ಧಾರವಾಡ:
ಎಚ್‌ಐವಿ ಪೀಡಿತ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ, ಈ ಕೆರೆಯ ನೀರು ಕುಡಿಯಲು ಗ್ರಾಮಸ್ಥರು ನಿರಾಕರಿಸಿದ್ದಾರೆ.
ಎಚ್‌ಐವಿ ರೋಗ ಹೊಂದಿದ್ದ ಗ್ರಾಮದ ಮಹಿಳೆಯೊಬ್ಬರು ಮೊರಬ ಗ್ರಾಮದ ಏಕೈಕ ಕುಡಿಯುವ ನೀರಿನ ಕೆರೆಗೆ ಹಾರಿ ನಾಲ್ಕೈದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ಅಂದರೆ ನ. 29ರಂದು ಶವ ಮೇಲೆದ್ದಾಗ ಗ್ರಾಮಸ್ಥರಿಗೆ ವಿಷಯ ತಿಳಿದು ತಮಗೂ ಆ ರೋಗ ಅಂಟಬಹುದು ಎಂಬ ಭಯದಲ್ಲಿ ಗ್ರಾಮದಲ್ಲಿ ದಿಗಿಲು ಹುಟ್ಟಿಕೊಂಡಿತು. ಗ್ರಾಮಸ್ಥರು ಕೆರೆಯ ನೀರು ಕುಡಿಯಲು ನಿರಾಕರಿಸಿ, ಕೆರೆ ಖಾಲಿ ಮಾಡುವಂತೆ ಗ್ರಾಮಪಂಚಾಯತ್ ಮತ್ತು ತಾಲೂಕು ಪಂಚಾಯತ್ ಮೇಲೆ ಒತ್ತಡ ತಂದಿದ್ದರು.
ಗ್ರಾಮಸ್ಥರ ಮನವೊಲಿಸುವಲ್ಲಿ ವಿಫಲರಾದ ಅಧಿಕಾರಿಗಳು ಇದೀಗ 36 ಎಕರೆಯ ವಿಶಾಲ ಕೆರೆಯನ್ನು ಬರಿದುಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ. ಈಗ ಇಡೀ ಕೆರೆಯ ನೀರನ್ನು ಸೈಫೋನ್ ಪೈಪುಗಳ ಮೂಲಕ ಹೊರ ಹಾಕಿಸುತ್ತಿದ್ದಾರೆ. ಅದಕ್ಕಾಗಿ 20 ಪೈಪಗಳನ್ನು ಅಳವಡಿಸಿ ಕಳೆದ ಮೂರು ದಿನಗಳಿಂದ ನೀರನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಕೆರೆಯ ನೀರು ಅಷ್ಟು ಸುಲಭವಾಗಿ ಖಾಲಿಯಾಗಲ್ಲ ಎಂದು ಕೆರೆಯ ವಾಲನ್ನ ಕೂಡಾ ಬಿಚ್ಚಿ ನೀರು ಖಾಲಿ ಮಾಡಲಾಗುತ್ತಿದೆ.
ನೀರು ಖಾಲಿಮಾಡಿಸಿದ ನಂತರ ಮತ್ತೆ ಕೆರೆ ಭರ್ತಿಯಾಗಲು ಕನಿಷ್ಠ 15 ದಿನಗಳಾದರೂ ಬೇಕಾಗುತ್ತದೆ. ಬಳಿಕ ಮಲಪ್ರಭಾ ನೀರಿನಿಂದ ಮತ್ತೆ ಕೆರೆ ತುಂಬಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಮುಂದಾಗಿದ್ದಾರೆ.
ಮೊರಬ ಕೆರೆ ನವಲಗುಂದ ತಾಲೂಕಿನಲ್ಲೇ ಅತಿದೊಡ್ಡ ಕೆರೆಯಾಗಿದ್ದು, 18 ಸಾವಿರ ಜನಸಂಖ್ಯೆ ಹೊಂದಿದ್ದು, 36 ಎಕರೆ ವಿಸ್ತೀರ್ಣದ ಈ ಕೆರೆಯೇ ಗ್ರಾಮದ ಜನರಿಗೆ ಕುಡಿಯುವ ನೀರಿನ ಮೂಲವಾಗಿದೆ. ಗ್ರಾಮಸ್ಥರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಏಕೈಕ ಮೂಲವಾಗಿದೆ.
ವೈದ್ಯರ ವಾದ :
ವಾಸ್ತವವಾಗಿ ಎಚ್‌ಐವಿ ಪೀಡಿತ ವ್ಯಕ್ತಿ ಮೃತಪಟ್ಟಾಗ ವೈರಸ್ ಕೂಡಾ ಸಾಯುತ್ತದೆ. ದೇಹದಿಂದ ಹೊರಗೆ ವೈರಸ್ ಬಂದರೆ ಕೂಡಾ ಕೆಲವೇ ಸೆಕೆಂಡ್‌ಗಳಲ್ಲಿ ಅದು ಸಾಯುತ್ತದೆ. ಈ ಸೋಂಕು ನೀರಿನಿಂದ ಹರಡುವ ಸಾಧ್ಯತೆ ಇಲ್ಲ ಎಂದು ಎಚ್‌ಐವಿ ರೋಗಿಗಳ ಆರೈಕೆ ಮಾಡುತ್ತಿರುವ ಆಶಾ ಫೌಂಡೇಷನ್‌ನ ಡಾ. ಗ್ಲೋರಿ ಅಲೆಗ್ಸಾಂಡರ್ ಅವರು ಸ್ಪಷ್ಟಪಡಿಸಿದ್ದಾರೆ.
ಇದೀಗ ರೋಗಪೀಡಿತ ಮಹಿಳೆಯು ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಶವವನ್ನು ಮೀನುಗಳು ಅಲ್ಲಲ್ಲಿ ಕಚ್ಚಿ ತಿಂದಿವೆ. ಮಹಿಳೆಯ ಆತ್ಮಹತ್ಯೆ ಘಟನೆ ಬಳಿಕ ಗ್ರಾಮಸ್ಥರು 2-3 ಕಿಲೋಮೀಟರ್ ನಡೆದುಕೊಂಡು ಮಲಪ್ರಭಾ ಕಾಲುವೆಗೆ ತೆರಳಿ ಕುಡಿಯುವ ನೀರು ತರುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ