ಮಾಜಿ ಶಾಸಕರ ಶಕ್ತಿ ಕೊಂಡಾಡಿದ ಎಂ.ಬಿ.ರೇಣುಕಯ್ಯ

ತುರುವೇಕೆರೆ

    ಮಾಜಿ ಶಾಸಕ ಹಾಗೂ ಜೆಡಿಎಸ್‍ನ ಮುಖಂಡ ಎಂ.ಟಿ.ಕೃಷ್ಣಪ್ಪನವರ ಶಕ್ತಿ ಏನೆಂದು ಇಡೀ ರಾಜ್ಯಕ್ಕೆ ತಿಳಿದಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ, 15 ವರ್ಷಗಳ ಕಾಲ ಶಾಸಕರಾಗಿ ಆಡಳಿತ ಮಾಡಿರುವ ಎಂ.ಟಿ.ಕೃಷ್ಣಪ್ಪನವರು ಹೋರಾಟದ ಮನೋಭಾವದವರು. ಅವರ ಬಗ್ಗೆ ಬಿಜೆಪಿಯ ಮುಖಂಡರು ಆಡಿರುವ ಮಾತುಗಳು ಅವರ ಸಣ್ಣತನವನ್ನು ತೋರಿಸುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ಎಂ.ಬಿ.ರೇಣುಕಯ್ಯ ಹೇಳಿದರು.

    ಎಪಿಎಂಸಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರದ ಹಲವು ಇಲಾಖೆಗಳಲ್ಲಿ ಓಡಾಡಿ ಪುನಃ ಬರಗಾಲ ಪೀಡಿತ ಪ್ರದೇಶದ ಪಟ್ಟಿಯಲ್ಲಿ ಸೇರಿಸಲು ಯಶಸ್ಸು ಆಗಿದ್ದಾರೆ. ಆದರೆ ಬಿಜೆಪಿಯ ಮುಖಂಡ ಕೊಂಡಜ್ಜಿ ವಿಶ್ವನಾಥ್ ಪ್ರಚಾರಕ್ಕೆ ಎಂ.ಟಿ.ಕೃಷ್ಣಪ್ಪ ಇಲ್ಲದ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಅಸ್ಥಿರತೆ ಕಾಡುತ್ತಿದೆ ಎಂದೆಲ್ಲಾ ಮಾತನಾಡಿರುವುದು ಅವರಿಗೆ ಶೋಭೆ ತರುವುದಲ್ಲ. ಎಂ.ಟಿ.ಕೃಷ್ಣಪ್ಪನವರು ಏನೆಂಬುದನ್ನು ಕ್ಷೇತ್ರದ ಜನರಿಗೆ ಈಗಾಗಲೇ ತಿಳಿದಿದೆ ಎಂದು ರೇಣುಕಯ್ಯ ತಿಳಿಸಿದರು.

    ಸಮ್ಮಿಶ್ರ ಸರ್ಕಾರದ ಉಪಯೋಗ ಪಡೆದು ತಾಲ್ಲೂಕನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಮಾಜಿ ಶಾಸಕರ ಸಹಕಾರವನ್ನು ಬಿಜೆಪಿಯ ಶಾಸಕರಾಗಿರುವ ಮಸಾಲಾ ಜಯರಾಮ್‍ರವರು ಪಡೆದುಕೊಳ್ಳಲಿ ಎಂದು ಸಲಹೆ ನೀಡಿದ ಎಪಿಎಂಸಿಯ ಉಪಾಧ್ಯಕ್ಷ ಎಂ.ನರಸಿಂಹ ಮಾಜಿ ಶಾಸಕರನ್ನು ಟೀಕಿಸುವುದರಿಂದ ಏನೂ ಪ್ರಯೋಜನವಿಲ್ಲ. ಕೃಷ್ಣಪ್ಪನವರ ಶಕ್ತಿ ಜನರಿಗೆ ಅರಿವಿದೆ. ಕೃಷ್ಣಪ್ಪನವರ ಸೇವೆ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಕ್ಷೇತ್ರದ ಜನರಿಗೆ ಇದೆ. ಕೃಷ್ಣಪ್ಪನವರ ಸಹಕಾರ ಪಡೆದು ತಾಲೂಕಿಗೆ ಅಭಿವೃಧ್ಧಿಗೆ ಶ್ರಮಿಸಿದರೆ ನಾವೂ ಸಹ ಪಕ್ಷಾತೀತವಾಗಿ ಅಭಿನಂದಿಸುತ್ತೇವೆ ಎಂದರು.

       ಎಪಿಎಂಸಿ ನಿರ್ದೇಶಕ ನರಸಿಂಹರಾಜು(ರಾಜು) ಮಾತನಾಡಿ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಆ ಕ್ಷಣವೇ ನೀರು ಬಿಡಿಸಿಕೊಳ್ಳಲು ಯಶಸ್ವಿಯಾದರು. ಅಣೆಕಟ್ಟೆಗಳಲ್ಲಿ ನೀರಿಲ್ಲದಿದ್ದ ಸಂದರ್ಭದಲ್ಲೂ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೋರಾಡಿ ಕೆರೆಕಟ್ಟೆಗಳಿಗೆ ನೀರು ಬಿಡಿಸಿದ್ದರು. ಈಗ ಅಣೆಕಟ್ಟೆಗಳೆಲ್ಲಾ ತುಂಬಿ ಹೆಚ್ಚುವರಿಯಾಗಿ ಬಿಡುತ್ತಿರುವ ನೀರಿನಲ್ಲಿ ಕೆರೆಗಳಿಗೆ ನೀರು ಹರಿಸಿಕೊಂಡಿರುವುದರಲ್ಲಿ ಹೆಚ್ಚುಗಾರಿಕೆ ಏನಿಲ್ಲ.

       ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಮಾಜಿ ಶಾಸಕರ ಸಹಕಾರ, ಸಲಹೆ ಕೇಳುವುದು ಬಿಟ್ಟು ವಿನಾಕಾರಣ ಅವರನ್ನು ತೆಗಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದರು.ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರನ್ನು ಕ್ಷೇತ್ರದ ಜನತೆ ಈಗಲೂ ನೀರಾವರಿ ಹರಿಕಾರ ಎಂದೇ ಕರೆಯುತ್ತಾರೆ. ಕ್ಷೇತ್ರದಲ್ಲಿ ಎಂ.ಟಿ.ಕೃಷ್ಣಪ್ಪನವರ ಹೆಸರು ಮುಂಚೂಣಿಯಲ್ಲಿದ್ದು ಅವರು ಮಾಡಿರುವ ಸಾಧನೆ ಏನು ಎಂಬುದು ತಾಲ್ಲೂಕಿನ ಜನತೆಗೆ ತಿಳಿದಿದೆ. ಬಿಜೆಪಿ ಮುಖಂಡರಾಗಿರುವ ಕೊಂಡಜ್ಜಿ ವಿಶ್ವನಾಥ್‍ಗೆ ರಾಜಕೀಯ ಪುನರ್ ಹುಟ್ಟು ನೀಡಿದ್ದ ಕೃಷ್ಣಪ್ಪನವರನ್ನು ಅವರು ಎಂದೆಂದೂ ಮರೆಯಬಾರದು.

         ಅಂದು ಬಿಜೆಪಿಯವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವಿಶ್ವನಾಥ್‍ರವರನ್ನು ಜೆಡಿಎಸ್‍ಗೆ ಕರೆ ತಂದು ರಾಜಕೀಯದಲ್ಲಿ ಮರು ಹುಟ್ಟು ಕೊಟ್ಟಂತ ಮಾಜಿ ಶಾಸಕರ ಬಗ್ಗೆ ಲಘುವಾಗಿ ಮಾತನಾಡುತ್ತಿರುವುದು ಎಷ್ಟು ಸರಿ? ಒಮ್ಮೆ ಅವಲೋಕನ ಮಾಡಿಕೊಳ್ಳಲಿ ಎಂದು ಎಪಿಎಂಸಿ ನಿರ್ದೇಶಕ ಎಂ.ಪಿ.ಲೋಕೇಶ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link