ಬೆಂಗಳೂರು
ನಾಡಿನ ರಕ್ಷಣೆಗಾಗಿ ಹಗಲು-ಇರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ವೇತನ, ಭತ್ಯ, ಸೌಲಭ್ಯ ಪರಿಷ್ಕರಣೆ ಕುರಿತ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪೊಲೀಸ್ ಹುತಾತ್ಮದಿನ ಅಂಗವಾಗಿ ನಗರದ ಕೋರಮಂಗಲದ ಕೆಎಸ್‍ಆರ್‍ಪಿ ಮೈದಾನದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಹುತಾತ್ಮ ಪೊಲೀಸರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಅವರು ಈ ವಿಷಯ ತಿಳಿಸಿದರು.
ಪೊಲೀಸ್ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ವರಿಷ್ಠ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೀಡಿರುವ ವರದಿಯ ಸಾಧಕ – ಬಾಧಕಗಳ ಕುರಿತು ಗೃಹ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಶೀಘ್ರ ಅನುಷ್ಠಾನ ಮಾಡಲಾಗುವುದು ಎಂದರು.
ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕುವಲ್ಲಿ ಪೊಲೀಸರು ಮತ್ತಷ್ಟು ಚುರುಕಿನಿಂದ ಕೆಲಸ ನಿರ್ವಹಣೆ ಮಾಡಬೇಕು. ಆಂತರಿಕ ಭದ್ರತೆ ಕಾಪಾಡಲು ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಯುವ ಸಮೂಹ ಹಾದಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸರ ಮೇಲಿದೆ. ಡ್ರಗ್ ಮಾಫಿಯಾ, ರಿಯಲ್ ಎಸ್ಟೇಟ್ ಮಾಫೀಯಾವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವಂತೆ ಪೊಲೀಸರಿಗೆ ನಿರ್ದೇಶನ ನೀಡಿದರು.
ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ ಈ ನಿಟ್ಟಿನಲ್ಲಿ ಇನ್‍ಫೋಸಿಸ್ಸ್ ಸಂಸ್ಥೆ 22 ಕೋಟಿ ರೂಪಾಯಿಗಳನ್ನು ವೆಚ್ಚಮಾಡಲು ನಿರ್ಧಾರ ಮಾಡಿದೆ. ಇನ್‍ಫೋಸಿಸ್ಸ್ ಫೌಂಡೆಷನ್ ನೀಡುವ ನೆರವಿನ ಜೊತೆಗೆ ಸರ್ಕಾರವು ಕೈಜೋಡಿಸಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದಕ್ಕೂ ಮುನ್ನ ಹುತಾತ್ಮರ ಸ್ಮಾರಕಕ್ಕೆ ರೀತ್ ಸಮರ್ಪಣೆ ಮಾಡಲಾಯಿತು. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಗೃಹ ಕಾರ್ಯದರ್ಶಿ ಡಾ: ರಜನೀಶ್ ಗೋಯಲ್, ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಆರ್. ರಾಮಲಿಂಗಂ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ: ಮನುಬಳಿಗಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ; ಎಸ್.ಜಿ. ಸಿದ್ದರಾಮಯ್ಯ, ಮೇಜರ್ ಜನರಲ್ ಸಂಜೀವ್ ನರೇನ್, ನ್ಯಾಷನಲ್ ಲಾ ಸ್ಕೂಲ್‍ನ ಉಪಕುಲಪತಿ ವೆಂಕಟ ರಾವ್, ಚಿತ್ರನಟ ಸುದೀಪ್, ಸಮಾಜದ ವಿವಿಧ ವರ್ಗಗಳ ಮುಖ್ಯಸ್ಥರು, ಅಧಿಕಾರಿಗಳು ಸ್ಮಾರಕಕ್ಕೆ ಪುಷ್ಪ ಗುಚ್ಚವಿರಿಸಿ ಗೌರವ ಸಮರ್ಪಿಸಿದರು.ಪೊಲೀಸ್ ಬ್ಯಾಂಡ್ ತಂಡದವರು ರಾಷ್ಟ್ರಗೀತೆಯನ್ನು ಮೂರು ಭಾಗಗಳಲ್ಲಿ ನುಡಿಸಿದರು. ಹುತಾತ್ಮರ ಗೌರವಾರ್ಥ ಮೂರು ಸುತ್ತು ಗುಂಡು ಹಾರಿಸಲಾಯಿತು.
ಪೊಲೀಸ್ ಬ್ಯಾಂಡ್‍ನವರು “ ಅಬೈಡ್ ವಿತ್ ಮಿ “ ವಿದಾಯ ಗೀತೆ ನುಡಿಸಿದರು. ನಂತರ ಪೆರೆಡ್ ಕಮಾಂಡರ್ ನೇತೃತ್ವದಲ್ಲಿ ಪೆರೆಡ್ ತಂಡ ನಿರ್ಗಮಿಸಿತು.
ನೃಪತುಂಗ ರಸ್ತೆಯಲ್ಲಿ ಜಿರ್ಣೋದ್ದಾರದ ನಂತರ ಸಿದ್ದಗೊಂಡಿರುವ ಪೊಲೀಸ್ ಸ್ಮಾರಕವನ್ನು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಉದ್ಘಾಟಿಸಿದರು. ಇದರ ಜೊತೆಗೆ ಕೆಎಸ್‍ಆರ್‍ಪಿ ಮೈದಾನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನವೀಕರಿಸಲಾದ ನಂದಿನ ಹಾಲಿನ ಕೇಂದ್ರವನ್ನೂ ಪರಮೇಶ್ವರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್, ಡಿಜಿಪಿ ನೀಲಮಣಿ ರಾಜು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಹಿರಿಯ ಪೊಲೀಸ್ ಆಧಿಕಾರಿಗಳು ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ