ಕುಗ್ರಾಮವಾಗಿಯೇ ಉಳಿದ ಮಾಜಿ ಸಂಸದರ ಆದರ್ಶಗ್ರಾಮ..!!!

ಮಧುಗಿರಿ

ವಿಶೇಷ ವರದಿ: ರಾಜೇಂದ್ರ ಎಂ.ಎನ್

    ಕಳೆದ ಬಾರಿ ಸಂಸದರಾಗಿದ್ದ ಎಸ್.ಪಿ ಮುದ್ದಹನುಮೇಗೌಡ ಚಿಕ್ಕದಾಳವಟ್ಟ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಗಡಿ ಗ್ರಾಮ ಜಿಲ್ಲೆ ಮತ್ತು ತಾಲ್ಲೂಕಿಗೆ ಆದರ್ಶವಾಗದೆ ಮುಂಚೆಯೇ ಇದ್ದಂತೆ ಕುಗ್ರಾಮವಾಗಿಯೇ ಉಳಿದು ಆದರ್ಶಗ್ರಾಮವೆಂಬ ಗ್ರಾಮಸ್ಥರ ಕನಸು ನುಚ್ಚು ನೂರಾಗಿ ಕೇಂದ್ರ ಸರ್ಕಾರದ ಯೋಜನೆಯೊಂದು ಹಳ್ಳ ಹಿಡಿದಂತಾಗಿದೆ.

     ಆದರ್ಶ ಗ್ರಾಮ ವೆಂಬುದು ಕೇವಲ ಸರ್ಕಾರದ ಕಡತಗಳಲ್ಲಿ ಸ್ಥಾನ ಪಡೆಯಿತೆ ಹೊರತು ಆದರ್ಶ ಗ್ರಾಮಕ್ಕಿರಬೇಕಾದ ಯೋಜನೆ, ಕಾಮಗಾರಿಗಳು ಗ್ರಾಮದ ಆದರ್ಶಗಳೆ ಅನುಷ್ಟಾನ ವಾಗದೆ ಮೂಲಭೂತ ಸೌಕರ್ಯಗಳು ಕೂದಿಲ್ಲಿ ಮರಿಚೀಕೆಯಾಗಿವೆ. ಜಿಲ್ಲೆಯ ಹಾಗೂ ತಾಲ್ಲೂಕಿನ ರಾಜಕಾರಣದ ಚುನಾವಣಾ ಸಂಧರ್ಭದಲ್ಲಿ ನಾಮಪತ್ರ ಸಲ್ಲಿಸುವ ಮುನ್ನಾ ಅಥವಾ ಪ್ರಚಾರ ಸಭೆ ಆರಂಭಿಸುವ ಮುನ್ನಾ ತಾಲ್ಲೂಕಿನ ದೇವಮೂಲೆ ಎಂದು ಪರಿಗಣಿಸಲಪಟ್ಟಿರುವ ಶ್ರೀ ಲಕ್ಷ್ಮೀ ನರಸಿಂಹನಿಗೆ ಪೂಜೆ ಸಲ್ಲಿಸುವ ಮೂಲಕ ಈ ಗ್ರಾಮದಿಂದಲೇ ಪ್ರಾರಂಬಿಸುವುದು ರಾಜಕಾರಣಿಗಳ ಸಂಪ್ರಾದಾಯವಾಗಿದೆ ಆದರೆ ಚುನಾಯಿತರಾದ ಮೇಲೆ ಗ್ರಾಮದ ಯಾವ ಅಭಿವೃದ್ಧಿ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದು ವಾಡಿಕೆಯಾಗಿದೆ.

      ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯಲ್ಲಿನ ರಾಜ್ಯದ ಗಡಿ ಗ್ರಾಮವು ಈ ಹಿಂದೆ ತುಮಕೂರು ಸಂಸದ ರಾಗಿದ್ದ ಎಸ್ ಪಿ ಮುದ್ದಹನುಮೇಗೌಡರ ಅವಧಿಯಲ್ಲಿ ಆದರ್ಶ ಗ್ರಾಮವೆಂದು ಘೋಷಣೆ ಯಾಗಿತ್ತು ಆದರೆ ಇದೂವರೆವಿಗೂ ಕೇಂದ್ರದಿಂದ ಆದರ್ಶ ಗ್ರಾಮಕ್ಕೆ ಬರಬೇಕಾದ ಸೌಲಭ್ಯಗಳೆ ಇಲ್ಲವಾಗಿದೆ.

      ಗ್ರಾಮ ಪಂಚಾಯಾತಿ ವ್ಯಾಪ್ತಿಗೆ 9 ಕಂದಾಯ ಗ್ರಾಮಗಳು ಸೇರಿದ್ದು 3390 ಪುರುಷರು ಹಾಗೂ 3247ಮಹಿಳೆಯರು ಸೇರಿದಂತೆ ಒಟ್ಟು 6637 ಜನಸಂಖ್ಯೆಯನ್ನು ಗ್ರಾಮ ಹೊಂದಿದೆ. ಆದರೆ ಗ್ರಾಮದಲ್ಲಿ ಯಾವುದೇ ಬಸ್ ನಿಲ್ದಾಣವಾಗಲಿ. ಪ್ರೌಢಶಾಲೆ. ಆಸ್ಪತ್ರೆ, ಬ್ಯಾಂಕ್, ಸಹಕಾರಿ ಬ್ಯಾಂಕ್ ಸೌಲಭ್ಯಗಳು ಇಲ್ಲವಾಗಿದೆ.

       ಗ್ರಾಮ ಪಂಚಾಯಾತಿ ಇದ್ದರೂ ಸಹ ಯಾವುದೇ ರೀತಿಯ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ರತಿ ಕೆಲಸ ಕಾರ್ಯಗಳಿಗಾಗಿ ಸುಮಾರು 45 ಕಿ.ಮೀ ದೂರದ ಮಧುಗಿರಿ ಹಾಗೂ ಐಡಿಹಳ್ಳಿಯ ನಾಡ ಕಛೇರಿಯನ್ನು ಗ್ರಾಮಸ್ಥರು ಅವಲಂಬಿಸ ಬೇಕಾಗಿದೆ. ಎಸ್ ಪಿ ಎಂ ಮಾತ್ರ ಆದರ್ಶ ಗ್ರಾಮವೆಂದು ಆಯ್ಕೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹೋದವರು ಮತ್ತೆ ಗ್ರಾಮಕ್ಕೆ ಭೇಟಿಯು ನೀಡಲಿಲ್ಲ ಎಂಬುದು ಗ್ರಾಮಸ್ಥರ ಆರೋಪ.

      16 ಮತ್ತು 17ನೇ ಲೋಕಸಭೆಯ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಆಯ್ಕೆಯಾಗಿ ಪ್ರತಿ ರಾಜ್ಯಗಳಲ್ಲಿನ ಜಿಲ್ಲಾ ವ್ಯಾಪ್ತಿಯಲ್ಲಿ ಒಂದೊಂದು ಗ್ರಾಮವನ್ನು ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳನ್ನು ಗ್ರಾಮಗಳಿಗೆ ಒದಗಿಸುವ ಉದ್ದೇಶದಿಂದ ಆದರ್ಶ ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು ಆದರೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿಕ್ಕದಾಳವಟ್ಟ ಗ್ರಾಮವು ಲೋಕಸಭಾ ಸದಸ್ಯರ ಆದರ್ಶ ಗ್ರಾಮವೆಂದು ಹೆಸರಿಗೆ ಮಾತ್ರ ಆಯ್ಕೆಯಾಗಿ ಕಾರ್ಯಕ್ರಮದ ಉದ್ಘಾಟನೆಯ ಭಾಗ್ಯವನ್ನು ಗ್ರಾಮ ಕಂಡಿತ್ತು.

      ಜಿಲ್ಲೆಯಲ್ಲಿನ ಈ ಆದರ್ಶ ಗ್ರಾಮಕ್ಕಾಗಿ ಕೇಂದ್ರ ಸರಕಾರ ಮೀಸಲಿಟ್ಟಿದ್ದ ಯಾವುದೇ ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿಯಿಂದ ಸೊರಗಿದೆ. ಕಾರಣ ಎಸ್ ಪಿ ಎಂ ರವರ ಅವಧಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದರಿದ್ದು ಅನುದಾನ ಬಿಡುಗಡೆಯಾಗಿಲ್ಲವೆಂಬುದು ಆರೋಪ ಆದರೆ ಈಗ ಕೇಂದ್ರ ಮತ್ತು ಜಿಲ್ಲೆಯಲ್ಲಿ ಬಿಜೆಪಿಯ ಸಂಸದರು ಆಯ್ಕೆಯಾಗಿದ್ದು ನಮ್ಮ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸಲು ಸಂಸದ ಜಿ.ಎಸ್ ಬಸವರಾಜು ಮುಂದಾಗ ಬೇಕೆನ್ನುವ ಕೂಗು ಸ್ಥಳೀಯರಿಂದ ಕೇಳಿ ಬರುತ್ತಿದೆ.

        ಗ್ರಾಮದಲ್ಲಿನ ಮೋರಿಗಳು ಗಬ್ಬೆದ್ದು ನಾರುತ್ತಿವೆ. ಕುಡಿಯುವ ನೀರಿಗೂ ತಾತ್ವಾರ ಎದುರಾಗಿದೆ ಇರುವ ಅಂಗನವಾಡಿ ಮತ್ತು ಆಸ್ಪತ್ರೆ ಮುಂದೆ ಶುಚಿತ್ವ ಮರೆಯಾಗಿದೆ. ಆದರೆ ಗ್ರಾಮದಲ್ಲಿ ನೀರಿಗೂ ಭರವಿದ್ದರೂ ಕುಡಿಯುವ ಮಧ್ಯೆಗೆ ಮಾತ್ರ ಬರವಿಲ್ಲ ಪಾಳು ಬಿದ್ದಿರುವ ಹಳೆಯ ಶಾಲಾ ಕೊಠಡಿಗಳಲ್ಲಿ ಮತ್ತು ದೇವಾಲಯಗಳ ಸಮೀಪವೇ ವಿವಿಧ ಕಂಪನಿಗಳಿಗೆ ಸೇರಿದ ಮಧ್ಯೆದ ಟೆಟ್ರಾ ಪಾಕೆಟ್‍ಗಳೇ ಸಾಕ್ಷಿಯಾಗಿದ್ದು ಇಲ್ಲಿನ ಮಧ್ಯೆ ಪ್ರಿಯರು ಮಾತ್ರ ಇಡೀ ತಾಲ್ಲೂಕಿಗೆ ಆದರ್ಶವಾಗುವುದರಲ್ಲಿ ಯಾವುದೇ ಸಂದೇಹಗಳಿಲ್ಲ.

      ಗ್ರಾಮದಲ್ಲಿ ಸರ್ಕಾರಿ ಆರ್ಯುವೇದದ ಚಿಕಿತ್ಸಾಲಯ ವಿದ್ದರೂ ಸಹ ವೈದ್ಯರು ಮಾತ್ರ ಸರಿಯಾಗಿ ಜನ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲಾ ಹಾಗೂ ಯಾವುದೆ ಚಿಕಿತ್ಸೆಗಳು ಲಭ್ಯವಿಲ್ಲ. ಸಣ್ಣ ಪುಟ್ಟ ಚಿಕಿತ್ಸೆಗಾಗಿ ಸುಮಾರು 3ಕಿ.ಮೀ ದೂರದ ಮುದ್ದನೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗ ಬೇಕಾದ ಅನಿವಾರ್ಯತೆ ಗ್ರಾಮಸ್ಥರದ್ದು. ಇನ್ನೂ ಗ್ರಾಮದಲ್ಲಿ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣಕ್ಕಾಗಿ ಸುಮಾರು 6ಕಿ.ಮೀ ದೂರದ ಪೋಲೇನಹಳ್ಳಿ .ತೊಂಡೋಟಿ ಗ್ರಾಮಗಳಲ್ಲಿರುವ ಶಾಲೆಗಳಿಗೆ ಹೋಗಲೇ ಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದು.

      ಗ್ರಾಮದಲ್ಲಿನ ಅಂಚೆ ಇಲಾಖೆ ಹಾಗೂ ಗ್ರಂಥಾಲಯಗಳು ಬಾಡಿಗೆ ಕಟ್ಟಡಗಳಲ್ಲಿವೆ ಸ್ವಂತ ಕಟ್ಟಡ ಬೇಕಾಗಿದೆ. ತಾಲ್ಲೂಕಿನ 35 ಅಂಚೆ ಕಛೇರಿಗಳಿಗೆ ಕೊಠಡಿ ಅಥವಾ ಸ್ಥಳಾವಕಾಶ ಮಾಡಿಕೊಡುವಂತೆ 2018ರ ಆ.9ರಂದು ಜಿ.ಪಂ ಸಿಇಓ ಆದೇಶಿಸಿದ್ದರು ಸಹ ಇದೂವರೆವಿಗೂ ಅಂಚೆ ಕಛೇರಿಗಳಿಗೆ ವ್ಯವಸ್ಥೆ ಕಲ್ಪಿಸಲು ತಾಪಂ ಇಓ ಮುಂದಾಗಿಲ್ಲ.

     ನಮ್ಮ ಗ್ರಾಮ ಆದರ್ಶ ಗ್ರಾಮವೆಂದು ಕೆ.ಎನ್ ರಾಜಣ್ಣ ನವರು ನೇತೃತ್ವದಲ್ಲಿ ಆಯ್ಕೆಯಾಗಿತ್ತು ಆದರೆ ಸಂಸದರು ಗ್ರಾಮವನ್ನು ಕೈ ಬಿಟ್ಟಿದ್ದರು ಆದರೆ ಕೆ.ಎನ್. ರಾಜಣ್ಣ ಸುಮಾರು ಎರಡು ಕೋಟಿಯಷ್ಟು ಹಣ ಅನುದಾನವನ್ನು ತಂದು ಕಾಲನಿ ಹಾಗೂ ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ. ಮುಖಂಡ ನಂಜಪ್ಪ

      ಕಳೆದ ಬಾರಿ ಕಾಂಗ್ರೆಸ್ ಸಂಸದರಿದ್ದರು ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತ ಪಕ್ಷ ವಾಗಿದ್ದರು ಗ್ರಾಮ ಮಾತ್ರ ಅಭಿವೃದ್ಧಿ ಕಾಣಲಿಲ್ಲ. ಈ ಬಾರಿ ಕೇಂದ್ರ ಮತ್ತು ಜಿಲ್ಲೆಯಲ್ಲಿ ಬಿಜೆಪಿ ಪಕ್ಷದವರು ಆಡಳಿತ ನಡೆಸುತ್ತಿರುವುದರಿಂದ ಗ್ರಾಮವನ್ನು ಲೋಕಸಭಾ ಸದಸ್ಯ ಜಿ.ಎಸ್ ಬಸವರಾಜು ಅಭಿವೃದ್ಧಿ ಪಡಿಸುತ್ತಾರೆ ಎಂಬ ಭರವಸೆ ಇದೆ. ಬಿಜೆಪಿ ಮುಖಂಡ ವೆಂಕಟರಾಮರೆಡ್ಡಿ.

     ಗ್ರಾಮಕ್ಕೆ ಸರಕಾರಿ ಬಸ್ ಸೌಲಭ್ಯ ಹಾಗೂ ಫ್ರೌಡಶಾಲೆ, ಬ್ಯಾಂಕ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲಿರುವ ಆಸ್ಪತ್ರೆಗೆ ವೈದ್ಯರು ಸರಿಯಾಗಿ ಬರುತ್ತಿಲ್ಲಾ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಹೋದ ಶಾಸಕ ಕಳೆದ ಒಂದು ವರ್ಷದಿಂದ ಗ್ರಾಮಕ್ಕೆ ಭೇಟಿ ನೀಡಿಲ್ಲ ಸಮಸ್ಯೆಗಳನ್ನು ಆಲಿಸಿಲ್ಲ. ಇಲ್ಲಿ ಹೇಳೋರಿಲ್ಲಾ ಕೇಳೋರಿಲ್ಲಾ ಗ್ರಾಮದಲ್ಲಿ ಕಸದ ನಿರ್ವಹಣೆಗಾಗಿ ತೊಟ್ಟಿಗಳನ್ನು ಖರೀದಿಸಿ ತಂದು ಎಲ್ಲೆಂದರಲ್ಲಿ ಎಸೆದಿದ್ದಾರೆ ಆದರೆ ಅವುಗಳನ್ನು ಸರಿಯಾಗಿ ಗ್ರಾಮ ಪಂಚಾಯತಿ ಯವರು ನಿರ್ವಹಣೆ ಮಾಡದೆ ವ್ಯರ್ಥ ಮಾಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap