ಬೆಂಗಳೂರು
ನಿರ್ಮಾಣ ಹಂತದ ವಾಹನ ನಿಲುಗಡೆಯ ಬಹುಮಹಡಿಗಳ ಕಟ್ಟಡ(ಮಲ್ಟಿಲೆವಲ್ ಕಾರ್ ಪಾರ್ಕಿಂಗ್) ಕುಸಿದು ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟು 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದಾರುಣ ಘಟನೆ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ
ಮೃತ ದುರ್ದೈವಿ ಕಾರ್ಮಿಕರನ್ನು ಬಿಹಾರ ಮೂಲದ ರಾಕೇಶ್(21) ಹಾಗೂ ಪಶ್ಚಿಮ ಬಂಗಾಳ ಮೂಲದ ರಾಹುಲ್ ಗೋಸ್ವಾಮಿ(19) ಎಂದು ಗುರುತಿಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ದುರ್ಘಟನೆಯಲ್ಲಿ ಗಾಯಗೊಂಡಿರುವ ಬಿಹಾರದ ಒಂಪ್ರಕಾಶ್ (21) ಯಾದಗಿರಿಯ ದೇವರಾಜು (21) ಹನುಮಂತ (21), ಮಲ್ಲಿಕಾರ್ಜುನ (20), ದೊಡ್ಡಪ್ಪ (21) , ಸಿದ್ದಪ್ಪ (23) ಪಶ್ಚಿಮ ಬಂಗಾಳ ಗಿರಿಜ್ (35) ಅಬ್ದುಲ್ ಹಮೀದ್ ಶೇಖ್ (40) ಚೋಟು ಬುಯ್ಯ (24)ಶಾಮ್ ಗೋಸ್ವಾಮಿ (40), ನಿಯಾಜುಲ್ ಶೇಕ್ (30), ನಾಸಿರ್ ಶೇಕ್ (32)ರನ್ನು ಸ್ಥಳೀಯ ಕಣ್ವ ಆಸ್ಪತ್ರೆಗೆ ದಾಖಲಿಸಲಾಗಿದೆ ಅವರಲ್ಲಿ ಓಂಪ್ರಕಾಶ್ ಹನುಮಂತ ಅವರ ಸ್ಥಿತಿ ಗಂಭೀರವಾಗಿದ್ದರೆ ಉಳಿದೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರ್‍ಎಂಸಿ ಯಾರ್ಡ್ ಪೆÇಲೀಸ್ ಠಾಣೆ ಹಿಂಭಾಗದ ಎಪಿಎಂಸಿ ಆವರಣದಲ್ಲಿ ಎಪಿಎಂಸಿಯಿಂದ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ಮಲ್ಟಿಲೆವಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣವಾಗುತ್ತಿತ್ತು. ನಿರ್ಮಾಣ ಕಾಮಗಾರಿಯನ್ನು ಸ್ಟಾರ್ ಕನ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, 24 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ವಿಧಿಸಲಾಗಿತ್ತು.
ಸೆಂಟ್ರಿಂಗ್ ಕಾಮಗಾರಿ
ಕಳೆದ ಹಲವು ದಿನಗಳಿಂದ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ನಿನ್ನೆ ಮೂರನೇ ಮಹಡಿಗೆ ಕಾಂಕ್ರಿಟ್ ಹಾಕಲು ಸೆಂಟ್ರಿಂಗ್ ನಿರ್ಮಾಣ ಮಾಡಲಾಗಿ ಕಂಬಿಗಳನ್ನು ಕಟ್ಟಿ ಅಣಿಗೊಳಿಸಲಾಗಿತ್ತು.ಸೆಂಟ್ರಿಂಗ್ ಪೈಪ್‍ಗಳನ್ನು ಕಟ್ಟುವ ಜಾಗದಲ್ಲಿ ಸಡಿಲ ಉಂಟಾಗಿ ಮುಂಜಾನೆ 4.40ರ ವೇಳೆ ಏಕಾಎಕಿ ಕುಸಿದಿದೆ.
ಕಟ್ಟಡದ ಕೆಳಭಾಗದಲ್ಲಿಯೇ ಮಲಗಿ ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದ ಸುಮಾರು 20 ಮಂದಿಯ ಮೇಲೆ ಮಣ್ಣು ಸೆಂಟ್ರಿಂಗ್ ವಸ್ತುಗಳು ಪೈಪ್‍ಗಳು ಕಂಬಿಗಳು ಬಿದ್ದು ರಾಕೇಶ್ ಹಾಗೂ ರಾಹುಲ್ ಸೇರಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡರು.ಗಾಯಗೊಂಡವರ ಕೂಗಾಟ ಕೇಳಿ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೆÇಲೀಸರು ಗಾಯಗೊಂಡ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು.
ಇಂಜಿನಿಯರ್ ಸೆರೆ
ಅವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಕೇಶ್ ಹಾಗೂ ರಾಹುಲ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿರುವ ಆರ್‍ಎಂಸಿ ಯಾರ್ಡ್ ಪೊಲೀಸರು, ಕಾಮಗಾರಿ ನಿರ್ಲಕ್ಷ್ಯ ಪ್ರಕರಣ ದಾಖಲಿಸಿ, ಗುತ್ತಿಗೆದಾರ ಉಮಾಶಂಕರ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.ಕಟ್ಟಡ ಕುಸಿತದ ಕಾಮಗಾರಿಯ ಸ್ಥಳಕ್ಕೆ ಎಪಿಎಂಸಿಯ ಕಾರ್ಯದರ್ಶಿ ಅನಿಲ್ ಕುಮಾರ್ ಅವರು ಭೇಟಿನೀಡಿ ಪರಿಶೀಲನೆ ನಡೆಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಾರ್ಮಿಕರ ಆರೋಗ್ಯ ವಿಚಾರಿಸಿ, ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
