ಪಾವಗಡ
ಕುಡಿಯುವ ನೀರಿನ ಕೊಳವೆ ಬಾವಿ ಕೊರೆಯಲು ಬಂದಿದ್ದ ಲಾರಿಯನ್ನು ತಡೆದು ಮತ್ತೊಂದು ಕೊಳವೆ ಬಾವಿ ಕೊರೆಯುವಂತೆ ಖಾಲಿ ಕೊಡಗಳಿಂದ ಧರಣಿ ನಡೆಸಿದ ಘಟನೆ ತಿಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ತಾಲ್ಲೂಕಿನಾದ್ಯಂತ ಶುದ್ದ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು, ಪ್ರತಿ ಗ್ರಾಮದಲ್ಲಿ ನಾಲ್ಕರಿಂದ ಐದು ಕೊಳವೆ ಬಾವಿಗಳು ಅಂತರ್ಜಲ ಮಟ್ಟ ಕುಸಿತದಿಂದ ನೀರಿಲ್ಲದೆ ಬರಿದಾಗಿವೆ. ಜನರು ಪರದಾಡುವ ಪರಿಸ್ಥಿತಿ ಎದುರಾಗಿದ್ದ ಬೆನ್ನಲ್ಲೆ 2 ಸಾವಿರ ಜನಸಂಖ್ಯೆವುಳ್ಳ ಗ್ರಾಮ ತಿಮ್ಮನಹಳ್ಳಿಯಲ್ಲಿ ನಾಲ್ಕು ಕೊಳವೆ ಬಾವಿಗಳು ಕೊರೆದರೂ ಸ್ವಲ್ಪದಿನ ನೀರು ಬಂದು ಬರಿದಾದ ಬೆನ್ನಲ್ಲೇ ಬುಧವಾರ ಮತ್ತೊಂದು ಕೊಳವೆ ಬಾವಿಯನ್ನು ಕೊರೆದಾಗ ನೀರು ಸಿಗಲಿಲ್ಲ. ಲಾರಿ ಹಿಂತಿರುಗುವಾಗ ಗ್ರಾಮದ ಮಹಿಳೆಯರು ಲಾರಿಯನ್ನು ತಡೆದು ಖಾಲಿ ಕೊಡಗಳಿಂದ ಪ್ರತಿಭಟನೆ ನಡೆಸಿ ಮತ್ತೊಂದು ಬೋರ್‍ವೆಲ್ ಕೊರೆದು ಜನತೆಗೆ ನೀರು ಕೊಡುವವರೆಗೂ ಲಾರಿಗಳನ್ನು ಬಿಡುವುದಿಲ್ಲ ಎಂದು ಮಹಿಳೆಯರು ಒತ್ತಾಯಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯ ಆಂಜನೇಯಲು ಮಾತನಾಡಿ, ಸತತವಾಗಿ ಬರ ಆವರಿಸಿದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದೆ. ಶುದ್ದ ಕುಡಿಯುವ ನೀರಿಗಾಗಿ ಎರಡು ಕಿಲೋ ಮೀಟರ್ ದೂರ ಕ್ರಮಿಸ ಬೇಕಿದೆ. ಈಗಾಗಲೇ ಗ್ರಾಮದಲ್ಲಿ ಐದು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಒಂದರಲ್ಲೂ ಕೂಡ ನೀರು ಸಿಗದ ಪರಿಣಾಮ ಗ್ರಾಮದ ಜನತೆಗೆ ನೀರನ್ನು ಒದಗಿಸುವುದು ತುಂಬಾ ಕಷ್ಟಕರವಾಗಿದೆ. ಆದರೂ ಪ್ರಯತ್ನ ಬಿಡದೆ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಮುಖಾಂತರ ಮೇಲಧಿಕಾರಿಗಳ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದೆಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ನರಸಿಂಹ್ಮಮೂರ್ತಿ, ಶಿವಯ್ಯ, ಮುತ್ಯಾಲಪ್ಪ ಹಾಗೂ ಗ್ರಾಮಸ್ಥರಾದ ಬಾಬ್ ಜಾನ್, ಸಂಜೀವರಾಯಪ್ಪ, ಮುತ್ಯಾಲಮ್ಮ, ಹನುಮಕ್ಕ, ಮಾರಕ್ಕ, ಅನ್ನಪೂರ್ಣಮ್ಮ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
