ಜನನಿಬಿಡ ಪ್ರದೇಶದಲ್ಲಿ ಬ್ಲೀಚಿಂಗ್ ಸಿಂಪಡಿಸಿಲ್ಲ

ಕುಣಿಗಲ್

    ದೇಶ ಲಾಕ್‍ಡೌನ್ ಆಗಿ ಎಂಟು ದಿನಗಳು ಮಾತ್ರ ಕಳೆದಿವೆ. ಆದರೂ ಇನ್ನೂ ಜನರು ತಮ್ಮದೇ ಆದ ವ್ಯಾಖ್ಯಾನ ಮಾಡುತ್ತ ಸುಮ್ಮನೆ ಸುತ್ತೋ ಕೆಲಸ ಮಾತ್ರ ಬಿಟ್ಟಿಲ್ಲ. ಹಾಲು, ಔಷಧಿ, ದಿನಸಿ ವ್ಯಾಪಾರಿಗಳ ಬಳಿ ಶಿಸ್ತು ಬಂದ್ರೂ, ಇನ್ನೂ ತರಕಾರಿ ವ್ಯಾಪಾರದ ಸ್ಥಳದಲ್ಲಿ ಬರಲಿಲ್ಲ. ಇಂತಹ ಪರಿಸ್ಥಿತಿಯನ್ನು ನೋಡುತ್ತಿರುವ ಅಧಿಕಾರಿಗಳು, ಪೊಲೀಸರು, ಪ್ರಜ್ಞಾವಂತ ನಾಗರಿಕರು “ಈ ಜನ ಮನೆಯಲ್ಲಿ ಇರಬೇಕು ಅಂದ್ರೆ ಇನ್ನೇನು ಕೊಡಬೇಕಪ್ಪಾ? ಸರ್ಕಾರ ಕೊಟ್ಟಿರೋದ್ ಸಾಲ್ದಾ? ಇಷ್ಟಾದರೂ ನಿತ್ಯ ಒಂದಲ್ಲಾ ಒಂದು ಸಬೂಬು ಹೇಳುತ್ತ ಬೈಕ್, ಕಾರುಗಳಲ್ಲಿ ಸುತ್ತೋದ್ ಮಾಮೂಲಿಯಾಗಿದೆಯಲ್ಲ? ಆ ದೇವರೇ ಇವರನ್ನ ಕಾಪಾಡ್ಬೇಕ್ರಿ’’ ಎಂದು ಬೈಕ್‍ಗಳನ್ನೇ ವಶಕ್ಕೆ ಪಡೆಯುತ್ತಿದ್ದಾರೆ.

       ಮೊದಲು ಎಲ್ಲಿ ನೋಡಿದರಲ್ಲಿ ಜನವೋಜನ ಗಜಿಬಿಜಿ ಎನ್ನುತ್ತ ಮೇಲ್ಬಿದ್ದು, ಸಾಮಗ್ರಿಗಳನ್ನು ಕೊಳ್ಳುತ್ತಿದ್ದರು. ಇದನ್ನು ನೋಡಿದ ಅಧಿಕಾರಿಗಳು ದಿನಾ ಒಂದೊಂದು ರೀತಿ ನಿಯಮ ಜಾರಿಗೊಳಿಸುವ ಮೂಲಕ ಅದನ್ನು ಪಾಲಿಸುವಂತೆ ಮಾಡಿದರು. ಅದರಿಂದ ಕುಣಿಗಲ್ ಪಟ್ಟಣ ಸೇರಿದಂತೆ ಎಡೆಯೂರು, ಅಮೃತೂರು, ಹುಲಿಯೂರುದುರ್ಗ, ಹುತ್ರಿದುರ್ಗದ ಈ ಎಲ್ಲಾ ಭಾಗದಲ್ಲಿಯೂ ಸರತಿ ಸಾಲಿನಲ್ಲಿ ನಿಂತು ಹಾಲು, ದಿನಸಿ, ನೀರು, ಔಷಧಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಇವುಗಳನ್ನು ಪಡೆಯಲು ಪರಸ್ಪರ ಮೂರು ಅಡಿ ಗ್ಯಾಪ್ ಬಿಟ್ಟು ನಿಂತು, ತಮಗೆ ಬೇಕಾದ ಸಾಮಗ್ರಿಗಳನ್ನು ಕೊಂಡು ಕೊಂಡು ಹೋಗುತ್ತಿದ್ದಾರೆ. ಇಷ್ಟಾದರೂ ಒಮ್ಮೊಮ್ಮೆ ಈ ಜನರಿಗೆ ಮೈಮೇಲೆ ಏನೋ ಬಂದವರಂಗೆ ಒಂದೇ ಬಾರಿಗೆ ಗುಂಪು ಗುಂಪಾಗಿ ನುಗ್ಗೇ ಬಿಡುತ್ತಾರೆ. ಆಗ ವ್ಯಾಪಾರಿಗಳು ಇಂತಹ ಜನರನ್ನು ಕೂಗಿ ತಡೆದು ನಿಲ್ಲಿಸಿ, ಶಿಸ್ತು ಹೇಳುವಂತಹ ಕೆಲಸ ಇನ್ನೂ ನಡೆಯುತ್ತಲೇ ಇದೆ.
ಪುರಸಭಾ ಕರ್ಮಚಾರಿಗಳು ಕೊಳಚೆ ಕಸದಿಂದ ತುಂಬಿ ಹೋಗಿದ್ದ ಸಂತೆ ಬೀದಿಯ ಚರಂಡಿಗಳನ್ನು ಸ್ವಚ್ಛ ಮಾಡಿ ಎರಡು ದಿನಗಳಾಗಿದೆ.

     ಆದರೂ ಇನ್ನೂ ಅಲ್ಲಿ ಬ್ಲೀಚಿಂಗ್ ಹಾಕಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳು ಒಂದೆಡೆ. ಇನ್ನೊಂದೆಡೆ ತರಕಾರಿ ಮಾರಾಟ ಮಾಡುವ ಸ್ಥಳ ಬದಲಾದರೂ ಇನ್ನೂ ಜನ ಮಾತ್ರ ಬದಲಾಗಲಿಲ್ಲ. ಗುಂಪು ಗುಂಪಾಗಿ ನಿಂತು ಕೆಮ್ಮುತ್ತಾ, ಕ್ಯಾಕರಿಸಿ ಉಗಿಯುತ್ತ, ಸೀನುತ್ತಲೆ ಸಂತೆ ಮಾರುಕಟ್ಟೆಗೆ ಹೋಗುವುದು ಪರಿಪಾಠವಾಗಿದೆ. ಒಂದು ಮನೆಗೆ ಒಂದು ವಾರಕ್ಕೆ ಆಗುವಷ್ಟು ಖರೀದಿ ಮಾಡಲೆಂದೆ ಹಿಂದಿನಿಂದಲು ಸಂತೆಗಳು ವಾರಕೊಮ್ಮೆ ನಿಗದಿ ಆಗಿರೋದು ಗೊತ್ತಿರುವ ವಿಚಾರ.

     ಆದರೆ ಟೌನ್‍ಗಳಲ್ಲಿ ನಿತ್ಯ ತರಕಾರಿಯನ್ನು ಸಾಮಾನ್ಯ ದಿನಮಾನದಲ್ಲಿ ಕೊಳ್ಳುತ್ತಿದ್ದಂತೆ ಈಗಲೂ ಬಂದು ತರಕಾರಿ ಕೊಳ್ಳೋ ಪರಿಪಾಠಕ್ಕೆ ಬ್ರೇಕ್ ಹಾಕಿಲ್ಲ. ಬೆಳೆದ ರೈತ ಮುಂಜಾನೆ ಮೂಟೆ ಕಟ್ಟಿಕೊಂಡು ಬಂದು ಒಂದು ಕಡೆ ನಿಂತರೆ, ಇನ್ನು ಮಾಮೂಲಿ ತರಕಾರಿಯವರು ಬರುವ ಗಿರಾಕಿಗಳು ಬೇರೆ ಕಡೆ ಹೋಗುತ್ತಾರೆಂಬ ತರಾತುರಿಯಲ್ಲಿ ಗುಂಪಾದ್ರು ನಿಂತ್ಕೊಳ್ಳಿ, ಹೆಂಗಾದ್ರೂ ಇರಲಿ, ತಮ್ಮ ತರಕಾರಿ ವ್ಯಾಪಾರವಾಗಿ ಕಿಸೆಗೆ ದುಡ್ಡು ಬಂದರೆ ಸಾಕು ಎಂದು ನಿರ್ಧರಿಸಿರುವಂತೆ ಸನ್ನಿವೇಶ ಗೋಚರಿಸುತ್ತದೆ. ಇದರಿಂದ ಜನರೂ ಮೇಲ್ಬಿದ್ದವರಂತೆ ಗುಂಪು ಗುಂಪಾಗಿ ನಿಂತು ತರಕಾರಿ ಕೊಳ್ಳೋದು ಮಾಮೂಲಿಯಾಗಿದೆ. ಇದೊಂದು ಅವ್ಯವಸ್ಥೆಯನ್ನು ಪುರಸಭೆಯವರು, ಪೊಲೀಸರು ತಪ್ಪಿಸಿದರೆ ಇಂದಿನ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ತಾಲ್ಲೂಕು ಆಡಳಿತ ಉತ್ತಮ ಹೆಜ್ಜೆಯನ್ನಿಟ್ಟಿದೆ ಎನ್ನಬಹುದಾಗಿದೆ.

 “ನೋಡ್ರಪ್ಪೋ ನೋಡ್ರಿ, ಬ್ಲೀಚಿಂಗ್ ಪೌಡರ್ ಹಾಕೋ ಪರಿ ನೋಡಿ’’್ರ ಎಂದು ನಾಗರಿಕರು ವ್ಯಂಗ್ಯ ಮಾಡಿ ಆಡಿಕೊಳ್ಳುವಂತಹ ಕೆಲಸವನ್ನು ಇಲ್ಲಿನ ಪುರಸಭೆಯವರು ಮಾಡಿದ್ದಾರೆ. ಇಲ್ಲಿನ ಅಗ್ನಿ ಶಾಮಕ ವಾಹನದ ಟ್ಯಾಂಕ್‍ಗೆ ಇಂತಿಷ್ಟು ಪ್ರಮಾಣದಲ್ಲಿ ಬ್ಲೀಚಿಂಗ್ ಬೆರೆಸಲು ಸೂಚಿಸಿ ಅವರನ್ನು ಬಳಸಿಕೊಂಡು ಸಂತೆ ಮೈದಾನ, ಸಂತೆ ಬೀದಿ, ವ್ಯಾಪಾರ ಕೇಂದ್ರ ಸ್ಥಳಗಳಲ್ಲಿ ಬ್ಲೀಚಿಂಗ್ ಹಾಕಿಸುವುದನ್ನು ಬಿಟ್ಟು, ಮುಖ್ಯರಸ್ತೆಯಾದ ಹಳೆಯ ಬಿ.ಎಂ.ರಸ್ತೆಯ ಮಧ್ಯಭಾಗದಲ್ಲಿ ನಿಂತು ಬಿಸಿಲಿನ ತಾಪಕ್ಕೆ ಈಗಾಗಲೆ ಕಾದು ನಿತ್ಯ ಸುಡುತ್ತಿರುವ ರಸ್ತೆಯ ಎರಡು ಭಾಗಕ್ಕೆ ಫೈರ್ ಎಂಜಿನ್ ಮೂಲಕ ಬ್ಲೀಚಿಂಗ್ ಹಾಕಿದರೆ ಪ್ರಯೋಜನ ಏನು? ಕಾದಿರುವ ಟಾರ್ ರಸ್ತೆಯಲ್ಲಿ ಏನಿದೆ ಅಂತಾ ಹಾಕ್ತಿದಾರೆ? ಇವರಿಗೆ ಮುಖ್ಯರಸ್ತೆಯ ಚರಂಡಿಗಳು, ಪಟ್ಟಣದಲ್ಲಿ ದುರ್ನಾತ ಬೀರುತ್ತ ಹರಿಯುತ್ತಿರುವ ಚರಂಡಿಗಳು ಹಾಗೂ ಸಂತೆ ಮೈದಾನ, ಸಂತೆ ಬೀದಿ, ಬಸ್‍ನಿಲ್ದಾಣ ಇಂತಹ ಸ್ಥಳಗಳು ಕಾಣುತ್ತಿಲ್ಲವೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

     ಪಟ್ಟಣದ ಮಹಾವೀರನಗರ, ತುಮಕೂರು ರಸ್ತೆಯ ಉದ್ಯಾನವನ, ಸೈಂಟ್ ರೀಟಾ ಸ್ಕೂಲ್‍ರಸ್ತೆ, ಪೋಸ್ಟ್ ಆಫೀಸ್ ರಸ್ತೆ, ಅಂದಾನಯ್ಯ ಬಡಾವಣೆ, ಕೋಟೆ, ಗುಜ್ಜಾರಿ ಮೊಹಲ್ಲಾ, ಸಿದ್ದಾರ್ಥನಗರ, ದೊಡ್ಡಪೇಟೆ, ರಮಣಾಬ್ಲಾಕ್, ಉಪ್ಪಾರಬೀದಿ, ಹೌಸಿಂಗ್‍ಬೋರ್ಡ್ ಮುಂತಾದ ಕಡೆ ಬ್ಲೀಚಿಂಗ್ ಹಾಕುವಲ್ಲಿ ರಾಜಕೀಯ ಹಾಗೂ ತಾರತಮ್ಯ ಮಾಡುತ್ತಿದ್ದಾರೆಂದು ಹಲವು ನಾಗರಿಕರು ಆರೋಪಿಸಿದ್ದಾರೆ. ಅಲ್ಲದೆ ಸಮಯಕ್ಕೆ ಸರಿಯಾಗಿ ನೀರು ಬಿಡುವ ಕೆಲಸವನ್ನು ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ