂದ 16 ವರ್ಷದೊಳಗಿನ ವಯೋಮಾನದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಸಮೀಕ್ಷೆ ಸಂದರ್ಭದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಲಭ್ಯವಾಗಬಹುದಾದ ಯಾವುದೇ ಸ್ಥಳವನ್ನು ಬಿಡದಂತೆ ಸಮೀಕ್ಷೆ ನಡೆಸಬೇಕು. ಬಂದಿಖಾನೆಗಳು, ಕಟ್ಟಡ ಕಾಮಗಾರಿ ಸ್ಥಳಗಳು, ಮದರಸಾ, ಆಸ್ಪತ್ರೆ, ಹೋಟೆಲ್, ಛತ್ರಗಳು, ಚಿತ್ರಮಂದಿರಗಳು, ಸಣ್ಣ ಕಾರ್ಖಾನೆಗಳು, ಇಟ್ಟಿಗೆ ತಯಾರಿಕೆ ಸ್ಥಳ, ಮಂಡಕ್ಕಿ ಭಟ್ಟಿ, ಕೃಷಿ ಮತ್ತು ತೋಟಗಾರಿಕೆ ಪ್ರದೇಶ, ಎಸ್ಟೇಟ್‍ಗಳು, ರಸ್ತೆ ಕಾಮಗಾರಿ ನಡೆಯುವ ಸ್ಥಳ, ಗಣಿ ಪ್ರದೇಶ, ಕ್ವಾರಿಗಳು, ಗುಡ್ಡಗಾಡು, ಬುಡಕಟ್ಟು ಜನಾಂಗದ ಪ್ರದೇಶ, ಕಾಡು ಪ್ರದೇಶ, ಮೀನುಗಾರಿಕೆ ನಡೆಯುವ ಪ್ರದೇಶ, ಐತಿಹಾಸಿಕ ಸ್ಥಳಗಳು, ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು ಅಲ್ಲದೆ ಸಾಧ್ಯತೆಗಳಿರುವ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ, ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಕುರಿತು ಹೆಸರು, ವಿಳಾಸ, ಶಾಲೆಯಿಂದ ಹೊರಗುಳಿಯಲು ಕಾರಣ, ಆಧಾರ್ ಸಂಖ್ಯೆ ಸೇರಿದಂತೆ ಸಮಗ್ರ ವಿವರ ಸಂಗ್ರಹಿಸಬೇಕು. ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಲೋಪಗಳಾದಲ್ಲಿ ಆಯಾ ಗ್ರಾಮದ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
3776 ಮಕ್ಕಳು ಮರಳಿ ಶಾಲೆಗೆ : ಡಿಡಿಪಿಐ ಅಂಥೋನಿ ಅವರು ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ ಅಂತ್ಯದವರೆಗೆ ಲಭ್ಯ ಮಾಹಿತಿಯಂತೆ 4664 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು, ವಿದ್ಯಾಶಕ್ತಿ ಕಾರ್ಯಕ್ರಮದ ಮೂಲಕ ಈ ಪೈಕಿ 3776 ಮಕ್ಕಳನ್ನು ಪುನಃ ಶಿಕ್ಷಣದ ಮುಖ್ಯ ವಾಹಿನಿಗೆ ತರಲಾಗಿದೆ. ಸದ್ಯ ಇಲಾಖೆಯಲ್ಲಿ ಲಭ್ಯವಿರುವ ಅಂಕಿ-ಅಂಶಗಳಂತೆ ಜಿಲ್ಲೆಯಲ್ಲಿ 888 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಚಳ್ಳಕೆರೆ- 193, ಚಿತ್ರದುರ್ಗ-102, ಹಿರಿಯೂರು-186, ಹೊಳಲ್ಕೆರೆ-77, ಹೊಸದುರ್ಗ-166 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 164 ಮಕ್ಕಳಿದ್ದಾರೆ. ಕುಟುಂಬದ ವಲಸೆ, ಬಡತನ, ಮನೆಯಲ್ಲಿ ವಯಸ್ಸಾದ ಸದಸ್ಯರನ್ನು ನೋಡಿಕೊಳ್ಳುವ ಜವಾಬ್ದಾರಿ ಹೀಗೆ ಶಾಲೆಯಿಂದ ಹೊರಗುಳಿಯಲು ಹಲವು ಕಾರಣಗಳು ಕಂಡುಬಂದಿದೆ. ಇದೇ ನ. 14 ರಂದು ಎಲ್ಲೆಡೆ ಗ್ರಾಮ ಸಭೆಗಳನ್ನು ನಡೆಸಿ, ಗ್ರಾ.ಪಂ. ಅಧ್ಯಕ್ಷರು, ಪಿಡಿಓಗಳು ಹಾಗೂ ಜನಪ್ರತಿನಿಧಿಗಳ ನೆರವಿನೊಂದಿಗೆ, ಸಮಗ್ರ ಮಾಹಿತಿ ಪಡೆದು, ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ.
ನ. 17 ರಿಂದ 28 ರವರೆಗೆ ಜಿಲ್ಲೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಕಾರ್ಯಕ್ರಮ ರೂಪಿಸಲಾಗಿದೆ. ಹೀಗೆ ಸಂಗ್ರಹವಾದ ಅಂಕಿ-ಅಂಶಗಳ ವಿವರವನ್ನು ಎಸ್‍ಎಟಿಎಸ್ ತಂತ್ರಾಂಶದಲ್ಲಿ ನ. 29 ರಿಂದ ಡಿ. 15 ರವರೆಗೆ ಅಳವಡಿಸಲಾಗುವುದು. ಸಮೀಕ್ಷಾ ಕಾರ್ಯಕ್ಕೆ ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗವನ್ನು ಪಡೆಯಲಾಗುವುದು ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶಶಿಧರ್, ಸರ್ವ ಶಿಕ್ಷಣ ಅಭಿಯಾನದ ಯೋಜನಾ ಉಪಸಮನ್ವಯಾಧಿಕಾರಿ ಕೆಂಗಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








