ಉಜ್ಜಯಿನಿ
ಗ್ರಾಮದ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ಉತ್ಸವ ಸೋಮವಾರ ಆರಂಭವಾಯಿತು.
ಉಜ್ಜಯಿನಿ ಭಾಗದಲ್ಲಿ ಹಾರಕ ಎಂಬ ರಾಕ್ಷಸನ ಹಾವಳಿಯಿಂದ ತತ್ತರಿಸಿದ್ದ ಜನರ ರಕ್ಷಣೆಗೆ ಶ್ರೀ ಮರುಳಸಿದ್ದ ಸ್ವಾಮಿಗಳು ಪಟತೊಟ್ಟು ಸಂಹಾರಿಸಿದ್ದರು.
ಆಗ ಹೊರಟ ಸಂದರ್ಭದಲ್ಲಿ ಗ್ರಾಮದ ಆಡಳಿತವನ್ನು ಬಸಪ್ಪ ಎಂಬಾತನಿಗೆ ನೀಡಿದ್ದರಂತೆ. ಸಂಹಾರದ ನಂತರ ಭಾರತ ಹುಣ್ಣೆಮೆ ದಿನದಂದು ಗ್ರಾಮಕ್ಕೆ ವಾಪಸ್ಸು ಬಂದಾಗ ಆಡಳಿತ ವಾಪಸ್ಸು ನೀಡಲು ಬಸಪ್ಪ ನಿರಾಕರಿಸಿದನಂತೆ. ಆಗ ಸ್ವಾಮಿಗಳು ಅವನ ಕಾಲು ಮುರಿದು ಬಿಸಾಡಿ ಗ್ರಾಮಕ್ಕೆ ಪ್ರವೇಶಿಸಿದ್ದರಂತೆ. ಇದೇ ಹಿನ್ನಲೆಯಲ್ಲಿ ಭಾರತ ಹುಣ್ಣಿಮೆ ಆಚರಣೆಯನ್ನು ಉಜ್ಜಯಿನಿಯಲ್ಲಿ ವಿಶಿಷ್ಟವಾಗಿ ನಡೆದುಕೊಂಡು ಬರುತ್ತಿದೆ.
ಗ್ರಾಮದ ಸುತ್ತಲ ಗ್ರಾಮಗಳಲ್ಲಿರುವ ಒಂಭತ್ತು ಪಾದಗಟ್ಟೆಗಳಿಗೆ ಸ್ವಾಮಿಯ ಪಲ್ಲಕಿ ಉತ್ಸವ ಸಾಗುತ್ತಿತ್ತು. ಬದಲಾದ ಕಾಲದಲ್ಲಿ ಇದೀಗ ಅದನ್ನು 2 ದಿನಕ್ಕೆ ಸೀಮಿತಗೊಳಿಸಿದೆ. ಸೋಮವಾರ ಬೆಳಗ್ಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನದಿಂದ ಉತ್ಸವ ಮೂರ್ತಿಯ ಪಲ್ಲಕಿ ಉತ್ಸವ ಆರಂಭಕ್ಕೆ ಗ್ರಾಮದ ಮತ್ತು ಸುತ್ತಲ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಸ್ಥಾನದ ಆಯಗಾರರು, ಅರ್ಚಕರು, ಭಕ್ತರು ಮಂಗಳವಾದ್ಯಗಳೊಂದಿಗೆ ಸಂಪ್ರದಾಯದಂತೆ ಸುತ್ತಲಿನ ಪಾದಗಟ್ಟೆಗೆ ಉತ್ಸವವನ್ನು ಕೊಂಡೊಯ್ದರು.
ಭಾರತ ಹುಣ್ಣಿಮೆ ದಿನವಾದ ಮಂಗಳವಾರ ರಾತ್ರಿ ಪಲ್ಲಕಿ ಉತ್ಸವ ಗ್ರಾಮಕ್ಕೆ ಆಗಮಿಸಿ ವಿಧಾನಗಳ ಮೂಲಕ ದೇವಸ್ಥಾನಕ್ಕೆ ಪುನರ್ ಪ್ರವೇಶ ಮಾಡುವುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
