ಚಳ್ಳಕೆರೆ
ಲೋಕಸಭಾ ಚುನಾವಣೆ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಯಶಸ್ಸಿಯಾಗಿ ಪೂರೈಸಬೇಕು. ಯಾವುದೇ ಹಂತದಲ್ಲೂ ಚುನಾವಣಾ ಆಯೋಗದ ನಿಯಮ ಉಲ್ಲಂಘನೆಯಾಗಬಾರದು. ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಿದರೆ ಮಾತ್ರ ಚುನಾವಣೆ ಯಾವುದೇ ಗೊಂದಲವಿಲ್ಲದೆ ಯಶಸ್ಸಿಯಾಗಲು ಸಾಧ್ಯವೆಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.
ಅವರು, ಗುರುವಾರ ಮಧ್ಯಾಹ್ನ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಚಳ್ಳಕೆರೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಸೆಕ್ಟರ್ ಆಪೀಸರ್, ವಿಎಸ್‍ಟಿ, ಎಫ್‍ಎಸ್‍ಟಿ ತಂಡದ ಅಧಿಕಾರಿಗಳೊಂದಿಗೆ ಚುನಾವಣಾ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಅಧಿಕಾರಿಗೂ ಜವಾಬ್ದಾರಿಯನ್ನು ಗುರುತು ಪಡಿಸಲಾಗಿದೆ.
ಯಾವುದೇ ಅಧಿಕಾರಿ ಚುನಾವಣಾ ಜವಾಬ್ದಾರಿ ಕಾರ್ಯದಲ್ಲಿ ನಿರ್ಲಕ್ಷ್ಯೆ ತೋರಿದಲ್ಲಿ, ಲೋಪವೆಸಗಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಲೋಪವೆಸಗಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದ್ದು, ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಈ ನಿಟ್ಟಿನಲ್ಲಿ ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು. ನೀವು ಉತ್ತಮವಾಗಿ ಕಾರ್ಯನಿರ್ವಹಿಸಿದಲ್ಲಿ ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸಿದಲ್ಲಿ ಯಾವುದೇ ಸಮಸ್ಯೆ ಎದುರಾಗದು.
ಯಾವುದೇ ಅಧಿಕಾರಿ ತನ್ನ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಎಆರ್‍ಒ ಮತ್ತು ತಹಶೀಲ್ದಾರ್‍ರವರನ್ನು ಭೇಟಿ ಮಾಡಿ ಅವರಿಂದ ನಿರ್ಧಿಷ್ಟ ಸಲಹೆ ಸೂಚನೆಗಳನ್ನು ಪಡೆಯಬೇಕು. ವಿಶೇಷವಾಗಿ ವಿವಿಫ್ಯಾಟ್ ಕಾರ್ಯನಿರ್ವಹಣೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಮಾಹಿತಿಯನ್ನು ಚುನಾವಣಾ ಮತಗಟ್ಟೆ ಅಧಿಕಾರಿಗಳಿಗೆ ತಪ್ಪದೆ ನೀಡಬೇಕು. ಯಾವುದೇ ಹಂತದಲ್ಲಿ ನಿಯಮ ಉಲ್ಲಂಘನೆಯಾಗದಂತೆ ಜಾಗೃತೆ ವಹಿಸಬೇಕು ಎಂದರು.
ಸಹಾಯಕ ಚುನಾವಣಾಧಿಕಾರಿ ರಾಜಶೇಖರ್ ಮಾತನಾಡಿ, ಈಗಾಗಲೇ ವಿಎಸ್‍ಟಿ ಮತ್ತು ಎಫ್‍ಎಸ್‍ಟಿ ತಂಡಗಳು ಪ್ರವಾಸ ನಡೆಸಿ ಯಾವುದೇ ಚುನಾವಣಾ ಆಕ್ರಮಣಗಳು ನಡೆಯದಂತೆ ಜಾಗ್ರತೆ ವಹಿಸಿವೆ. ಎಲ್ಲಾ ರಾಜಕೀಯ ಪಕ್ಷದ ನಾಯಕರಿಗೆ ಚುನಾವಣಾ ಆಯೋಗದ ನೀತಿ, ನಿಯಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಹಲವಾರು ಬಾರಿ ಸಭೆ ಕರೆದು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಲಾಗಿದೆ. ಚುನಾವಣಾ ಕಾರ್ಯದಲ್ಲಿ ನಿರತರಾದ ಎಲ್ಲಾ ಅಧಿಕಾರಿಗಳು ಇದುವರೆಗೂ ಯಾವುದೇ ಸಮಸ್ಯೆ ಇಲ್ಲದಂತೆ ಕಾರ್ಯನಿರ್ವಹಿಸಿದ್ಧಾರೆ ಎಂದರು.
ಹೆಚ್ಚುವರಿ ರಕ್ಷಣಾಧಿಕಾರಿ ಮಹಲಿಂಗ ಬಿ.ನಂದಿಗಾವಿ, ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ಬಿಇಒ ವೆಂಕಟೇಶಪ್ಪ, ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಅಕ್ಷರ ದಾಸೋಗ ಅಧಿಕಾರಿ ತಿಪ್ಪೇಸ್ವಾಮಿ, ಬಿಆರ್‍ಸಿ ಮಂಜಪ್ಪ, ಉಪಕೃಷಿ ನಿರ್ದೇಶಕಿ ಸುಜಾತ, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಮಾಲತಿ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ಮುಂತಾದವ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಇದಕ್ಕೂ ಮುನ್ನ ನಗರದ ಚಿತ್ರದುರ್ಗ, ಬಳ್ಳಾರಿ ರಸ್ತೆಯಲ್ಲಿನ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ಕರ್ತವ್ಯನಿರತ ಅಧಿಕಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








